ಸೋಮನಾಥೇಶ್ವರ, ಶಿವಪ್ಪ ಮುತ್ಯಾನ ದೇವಸ್ಥಾನಕ್ಕೆ ಕಳಸಾರೋಹಣ

| Published : Apr 09 2024, 12:47 AM IST

ಸೋಮನಾಥೇಶ್ವರ, ಶಿವಪ್ಪ ಮುತ್ಯಾನ ದೇವಸ್ಥಾನಕ್ಕೆ ಕಳಸಾರೋಹಣ
Share this Article
  • FB
  • TW
  • Linkdin
  • Email

ಸಾರಾಂಶ

ಬಸವನಬಾಗೇವಾಡಿ ತಾಲೂಕಿನ ಜಾಯವಾಡಗಿ ಗ್ರಾಮದ ಆರಾಧ್ಯದೈವ ಸೋಮನಾಥೇಶ್ವರ, ಶಿವಪ್ಪ ಮುತ್ಯಾರ ಜಾತ್ರಾಮಹೋತ್ಸವ ಅಂಗವಾಗಿ ಸೋಮವಾರ ಜೀರ್ಣೋದ್ಧಾರಗೊಂಡ ದೇವಸ್ಥಾನಕ್ಕೆ ಕಳಸಾರೋಹಣವು ಸಂಭ್ರಮ, ಸಡಗರದಿಂದ ಜರುಗಿತು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ

ತಾಲೂಕಿನ ಜಾಯವಾಡಗಿ ಗ್ರಾಮದ ಆರಾಧ್ಯದೈವ ಸೋಮನಾಥೇಶ್ವರ, ಶಿವಪ್ಪ ಮುತ್ಯಾರ ಜಾತ್ರಾಮಹೋತ್ಸವ ಅಂಗವಾಗಿ ಸೋಮವಾರ ಜೀರ್ಣೋದ್ಧಾರಗೊಂಡ ದೇವಸ್ಥಾನಕ್ಕೆ ಕಳಸಾರೋಹಣವು ಸಂಭ್ರಮ, ಸಡಗರದಿಂದ ಜರುಗಿತು.

ತಾಲೂಕಿನ ಕಾನ್ನಾಳ ಗ್ರಾಮದ ಸಜ್ಜನ ಬಂಧುಗಳು ಹಾಗೂ ಗ್ರಾಮದ ಸದ್ಭಕ್ತರಿಂದ ದೇವಸ್ಥಾನದ ಕಳಸ ಹಾಗೂ ಸಕಲ ವಾದ್ಯಮೇಳದೊಂದಿಗೆ ಜಾಯವಾಡಗಿ ಗ್ರಾಮದಿಂದ ಪಲ್ಲಕ್ಕಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸಿದ ನಂತರ ಭಕ್ತರ ಜಯಘೋಷದ ಮಧ್ಯೆ ದೇವಸ್ಥಾನದ ಕಳಸಾರೋಹಣ ನೆರವೇರಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಮೆರವಣಿಗೆಯಲ್ಲಿ ಸಂಗಪ್ಪ ಸಜ್ಜನ, ಶರಣಪ್ಪಮಾಸ್ತರ ಸಜ್ಜನ, ರಾಜಶೇಖರ ಸಜ್ಜನ, ಕುಮಾರ ನಾಗರೆಡ್ಡಿ, ಸಿದ್ದು ಹೂಗಾರ, ಚಂದ್ರಶೇಖರ ನಾಗರೆಡ್ಡಿ, ಮಂಜು ಈಳಗೇರ, ನೀಲಪ್ಪ ಮಂತ್ರಿ, ಸಿದ್ರಾಮ ಕಲ್ಲೂರ, ಚಂದಪ್ಪ ಕಾಮನಹಟ್ಟಿ, ರಾಜಶೇಖರ ಪಾಟೀಲ, ಮಹಾದೇವಪ್ಪಗೌಡ ಬಿರಾದಾರ, ಪರಶುರಾಮ ಪೂಜಾರಿ ಇತರರು ಇದ್ದರು. ರಾತ್ರಿ ಪಾಲಭಾವಿಯ ಬ್ರಹ್ಮಲಿಂಗೇಶ್ವರ ನಾಟ್ಯ ಸಂಘದಿಂದ ಯಾರ ವಿಶ್ವಾಸ ಯಾರಿಗೆ ಇಲ್ಲ ನಾಟಕ ಪ್ರದರ್ಶನಗೊಂಡಿತು.

ಇಂದು ರಥೋತ್ಸವಃ ಪ್ರತಿ ವರ್ಷ ಯುಗಾದಿ ಪಾಢ್ಯದಂದು ನಡೆಯುವ ಸೋಮನಾಥೇಶ್ವರ, ಶಿವಪ್ಪ ಮುತ್ಯಾರ ರಥೋತ್ಸವ ಏ.೯ರಂದು ನಡೆಯಲಿದೆ. ಬೆಳಗ್ಗೆ ತೇರಿನ ಶೃಂಗಾರ ನಂತರ ಬ್ಯಾಕೋಡ ಗ್ರಾಮಸ್ಥರಿಂದ ಬರುವ ಕಳಸ ಏರಿಸುವುದು. ಸೋಲವಾಡಗಿ ಗ್ರಾಮಸ್ಥರಿಂದ ರಥದ ಮಿಣಿ, ಅಗಸಬಾಳ ಗ್ರಾಮಸ್ಥರಿಂದ ರಥದ ಛತ್ರಿ ಚಾಮರ ಆಗಮನವಾದ ನಂತರ ಸಂಜೆ ೫ ಗಂಟೆಗೆ ವಿವಿಧ ಶ್ರೀಗಳ ಸಾನ್ನಿಧ್ಯದಲ್ಲಿ ರಥೋತ್ಸವ ಜರುಗಲಿದೆ. ನಂತರ ವಿವಿಧ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ ಎಂದು ಜಾತ್ರಾ ಉತ್ಸವ ಸಮಿತಿಯವರು ತಿಳಿಸಿದ್ದಾರೆ.