ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಬೇಸಿಗೆಯಲ್ಲಿ ನೀರಿನ ಅಭಾವದಿಂದಾಗಿ ನಗರದ ಕನಕದಾಸ ಬಡಾವಣೆಯಲ್ಲಿರುವ ಒಳಾಂಗಣ ಈಜುಗೊಳ ಸ್ಥಗಿತವಾಗಿದೆ. ಮೊದಲು ಹತ್ತು ದಿನಗಳ ಕಾಲ ಬಂದ್ ಆಗಿದ್ದ ಈಜುಗೊಳ ಇದೀಗ ಮೇ 11ರಿಂದ ಮೇ 20ರವರೆಗೆ ಮತ್ತೆ ತಾತ್ಕಾಲಿಕವಾಗಿ ಬೀಗ ಬಿದ್ದಿದೆ.
ಬ್ಲರ್ಬ್
ಈ ಬಿರು ಬೇಸಿಗೆಯಲ್ಲಿ ನೀರಿನಲ್ಲಿ ಈಜಾಡಬೇಕು. ಬಿಸಿಲ ಧಗೆಯನ್ನು ಕಳೆದುಕೊಳ್ಳುವ ಮೂಲಕ ಸ್ವಿಮ್ಮಿಂಗ್ ಫೂಲ್‌ನಲ್ಲಿ ಈಜಾಡಿ ಮಜಾ ಅನುಭವಿಸಬೇಕು ಎಂಬುದು ಎಲ್ಲರ ಆಸೆ. ಈಗ ಮಕ್ಕಳೊಂದಿಗೆ ಈಜುಗೊಳಕ್ಕೆ ಹೋಗಬೇಕು ಎಂದುಕೊಂಡವರಿಗೆಲ್ಲ ನಿರಾಸೆ ಕಾದಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನಗರದಲ್ಲಿದ್ದ ಏಕೈಕ ಸರ್ಕಾರಿ ಈಜುಗೊಳ ಇದೀಗ ನೀರಿಲ್ಲದ ಕಾರಣದಿಂದಾಗಿ ತ್ಕಾಲಿಕವಾಗಿ ಸ್ಥಗಿತವಾಗಿದೆ. ------ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಬೇಸಿಗೆಯಲ್ಲಿ ನೀರಿನ ಅಭಾವದಿಂದಾಗಿ ನಗರದ ಕನಕದಾಸ ಬಡಾವಣೆಯಲ್ಲಿರುವ ಒಳಾಂಗಣ ಈಜುಗೊಳ ಸ್ಥಗಿತವಾಗಿದೆ. ಮೊದಲು ಹತ್ತು ದಿನಗಳ ಕಾಲ ಬಂದ್ ಆಗಿದ್ದ ಈಜುಗೊಳ ಇದೀಗ ಮೇ 11ರಿಂದ ಮೇ 20ರವರೆಗೆ ಮತ್ತೆ ತಾತ್ಕಾಲಿಕವಾಗಿ ಬೀಗ ಬಿದ್ದಿದೆ.
ಸುಮಾರು 8 ಲಕ್ಷ ಲೀಟರ್ ನೀರಿನ ಸಾಮರ್ಥ್ಯವಿರುವ ಈಜುಗೊಳದ ನಿರ್ವಹಣೆಗೆ ಮೂರು ದಿನಗಳಿಗೊಮ್ಮೆ 1ಲಕ್ಷ ಲೀಟರ್ ನೀರು ಬೇಕಾಗುತ್ತದೆ. ಆದರೆ, ಇದೀಗ ಬೇಸಿಗೆ ಇರುವುದರಿಂದ ನಗರದ ಜನತೆಗೆ ಕುಡಿಯಲು ನೀರು ಒದಗಿಸುವುದೇ ದುಸ್ತರವಾಗಿದೆ. ಇಂತಹ ಸಂದರ್ಭದಲ್ಲಿ ಈಜುಗೊಳಕ್ಕೆ ಜಲಮಂಡಳಿಯಿಂದ ನೀರು ಬರುತ್ತಿಲ್ಲ. ಆ ಕಾರಣದಿಂದಾಗಿ ಸದ್ಯದ ಮಟ್ಟಿಗೆ ತಾತ್ಕಾಲಿಕವಾಗಿ ಈಜುಗೊಳವನ್ನು ಬಂದ್ ಮಾಡಲಾಗಿದೆ. ಈಜುಗೊಳ ಬಂದ್ ಮಾಡಲಾಗಿದೆ ಎಂದು ಗೇಟ್‌ಗೆ ಬೋರ್ಡ್ ಅಂಟಿಸಲಾಗಿದೆ.ಹಸಿರುಗಟ್ಟಿದ ನೀರು:
ಸೂಕ್ತ ನಿರ್ವಹಣೆ ಇಲ್ಲದೆ ಒಳಾಂಗಣ ಈಜುಗೊಳದಲ್ಲಿನ ನೀರೆಲ್ಲ ಹಸಿರುಗಟ್ಟಿದೆ. ಅಕಸ್ಮಾತ್ ಯಾರಾದರೂ ಇದರಲ್ಲಿ ಇಳಿದರೆ ಅಂತಹವರಿಗೆ ತುರಿಕೆ, ಅಲರ್ಜಿ ಸೇರಿದಂತೆ ಇತರೆ ರೋಗಗಳು ಒಕ್ಕರಿಸುವುದು ಗ್ಯಾರಂಟಿ.ನೋಟಿಸ್ ಬೋರ್ಡ್‌ನಲ್ಲಿ ಏನಿದೆ?:
ಬೇಸಿಗೆ ನಿಮಿತ್ಯ ನೀರಿನ ಕೊರತೆ ಇರುವುದರಿಂದ ಈಜುಗೊಳವನ್ನು ಮೇ 11ರಿಂದ 20ರ ವರೆಗೆ ತಾತ್ಕಾಲಿಕವಾಗಿ ಬಂದ್ ಇಡಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು. ಈಜುಗೊಳದಲ್ಲಿ ಈಜಾಡುವವರಿಗೆ ಈಜುಗೊಳ ಆರಂಭವಾದ ಬಳಿಕ ಬಂದ್ ಇಡಲಾದ ದಿನಗಳನ್ನು ವಿಸ್ತರಿಸಿ ಕೊಡಲಾಗುವುದು. ಈಜಾಡಲು ಮುಂದುವರಿಯದೆ ಇರುವವರಿಗೆ ಈಜುಗೊಳ ಉಪಯೋಗಿಸಿದ ದಿನಗಳನ್ನು ಕಡಿತಗೊಳಿಸಿ ಹಣವನ್ನು ಮರಳಿ ಕೊಡಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಡ್ಯೂಟಿಗೆ ಚಕ್ಕರ್, ಸಂಬಳಕ್ಕೆ ಹಾಜರ್:
