ಚಿತ್ರದುರ್ಗದ ನಂತರ ಪ್ರತಿ ತಾಲೂಕಲ್ಲೂ ಬಂದ್

| Published : Jan 21 2024, 01:31 AM IST

ಸಾರಾಂಶ

ಚಿತ್ರದುರ್ಗ ಬಂದ್ ನಂತರ ಪ್ರತಿ ತಾಲೂಕಲ್ಲೂ ಬಂದ್ ಆಚರಿಸುವುದರ ಮೂಲಕ ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಕಾರ್ಯಾನುಷ್ಠಾನ ಮಾಡುವಂತೆ ಕೇಂದ್ರ ಹಾಗೂ ರಾಜ್ಯಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು.

ಚಿತ್ರದುರ್ಗ: ಚಿತ್ರದುರ್ಗ ಬಂದ್ ನಂತರ ಪ್ರತಿ ತಾಲೂಕಲ್ಲೂ ಬಂದ್ ಆಚರಿಸುವುದರ ಮೂಲಕ ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಕಾರ್ಯಾನುಷ್ಠಾನ ಮಾಡುವಂತೆ ಕೇಂದ್ರ ಹಾಗೂ ರಾಜ್ಯಸರ್ಕಾರದ ಮೇಲೆ ಒತ್ತಡ ಹಾಕಲಾಗುವುದೆಂದು ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಹೇಳಿದರು.

ಜ.23 ಮಂಗಳವಾರ ಚಿತ್ರದುರ್ಗ ಬಂದ್ ಆಚರಣೆಗೆ ಸಂಬಂಧಿಸಿದಂತೆ ಶನಿವಾರ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು.

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಸೀಮ ನಿರ್ಲಕ್ಷ್ಯದಿಂದಾಗಿ ಕುಂಟುತ್ತಾ ಸಾಗಿದೆ. ರಾಜ್ಯದ ಯಾವುದೇ ನೀರಾವರಿ ಯೋಜನೆಗಳು ಪೂರ್ಣಗೊಳ್ಳಲು ಇಷ್ಟೊಂದು ಸುದೀರ್ಘ ಸಮಯ ತೆಗೆದುಕೊಂಡಿಲ್ಲ. ನಮ್ಮನಾಳುವ ಸರ್ಕಾರಗಳ ಇಚ್ಛಾಶಕ್ತಿ ಕೊರತೆ, ರೈತ ವಿರೋಧಿ ನಿಲವು, ಸುಳ್ಳಿನ ರಾಜಕಾರಣ ಇದಕ್ಕೆ ಪ್ರಮುಖ ಕಾರಣ ಎಂದು ದೂರಿದರು.

ಅಜ್ಜಂಪುರ ಅಬ್ಬಿನಹೊಳಲು ಬಳಿ 1.5 ಕಿಮೀ ಭೂ ಸ್ವಾಧೀನಕ್ಕೆ ಅಡ್ಡಿಯಾಗಿದ್ದು, ರಾಜಕಾರಣಿಗಳೇ ತೊಡರುಗಾಲು ಹಾಕಿದ್ದಾರೆ. ಕಳೆದ 8 ವರ್ಷಗಳಿಂದ 1.5 ಕಿ.ಮೀ ಭೂಮಿ ಸ್ವಾಧೀನ ಮಾಡಿಕೊಳ್ಳಲು ಸಾಧ್ಯವಾಗದೇ ಇರುವುದು ನಾಚಿಕೆಗೇಡಿನ ಸಂಗತಿ. ಓರ್ವ ಶಾಸಕನ ಮುಂದೆ ಇಡೀ ಸರ್ಕಾರವೇ ಮಂಡಿಯೂರಿರುವುದು ಪ್ರಜಾಪ್ರಭುತ್ವದ ದುರಂತ. 1.5 ಕಿಮೀ ಭೂ ಸ್ವಾಧೀನವಾಗಿದ್ದರೆ ಕಳೆದ ವರ್ಷವೇ ಇಡೀ ಹೊಳಲ್ಕೆರೆ ತಾಲೂಕಿನ ಕೆರೆಗಳ ತುಂಬಿಸಬಹುದಿತ್ತು. ಎತ್ತಿನಹೊಳೆ ಯೋಜನೆಗೆ ದುಡ್ಡು ಸುರಿಯುತ್ತಿರುವ ರಾಜ್ಯ ಸರ್ಕಾರ ಭದ್ರಾಮೇಲ್ದಂಡೆ ಯೋಜನೆ ಉದಾಸೀನ ತೋರಿದೆ. ಈ ಭಾಗದ ಜನಪ್ರತಿನಿಧಿಗಳು ಹೇಡಿತನ, ಅಧಿಕಾರ ದಾಹ ತೊರೆದು ಭದ್ರೆಪರವಾಗಿ ದನಿ ಎತ್ತಲಿ ಎಂದರು.

