ರಸ್ತೆ ಗುಂಡಿ ಮುಚ್ಚಿಸಿ, ಅವಘಡ ತಪ್ಪಿಸಿ: ಎಂ.ಎಸ್. ದಿವಾಕರ

| Published : Jun 25 2025, 01:18 AM IST

ರಸ್ತೆ ಗುಂಡಿ ಮುಚ್ಚಿಸಿ, ಅವಘಡ ತಪ್ಪಿಸಿ: ಎಂ.ಎಸ್. ದಿವಾಕರ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ರಸ್ತೆಗಳ ಮೇಲಿನ ಗುಂಡಿಗಳನ್ನು ಗುರುತಿಸಿ ಶೀಘ್ರವೇ ಮುಚ್ಚುವ ಮೂಲಕ ಅವಘಡಗಳನ್ನು ತಪ್ಪಿಸಬೇಕು.

ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ರಸ್ತೆಗಳ ಮೇಲಿನ ಗುಂಡಿಗಳನ್ನು ಗುರುತಿಸಿ ಶೀಘ್ರವೇ ಮುಚ್ಚುವ ಮೂಲಕ ಅವಘಡಗಳನ್ನು ತಪ್ಪಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಚೇಗೆ ರಸ್ತೆಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಮಳೆಯಿಂದಾಗಿ ರಸ್ತೆಗಳ ಮೇಲೆ ನೀರು ನಿಂತು ಗುಂಡಿಗಳು ಕಾಣದೇ ಸವಾರರು ಅವಘಡಗಳನ್ನು ಅನುಭವಿಸುತ್ತಿದ್ದಾರೆ. ವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಕಾಮಗಾರಿಗಳು ನಡೆಯದೇ ಅನೇಕ ದುರ್ಘಟನೆಗಳು ಸಂಭವಿಸಿವೆ. ಈಗಲಾದರೂ ಎಚ್ಚೆತ್ತು ಅಧಿಕಾರಿಗಳು ರಸ್ತೆಗಳ ನಿರ್ವಹಣೆಗೆ ಕಾರ್ಯೋನ್ಮುಖರಾಗಬೇಕು. ಎನ್‌ಎಚ್‌ಎಐ ಅಧಿಕಾರಿಗಳ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಟ್ಟು 6 ಕಡೆ ಬ್ಲಾಕ್‌ಸ್ಪಾಟ್‌ಗಳನ್ನು ಗುರುತಿಸಿ ಈಗಾಗಲೇ 5 ಬ್ಲಾಕ್‌ಸ್ಪಾಟ್‌ಗಳನ್ನು ಸರಿಪಡಿಸಲಾಗಿದೆ ಎಂದು ವರದಿ ನೀಡಲಾಗಿದೆ. ಬಿಎಂಎಂ ಕಂಪನಿ ಮುಂದಿನ ಡಣಾಪುರ ಕ್ರಾಸ್ ಬಳಿಯ ವಿದ್ಯುತ್ ದೀಪಗಳಿಲ್ಲದೇ ಕತ್ತಲು ಆವರಿಸಿದೆ. ಅದೇ ರಸ್ತೆಯಲ್ಲಿ ಬರುವ ಆರು ಹಳ್ಳಿಗಳಿಗೆ ಸಂಪರ್ಕಿಸುವ ರಸ್ತೆ ಮಾರ್ಗದಲ್ಲಿ ವಿದ್ಯುತ್ ದೀಪ ಇಲ್ಲದೇ ರಸ್ತೆ ಸಂಚಾರಕ್ಕೆ ತೊಂದರೆ ಆಗಿದೆ. ಕೂಡಲೇ ವಿದ್ಯುತ್ ದೀಪಗಳನ್ನು ಅಳವಡಿಸಲು ಕ್ರಮವಹಿಸಬೇಕು ಎಂದರು.

ಅರಸೀಕೆರೆಯಿಂದ ಮತ್ತಿಹಳ್ಳಿಗೆ ಹೋಗುವ ರಸ್ತೆಯಲ್ಲಿ ಎರಡು ಕಿಲೋಮೀಟರ್‌ನಷ್ಟು ರಸ್ತೆ ವಾಹನಗಳು ಸಂಚರಿಸಲು ಸಂಪೂರ್ಣ ಹದಗೆಟ್ಟಿದೆ. ಶೀಘ್ರ ರಸ್ತೆ ಕಾಮಗಾರಿ ಸರಿಪಡಿಸಬೇಕು. ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಸೇವಾ ರಸ್ತೆಗಳಲ್ಲಿ ಸೂಕ್ತ ನಾಮಫಲಕಗಳು, ರಸ್ತೆ ಅಡೆತಡೆಗಳನ್ನು ಅಳವಡಿಸಬೇಕು ಎಂದೂ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಲ್‌. ಶ್ರೀಹರಿಬಾಬು ಮಾತನಾಡಿ, ನಗರದ ಡಾ. ಪುನೀತ್ ರಾಜಕುಮಾರ ವೃತ್ತದ ಬಳಿ ನಾಲ್ಕು ಚಕ್ರದ ವಾಹನಗಳ ಪಾರ್ಕಿಂಗ್ ನಿಯೋಜಿಸಬೇಕಿದೆ. ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಬರುವ ಸುರಂಗದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮವಹಿಸಬೇಕು. ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ರಸ್ತೆಗೆ ಅಡ್ಡಲಾಗಿರುವ ಮರಗಳ ಕೊಂಬೆಗಳನ್ನು ತೆರವುಗೊಳಿಸಬೇಕು. ಹೊಸಪೇಟೆ, ಹರಪನಹಳ್ಳಿ, ಕೂಡ್ಲಿಗಿ, ಹಾಗೂ ಹಗರಿಬೊಮ್ಮನಹಳ್ಳಿಯಲ್ಲಿ ಆಟೋ ನಿಲ್ದಾಣ ನಿರ್ಮಾಣ ಮಾಡಲು ಸಂಬಂಧಿಸಿದ ಉಪವಿಭಾಗದ ಅಧಿಕಾರಿಗಳು ಮತ್ತು ಟ್ರಾಫಿಕ್ ಪೊಲೀಸರು ಜಂಟಿಯಾಗಿ ಸ್ಥಳ ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಹೊಸಪೇಟೆ ನಗರದಲ್ಲಿ ಒಟ್ಟು 20 ಆಟೋ ಸ್ಟ್ಯಾಂಡ್‌ಗಳನ್ನು ಗುರುತಿಸಿದ್ದು, ಈಗಾಗಲೇ 10 ಹಂತಗಳಲ್ಲಿ ನಿರ್ಮಿಸಲು ಸೂಚಿಸಿದರು. ಮೊದಲ ಹಂತದಲ್ಲಿ ಪ್ರತಿಯೊಂದು ಸ್ಟ್ಯಾಂಡ್‌ಗಳಲ್ಲಿ ಕನಿಷ್ಠ 10-15 ಆಟೋಗಳನ್ನು ನಿಲ್ಲಿಸಲು ಅನುಕೂಲ ಕಲ್ಪಿಸಬೇಕಿದೆ ಎಂದರು.

ಸಾರಿಗೆ, ಪಿಡಬ್ಲೂಡಿ, ಎನ್‌ಎಚ್‌ಎಐ ಸೇರಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.