ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 207ರ ಚಿಕ್ಕ ಅಮಾನಿಕೆರೆ ತಿರುವಿನಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಸೇರಿದಂತೆ ಘನತ್ಯಾಜ್ಯವನ್ನು ಅನಧಿಕೃತವಾಗಿ ಸುರಿಯುತ್ತಿರುವ ಕುರಿತು ಪತ್ರಿಕೆಯಲ್ಲಿ ವರದಿಯಾಗಿತ್ತು.

 ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 207ರ ಚಿಕ್ಕ ಅಮಾನಿಕೆರೆ ತಿರುವಿನಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಸೇರಿದಂತೆ ಘನತ್ಯಾಜ್ಯವನ್ನು ಅನಧಿಕೃತವಾಗಿ ಸುರಿಯುತ್ತಿರುವ ಕುರಿತು ಪತ್ರಿಕೆಯಲ್ಲಿ ವರದಿಯಾಗಿತ್ತು. ಈ ಬಗ್ಗೆ ಮುಖ್ಯಮಂತ್ರಿ ಸಚಿವಾಲಯದ ವಿಶೇಷ ಕರ್ತವ್ಯಾಧಿಕಾರಿ ಅವರು ಸ್ಪಂದಿಸಿ ತ್ಯಾಜ್ಯ ತೆರವು ಮಾಡಿ ಅನುಪಾಲನಾ ವರದಿ ಸಲ್ಲಿಸಲು ಹೊಸಕೋಟೆ ತಾಲೂಕು ಪಂಚಾಯತಿಗೆ ಸೂಚಿಸಿದ್ದರು. ಈ ಸಂಬಂಧ ತಾಲಕು ಪಂಚಾಯ್ತಿ ಅಧಿಕಾರಿಗಳು ಕ್ರಮ ಕೈಗೊಂಡು ಸ್ಥಳ ಪರಿಶೀಲನೆ ನಡೆಸಿ ತ್ಯಾಜ್ಯವನ್ನು ತೆರವು ಮಾಡಲಾಗಿದೆ.

ಸಂಪೂರ್ಣವಾಗಿ ತೆರವುಗೊಳಿಸಿ, ಜಾಗ ಸ್ವಚ್ಛ

ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯವನ್ನು ತಾಲೂಕು ಪಂಚಾಯತಿ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಸ್ವಚ್ಛತಾ ಸಿಬ್ಬಂದಿ ಅವರ ನೆರವಿನಿಂದ ಸಂಪೂರ್ಣವಾಗಿ ತೆರವುಗೊಳಿಸಿ, ಜಾಗವನ್ನು ಸ್ವಚ್ಛಗೊಳಿಸಲಾಗಿದೆ. ಹೆದ್ದಾರಿ ಬದಿಯಲ್ಲಿ ಕಸ ಚೆಲ್ಲುವುದನ್ನು ತಡೆಯಲು ನಿಯಮಿತ ಗಸ್ತುಪಡೆಯನ್ನು ನೇಮಿಸಲಾಗಿದ್ದು, ಸಾರ್ವಜನಿಕರಿಗೆ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ.

ಅನಧಿಕೃತವಾಗಿ ತ್ಯಾಜ್ಯ ಸುರಿಯುವವರ ವಿರುದ್ಧ ದಂಡ ವಿಧಿಸಲು ಕ್ರಮ ವಹಿಸಲಾಗಿದೆ. ಕಸ ಹಾಕುವವರ ಪತ್ತೆಗೆ ಸೌರ ಶಕ್ತಿ ಆಧಾರಿತ ಸಿಸಿಟೀವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ತ್ಯಾಜ್ಯವನ್ನು ಸುರಿದ್ದಿದ್ದ ಸ್ಥಳದಲ್ಲಿ ಸ್ವಚ್ಛತೆಯನ್ನು ಕಾಪಾಡಲಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಜೆಸಿಬಿ ಹಾಗೂ ಟ್ರ್ಯಾಕ್ಟರ್‌ಗಳನ್ನು ಬಳಸಿ ರಸ್ತೆಯಲ್ಲಿ ಚೆಲ್ಲಿದ್ದ ಕಸವನ್ನು ತೆರವು ಮಾಡಲಾಗಿದೆ. ಯಂತ್ರೋಪಕರಣ ಬಳಕೆಯ ಬಳಿಕ ಉಳಿದ ತ್ಯಾಜ್ಯವನ್ನು ಪೌರಕಾರ್ಮಿಕರು ಶ್ರಮವಹಿಸಿ ತೆರವು ಮಾಡಿದರು.

ತ್ಯಾಜ್ಯ ನಿರ್ವಹಣೆ ವ್ಯವಸ್ಥೆ: 

ತಾಲೂಕಿನ ವ್ಯಾಪ್ತಿಯಲ್ಲಿ ಮನೆಮನೆಯಿಂದ ತ್ಯಾಜ್ಯ ಸಂಗ್ರಹಣೆ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸಲಾಗಿದ್ದು, ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಹಾಗೆಯೇ ಬೀದಿನಾಯಿಗಳ ಹಾವಳಿ ತಪ್ಪಿಸಲು ನಾಯಿಗಳ ಸಂತಾನ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೊಸಕೋಟೆ ತಾಲೂಕು ಪಾಂಚಾಯಿತಿ ಇಒ ಅಧಿಕಾರಿ ಅನುಪಾಲನಾ ವರದಿಯಲ್ಲಿ ತಿಳಿಸಿದ್ದಾರೆ.