ಕಳೆದ ವಿಧಾನಸಭೆ ಚುನಾವಣೆ ವೇಳೆ ಚಿತ್ರದುರ್ಗಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಈ ನೆಲದಲ್ಲೇ ನಿಂತು ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ 5300 ಕೋಟಿ ರು. ಅನುದಾನ ಒದಗಿಸುವುದಾಗಿ ಪ್ರಮಾಣ ಮಾಡಿದ್ದರು. ಆದರೆ ಇದುವುರೆಗೂ ಅದು ಈಡೇರಿಲ್ಲ. ವಚನ ಭ್ರಷ್ಟತೆಯಲ್ಲಿ ಪ್ರಧಾನಿಗಳೂ ಎಲ್ಲರನ್ನೂ ಮೀರಿಸಿದರಾ ಎಂಬ ಶಂಕೆಗಳು ಮೂಡಿವೆ. ದೇಶದ ಪ್ರಭುತ್ವದ ವಾರಸುದಾರಿಕೆ ಹೊತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಅನುದಾನದ ಘೋಷಣೆ ಹುಸಿಯಾಗಿದ್ದು, ಸಾಂವಿಧಾನಿಕ ಹುದ್ದೆಗಳ ಜವಾಬ್ದಾರಿಗಳು ನಿರ್ವಹಣೆಯಾಗುತ್ತಿರುವ ಬಗ್ಗೆ ಜನ ಅನುಮಾನ ಪಡುವಂತಾಗಿದೆ ಎಂದರು.

ಸ್ವರಾಜ್ ಇಂಡಿಯಾದ ಜೆ.ಯಾದವರೆಡ್ಡಿ ಮಾತನಾಡಿ, ಚಿತ್ರದುರ್ಗ ಜಿಲ್ಲೆ ಪ್ರತಿ 2 ವರ್ಷಕ್ಕೊಮ್ಮೆ ಬರ ಎದುರಿಸುತ್ತಿದೆ. ಭದ್ರಾ ಜಾರಿಯಾಗದಿದ್ದರೆ ರೈತಾಪಿ ಜನರ ಬದುಕು ದುರಂತದತ್ತ ಸಾಗುತ್ತದೆ. ಈ ನೆಲದ ಜನರ ಬದುಕು ಹಸನಾಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗ ಬೇಕಾದ ರಾಜಕಾರಣ ಎಚ್ಚರದಪ್ಪಿ ಮಲಗಿದೆ. ಪ್ರಭುತ್ವದ ಆಶಯಗಳ ಮಣ್ಣುಪಾಲು ಮಾಡಿದೆ. ಹಾಗಾಗಿ ಮಂದಿನ ಬಜೆಟ್‌ನಲ್ಲಿ ಜಲಸಂಪನ್ಮೂಲ ಇಲಾಖೆಗೆ ಮೀಸಲಿಡುವ ಅನುದಾನದಲ್ಲಿ ಸಿಂಹಪಾಲು ಭದ್ರಾ ಮೇಲ್ದಂಡೆಗೆ ವಿನಿಯೋಗವಾಗಬೇಕೆಂದು ಆಗ್ರಹಿಸಿದರು.

ಭದ್ರಾ ಮೇಲ್ದಂಡೆಗೆ ಕಾಮಗಾರಿಗೆ ತೊಡಕಾಗಿರುವ ಭೂ ಸ್ವಾಧೀನ ಪ್ರಕ್ರಿಯೆ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು, ಚಳ್ಳಕೆರೆ, ಮೊಳಕಾಲ್ಮುರು, ಜಗಳೂರು ತಾಲೂಕಿನ ಕಾಮಗಾರಿಗಳ ಶೀಘ್ರ ಕೈಗೆತ್ತಿಕೊಂಡು ಚುರುಕಿನ ವೇಗ ನೀಡಬೇಕು ಎಂದು ಒತ್ತಾಯಿಸಿದರು.

ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ್, ರೈತ ಸಂಘದ ತಾಲೂಕು ಅಧ್ಯಕ್ಷ ಹಂಪಯ್ಯನ ಮಾಳಿಗೆ ಧನಂಜಯ, ಜನಶಕ್ತಿ ಸಂಘಟನೆಯ ಷಫಿವುಲ್ಲಾ, ರೈತ ಸಂಘದ ಲಕ್ಷ್ಮಿಕಾಂತ್, ಕಟ್ಟಡ ಹಾಗೂ ಇತರೆ ಕಾರ್ಮಿಕ ಸಂಘಟನೆಯ ಕುಮಾರ್, ಸಿಪಿಐನ ಸತ್ಯಕೀರ್ತಿ, ಕರುನಾಡ ವಿಜಯ ಸೇನೆಯ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಗೌರಣ್ಣನವರ, ನಗರ ಅಧ್ಯಕ್ಷ ಅವಿನಾಶ್ ಇದ್ದರು.