ಅಪಪ್ರಚಾರ ಮಾಡಿದಷ್ಟು ಜನರಿಗೆ ಸನಿಹ: ಸಚಿವ ವೈದ್ಯ

| Published : Dec 24 2023, 01:45 AM IST

ಸಾರಾಂಶ

ಶಾಸಕನಾಗಿದ್ದಾಗಲು ಜನರ ಜತೆ ಇದ್ದೇನೆ, ಸಚಿವನಾದ ಮೇಲು ಜನರ ಜತೆ ಇರುತ್ತಿದ್ದೇನೆ. ಜನರ ಕಷ್ಟಕ್ಕೆ ಸ್ಪಂದಿಸುವ ಸಲುವಾಗಿಯೆ ಜನಸ್ಪಂದನಾ ನಡೆಸುವುದು

ಕನ್ನಡಪ್ರಭ ವಾರ್ತೆ ಹೊನ್ನಾವರ

ವಿರೋಧಿಗಳು ಅಪಪ್ರಚಾರ ಮಾಡಿದಷ್ಟು ಜನರಿಗೆ ಇನ್ನೂ ಹತ್ತಿರವಾಗುತ್ತಾ ಹೋಗುತ್ತೇನೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಪಂಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಲು ತಿರ್ಮಾನಿಸಿದ್ದೇನೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

ಪಟ್ಟಣದ ಸಚಿವರ ಕಾರ್ಯಾಲಯದಲ್ಲಿ ಶನಿವಾರ ನಡೆದ ಜನಸ್ಪಂದನಾ ಅಹವಾಲು ಸ್ವೀಕಾರ ಕಾರ್ಯಕ್ರಮದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಶಾಸಕನಾಗಿದ್ದಾಗಲು ಜನರ ಜತೆ ಇದ್ದೇನೆ, ಸಚಿವನಾದ ಮೇಲು ಜನರ ಜತೆ ಇರುತ್ತಿದ್ದೇನೆ. ಜನರ ಕಷ್ಟಕ್ಕೆ ಸ್ಪಂದಿಸುವ ಸಲುವಾಗಿಯೆ ಜನಸ್ಪಂದನಾ ನಡೆಸುವುದು ಎಂದರು.

ಐಆರ್ ಬಿ ಕಾಮಗಾರಿಯಿಂದ ಆಗಿರುವ ಅವೈಜ್ಞಾನಿಕ ಕಾಮಗಾರಿಗಳಿಂದ ಅಪಘಾತ ಆಗುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಕಂಪನಿ ಕಾಮಗಾರಿಯಿಂದ ಈಗಾಗಲೇ ಸಾವಿರಾರು ಜನರು ಸತ್ತಿದ್ದಾರೆ. ಸುಳ್ಳು ವರದಿ ನೀಡಿ ಕಾಮಗಾರಿ ಮಾಡುತ್ತಿದ್ದಾರೆ. ಎನೇ ಕೇಳಿದ್ರು ಸೆಂಟ್ರಲ್ ಮಿನಿಸ್ಟರ್ ತಮ್ಮ ಒನರ್ ಅನ್ನುತ್ತಾರೆ . ಕಂಪನಿ ವಿರುದ್ಧ ಜನಸಾಮಾನ್ಯರು ರಸ್ತೆಗಿಳಿದು ಪ್ರತಿಭಟಿಸುವ ಪರಿಸ್ಥಿತಿ ತಲುಪಿದೆ ಎಂದರು.

ಮಂಕಿ ಸಾರಸ್ವತಕೇರಿಯ ಕಿರಿಯ ಪ್ರಾಥಮಿಕ ಶಾಲೆ ದುರಸ್ಥಿ ಕಾರ್ಯದ ಕುರಿತು ಗ್ರಾಮಸ್ಥರಿಂದ ಸಚಿವರಿಗೆ ಮನವಿ ಸಲ್ಲಿಸಿದರು.ಆದಷ್ಟು ಶೀಘ್ರವಾಗಿ ಶಾಲೆ ದುರಸ್ತಿ ಕಾರ್ಯದ ಬಗ್ಗೆ ಸಚಿವರು ಭರವಸೆ ನೀಡಿದರು. ಜನತೆ ವಿವಿಧ ರೀತಿಯ ಸಹಾಯ, ಸಹಕಾರ ಹಾಗೂ ಸಮಸ್ಯೆ ಹೇಳಿಕೊಂಡು ಸಚಿವರೊಂದಿಗೆ ಮಾತನಾಡಿದರು. ಮಕ್ಕಳು, ವಿಕಲಚೇತನರು, ವಯೋವೃದ್ಧರೊಂದಿಗೆ ಸಚಿವರು ಪ್ರೀತಿಯಿಂದ ಮಾತನಾಡಿಸುತ್ತಾ ಅವರ ಮನವಿ ಆಲಿಸಿದರು. ಪಕ್ಷಾತೀತವಾಗಿ ಜನತೆ ತಮ್ಮ ಊರಿನ ಸಲುವಾಗಿ, ಸಮಸ್ಯೆಗಳ ಬಗೆಹರಿಸುವ ಸಲುವಾಗಿ ಆಗಮಿಸಿರುವುದು ಇಂದಿನ ಜನಸ್ಪಂದನದ ವಿಶೇಷವಾಗಿತ್ತು.

ಒಟ್ಟಿನಲ್ಲಿ ಜನಸ್ಪಂದನದಲ್ಲಿ ಜನರಿಂದ ಬಂದ ಕೆಲವಷ್ಟು ಮನವಿ ಹಾಗೂ ಬೇಡಿಕೆಗಳಿಗೆ ಸ್ಥಳದಲ್ಲಿಯೇ ಸಚಿವರು ಸ್ಪಂದಿಸಿದರು. ಇನ್ನೂ ಕೆಲವಷ್ಟನ್ನು ಶೀಘ್ರವಾಗಿ ಮಾಡಿಕೊಡುವ ಭರವಸೆ ನೀಡಿದರು. ಸ್ಪಂದಿಸಲಾಗದ ಸಮಸ್ಯೆಗಳಿಗೆ ಪೊಳ್ಳು ಭರವಸೆ ನೀಡದೆ ಆಗುವುದೇ ಇಲ್ಲ ಎಂದು ಹೇಳಿದರು.