ಈಜುಗೊಳಕ್ಕೆ ಮ್ಯಾನೇಜರ್, ಲೈಫಗಾರ್ಡ್, ಕೋಚ್, ಸಹಾಯಕರು, ಸೆಕ್ಯುರಿಟಿ ಗಾರ್ಡ್‌ಗಳು ಸೇರಿ ಒಟ್ಟು ಏಳು ಜನ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ತಾತ್ಕಾಲಿಕವಾಗಿ ಈಜುಗೊಳ ಬಂದ್ ಇರುವುದರಿಂದ ಇಲ್ಲಿನ ಕೆಲವು ಸಿಬ್ಬಂದಿ ನಿತ್ಯ ಬಂದು ಹಾಜರಾತಿ ಮಾತ್ರ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸೆಕ್ಯೂರಿಟಿಗಳನ್ನು ಹೊರತುಪಡಿಸಿ ಕೆಲಸದ ಸಮಯದಲ್ಲಿ ಸ್ಥಳದಲ್ಲಿ ಇರಬೇಕಿರುವ ಕೆಲ ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಬೆಳಗ್ಗೆ ಬಂದು ಹಾಜರಿ ಹಾಕಿ ಒಂದೆರಡು ಗಂಟೆಗಳಲ್ಲೇ ವಾಪಸ್ ಹೋಗಿಬಿಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಎಂದು ನೋಟಿಸ್ ಬೋರ್ಡ್‌ನಲ್ಲಿ ಹಾಕಲಾಗಿರುವ ವ್ಯವಸ್ಥಾಪಕರ ಮೊಬೈಲ್ ನಂಬರ್ ಗೆ ಕರೆ ಮಾಡಿದರೆ ಅವರು ಕರೆಯನ್ನೂ ಸ್ವೀಕರಿಸುತ್ತಿಲ್ಲ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ.ಬೇರೆಡೆ ನಿಯೋಜಿಸಿ:
ತಾತ್ಕಾಲಿಕವಾಗಿ ಬಂದ್ ಇರುವ ಈಜುಕೊಳದಲ್ಲಿ ಬಂದವರಿಗೆ ಸರಿಯಾದ ಮಾಹಿತಿ ಕೊಡಲು ಸಿಬ್ಬಂದಿ ಇರಬೇಕು, ಇಲ್ಲವಾದಲ್ಲಿ ಅವರನ್ನು ಇಲಾಖೆ ಬೇರೆ ಕಡೆ ಕೆಲಸ ಇದ್ದಲ್ಲಿ ನಿಯೋಜಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.---------
ಕೋಟ್ಬೇಸಿಗೆಯಲ್ಲಿ ಈಜಾಡಬೇಕು ಎಂಬ ಮಹದಾಸೆಯಿಂದ ಇದ್ದ ನಮಗೆ ಈಜುಕೊಳ ಬಂದ್ ಆಗಿರುವುದರಿಂದ ನಿರಾಸೆಯಾಗಿದೆ. ಸ್ಥಳದಲ್ಲಿದ್ದು ಈಜುಕೊಳದ ಬಗ್ಗೆ ಮಾಹಿತಿ ಕೊಡಬೇಕಿರುವ ಸಿಬ್ಬಂದಿಗಳು ಇಲ್ಲಿ ಕಾಣೆಯಾಗಿದ್ದಾರೆ. ಈ ಕುರಿತು ಮೇಲಾಧಿಕಾರಿಗಳು ಮುತುವರ್ಜಿ ವಹಿಸಬೇಕು.
- ಕುಮಾರ ಜಾಧವ್, ಸ್ಥಳೀಯರು.ನೀರಿನ ಅಭಾವದಿಂದ ತಾತ್ಕಾಲಿಕವಾಗಿ ಈಜುಹೊಳ ಬಂದ್ ಇಡಲಾಗಿದೆ. ನೀರು ಬಂದ ತಕ್ಷಣ ಮತ್ತೆ ಈಜುಕೊಳ ಆರಂಭಿಸಲಾಗುವುದು. ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸದಿರುವುದು ನನ್ನ ಗಮನಕ್ಕೆ ಬಂದಿಲ್ಲ, ಅದನ್ನು ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.- ಎಸ್.ಜಿ.ಲೋಣಿ, ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ.