ರಾಮನಗರ: ಹವಾಮಾನ ವೈಪರಿತ್ಯದಿಂದಾಗಿ ಈ ಬಾರಿಯೂ ಮಾವು ಇಳುವರಿ ತೀವ್ರ ಕುಸಿತ ಕಂಡಿದ್ದು, ಎಪಿಎಂಸಿ ಮಾರುಕಟ್ಟೆಗಳಲ್ಲಿ ಮಾವಿನ ಆವಕವೂ ಕಡಿಮೆಯಾಗಿರುವ ಕಾರಣ ದರ ಹೆಚ್ಚಿದೆ.

ಜಿಲ್ಲೆಯಲ್ಲಿ ಪ್ರಮುಖ ತೋಟಗಾರಿಕಾ ಬೆಳೆಯಾದ ಮಾವು ಸದ್ಯ ಬೆಳೆಗಾರರ ಕೈ ಹಿಡಿದಿಲ್ಲ. ಪ್ರಾರಂಭದಲ್ಲಿ ಮಾವಿನ ಮರಗಳಲ್ಲಿ ವ್ಯಾಪಕವಾಗಿ ಹೂ ಬಿಟ್ಟಿತ್ತು. ಹೀಗಾಗಿ ಮಾವು ಬೆಳೆಗಾರರು ಉತ್ತಮ ಬೆಳೆ ಬರುವ ನಿರೀಕ್ಷೆಯಲ್ಲಿದ್ದರು. ಆದರೆ, ಹವಾಮಾನ ವೈಪರಿತ್ಯದಿಂದಾಗಿ ಹೂ ಹಾಳಾಗಿ ಕಾಯಿ ಕಟ್ಟಿಲ್ಲ. ಸರಿಯಾದ ಇಬ್ಬನಿ ಬೀಳದೆ, ಮಳೆ ಕೂಡ ಬಾರದೇ ಮರಗಳಲ್ಲಿ ಕಾಯಿ ಕಟ್ಟಿಲ್ಲ. ಅರ್ಧದಷ್ಟು ಬೆಳೆ ಕೈಕೊಟ್ಟಿದೆ.

ಜಿಲ್ಲೆಯಲ್ಲಿ ಸರಾಸರಿ 27,638 ಹೆಕ್ಟೇರ್​ ಪ್ರದೇಶದಲ್ಲಿ ಮಾವು ಬೆಳೆ ಇದ್ದು, ರಾಮನಗರ 10,534, ಚನ್ನಪಟ್ಟಣ 4,896, ಕನಕಪುರ 4,774, ಮಾಗಡಿ 6,695, ಹಾರೋಹಳ್ಳಿ 738 ಹೆಕ್ಟೇರ್​ ಪ್ರದೇಶದಲ್ಲಿ ಮಾವು ಇದೆ. ಈ ಬಾರಿ ಮಾವಿನಲ್ಲಿ ಹೆಚ್ಚಿನ ಫಸಲು ಜಿಲ್ಲೆಯಲ್ಲಿ ಕಾಣುತ್ತಿಲ್ಲ. ವಿರಳವಾಗಿ ಹೂವು ಬಿಟ್ಟಿದ್ದ ತೋಟಗಳಲ್ಲಿ ಫಸಲು ಬೆರೆಳೆಣಿಕೆಯಷ್ಟಿದೆ. ಬಿಸಿಲ ಝಳಕ್ಕೆ ಹೂವು ಉದುರಿ ಕಾಯಿ ಕಚ್ಚದೆ ಮಾವಿನತೋಟಗಳು ಬರಡಾಗಿವೆ. ಮಾವಿನ ತೋಟ ಗುತ್ತಿಗೆ ಪಡೆದ ಮಾರಾಟಗಾರರು ಮತ್ತು ರೈತರು ಆರ್ಥಿಕವಾಗಿ ನಷ್ಟ ಅನುಭವಿಸುವ ಭೀತಿ ಕಾಡುತ್ತಿದೆ.

ಬಿಸಿಲಿನ ಝಳ, ಜೋನಿ, ಬೂದು ರೋಗ ಹೊಡೆತದಿಂದ ಶೇ.10 ಫಸಲು ಸಿಗುವುದು ಕಷ್ಟವಾಗಿದೆ. ಮರಗಳಲ್ಲಿ ವಿರಳವಾಗಿ ಕಾಯಿಗಳು ಕಚ್ಚಿದ್ದು, ಅವು ದಪ್ಪವಾಗಿಲ್ಲ. ಈವರೆಗೆ ಔಷಧಿಗಾಗಿ ಮಾಡಿರುವ ಖರ್ಚಿನ ಹಣವೂ ಸಿಗುತ್ತದೆಯೊ ಇಲ್ಲವೊ ಎಂಬ ಆತಂಕ ಬೆಳೆಗಾರರದ್ದಾಗಿದೆ.

ಮಾರುಕಟ್ಟೆಗೆ ಮಾವಿನ ಆಗಮನ:


ರಾಮನಗರ-ಚನ್ನಪಟ್ಟಣ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರ್ಚ್ ಮೊದಲ ವಾರವೇ ಮಾವು ಮಂಡಿಗಳು ತೆರೆಯುತ್ತಿದ್ದವು. ಆದರೆ ಈ ಬಾರಿ ಫಸಲಿನ ಕೊರತೆಯಿಂದ ಮಾರ್ಚ್ ಕೊನೆಯ ವಾರದಲ್ಲಿ ಒಂದೊಂದೆ ಮಾವಿನ ಮಂಡಿಗಳು ಬಾಗಿಲು ತೆರೆಯುತ್ತಿವೆ. ಪ್ರಸ್ತುತ ನಾಲ್ಕೈದು ಮಾವಿನ ಮಂಡಿಗಳು ಕಾರ್ಯಾರಂಭ ಮಾಡಿವೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಮಾವು ಪ್ರತಿ ವರ್ಷ ಕೋಲಾರ ಮಾರುಕಟ್ಟೆಗೂ ಮೊದಲು ಮಾರುಕಟ್ಟೆಯನ್ನು ಪ್ರವೇಶಿಸುತ್ತದೆ. ಇಲ್ಲಿನ ಮಾವಿನ ವಿವಿಧ ದೇಶ ಹಾಗೂ ರಾಜ್ಯದಲ್ಲಿ ಉತ್ತಮ ಬೇಡಿಕೆ ಇದೆ. ಬಾದಾಮಿ, ರಸಪೂರಿ, ಸೆಂಧೂರ ಮಾವಿಗೆ ಹೆಚ್ಚಿನ ಬೇಡಿಕೆ ಇದೆ. ಈಗಾಗಲೇ ರೈತರು ಮಾವಿನ ಕಾಯಿಗಳನ್ನು ಮಾರಾಟಕ್ಕೆ ತರುತ್ತಿದ್ದಾರೆ.

ಮಂಡಿ ವರ್ತಕರು ರೈತರಿಂದ ಮಾವು ಖರೀದಿಸಿ ಬೆಂಗಳೂರು ಮಾರುಕಟ್ಟೆ ಸೇರಿದಂತೆ ಮಹಾರಾಷ್ಟ್ರ, ಬಾಂಬೆ, ಹರಿಯಾಣ ರಾಜ್ಯಗಳ ಜೊತೆಗೆ ಮಾವು ಉತ್ಪನ್ನ, ತಂಪು ಪಾನೀಯ ಕಾರ್ಖಾನೆಗಳಿಗೂ ಬೆಂಗಳೂರು ದಕ್ಷಿಣ ಜಿಲ್ಲೆಯ ಮಾವು ಸರಬರಾಜಾಗುತ್ತದೆ.

ದರ ಹೆಚ್ಚಾಗುವ ನಿರೀಕ್ಷೆ :

ಮಾರುಕಟ್ಟೆಯಲ್ಲಿ ಬಾದಾಮಿ 150 ರಿಂದ 300, ರಸಪೂರಿ 80 ರಿಂದ 140, ಸೆಂಧೂರ 40 ರಿಂದ 100 ಮತ್ತು ತೋತಾಪುರಿ 40 ರಿಂದ 60 ರೂ.ಗಳ ಆಸುಪಾಸಿನಲ್ಲಿ ಮಾರಾಟವಾಗುತ್ತಿವೆ. ಮಾರುಕಟ್ಟೆಗೆ ಹೆಚ್ಚಿನ ದಾಸ್ತಾನು ಬಂದರೆ ಹೊರ ರಾಜ್ಯದ ವ್ಯಾಪಾರಿಗಳು ಬಂದು ಮಾವು ಖರೀದಿಸುವುದರಿಂದ ಒಂದಷ್ಟು ಬೆಲೆಯಲ್ಲಿ ಏರಿಳಿತ ಕಾಣಬಹುದು. ಉತ್ತಮ ಫಸಲು ಬಂದರೆ ಇನ್ನೂ ಹೆಚ್ಚಿನ ದರವೂ ಏರಬಹುದು.

ಜಿಲ್ಲೆಯ ಮಾವಿಗೆ ಹೊರ ರಾಜ್ಯದಲ್ಲಿ ಹೆಚ್ಚಿನ ಬೇಡಿಕೆ ಇದೆ. ಬಾಂಬೆ, ದೆಹಲಿ, ಮಹಾರಾಷ್ಟ್ರ ಮತ್ತಿತ್ತರ ಕಡೆ ಉತ್ತಮ ಹಣ್ಣಿನ ತೊಟ್ಟಿನ ಕಾಯಿಗಳನ್ನು ರೈತರಿಂದ ಕೊಂಡು ಈ ವೇಳಗಾಗಲೇ ಹಣ್ಣಿಗೆ ಕಳುಹಿಸಲಾಗುತ್ತಿತ್ತು. ಹೊರ ರಾಜ್ಯಕ್ಕೆ ಕಳಿಸುವ ಮಾವಿನಕಾಯಿಗಳು ಉತ್ತಮವಾಗಿರಬೇಕು. ಈ ವರ್ಷ ಜಿಲ್ಲೆಯಲ್ಲಿ ಮಾವು ಫಸಲು ಉತ್ತಮವಾಗಿರದ ಕಾರಣ ಮಾರುಕಟ್ಟೆಗೆ ಬಂದ ಕಾಯಿಗಳನ್ನು ಸ್ಥಳೀಯವಾಗಿ ವ್ಯಾಪಾರ ಮಾಡಲಾಗುತ್ತಿದೆ ಎನ್ನುತ್ತಾರೆ ಮಾವಿನ ವ್ಯಾಪಾರಿಗಳು.

ಬಾಕ್ಸ್ ...............

ಮಾವು ಇಳುವರಿ ಕುಸಿತ:

ಕೀಟಬಾಧೆ, ಮಳೆ ಕೊರತೆ, ಜೋನಿ, ಬೂದು ರೋಗ, ವಾತಾವರಣ ಬದಲಾವಣೆ ಭೂಮಿಯಲ್ಲಿ ತೇವಾಂಶ ಕೊರತೆಯಿಂದ, ಬಿಸಿಲಿನ ತಾಪಕ್ಕೆ ಹೂ ಉದುರಿ ಕಾಯಿ ಕಚ್ಚಿಲ್ಲ. ಜೊತೆಗೆ ಜೋನಿರೋಗಕ್ಕೆ ಔಷಧ ಸಿಂಪಡಣೆ ಮಾಡಿದರೂ ಕೀಟ ಬಾಧೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಾವು ಫಸಲು ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ಈ ಬಾರಿ ಹೆಚ್ಚಿನ ಫಸಲು ಮಾರುಕಟ್ಟೆ ಪ್ರವೇಶಿಸುತ್ತದೆಯೇ ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ.

ಕೋಟ್ ..................

ಬೇಸಿಗೆ ಅಕಾಲಿಕ ಮಳೆ, ನಾನಾ ರೋಗಗಳ ಹೊಡೆತಕ್ಕೆ ಮಾವು ಇನ್ನೂ ಹೆಚ್ಚಾಗಿ ಮಾರುಕಟ್ಟೆಗೆ ಬಂದಿಲ್ಲ. ಈ ವರ್ಷ ಮಾವಿನ ಇಳುವರಿ ಕಡಿಮೆ ಇದ್ದು, ಮಾರುಕಟ್ಟೆಯಲ್ಲಿ ಹಣ್ಣುಗಳು ಸಹಜವಾಗಿ ದುಬಾರಿಯಾಗಿವೆ. ಈಗಷ್ಟೇ ಸೀಜನ್ ಆರಂಭಗೊಂಡಿದ್ದು, ಪ್ರಸ್ತುತವಾಗಿ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ಈಗಾಗಲೇ ಮಾರುಕಟ್ಟೆಗೆ ಸೆಂಧೂರ ಕಾಯಿ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಬಾದಾಮಿ, ರಸಪೂರಿ ಮಾವು ಹೆಚ್ಚಾಗಿ ಮಾರುಕಟ್ಟೆ ಪ್ರವೇಶಿಸಲಿದೆ.

-ಸೈಯದ್ ಮತೀನ್ , ಮ್ಯಾಂಗೊ ಟ್ರೇಡರ್ ಮಾಲೀಕರು.

30ಕೆಆರ್ ಎಂಎನ್ 1,2.ಜೆಪಿಜಿ

1.ರಾಮನಗರದ ಮಾವಿನ ಮಂಡಿಯಲ್ಲಿ ಬಂದಿರುವ ಮಾವು.

2.ರಾಮನಗರದ ಮಂಡಿಯಲ್ಲಿ ಮಾವು ವ್ಯಾಪಾರ ಪ್ರಾರಂಭವಾಗಿರುವುದು.