ಮುಂಗಾರು ಮಳೆ ಕೊರತೆಯಾಗುತ್ತಿದ್ದಂತೆ ಹಾವೇರಿ ಜಿಲ್ಲೆಯ ಕಾಂಗ್ರೆಸ್‌ ಶಾಸಕರು ಸರ್ಕಾರ ಮೋಡ ಬಿತ್ತನೆಗೆ ನಿರ್ಣಯ ಕೈಗೊಳ್ಳುವ ಮೊದಲೇ ತಾವೇ ತಮ್ಮ ಸ್ವಂತ ಖರ್ಚಿನಿಂದ ಮೋಡ ಬಿತ್ತನೆ ಮಾಡಿಸುವ ಮೂಲಕ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದಂತಾಗಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

"ರಾಜ್ಯ ಸರ್ಕಾರ ಮೋಡ ಬಿತ್ತನೆ ಮಾಡದಿದ್ದರೆ ನಾವೇ ಖರ್ಚು ಭರಿಸಿ ಮೋಡ ಬಿತ್ತನೆ ಮಾಡುತ್ತೇವೆ... "

ಉತ್ತರ ಕರ್ನಾಟಕದಲ್ಲಿ ಆವರಿಸಿರುವ ಬರಗಾಲ ಕುರಿತಂತೆ ಉದಾಸೀನ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಶಾಸಕರು ಗುಡುಗಿದ ಪರಿ ಇದು.

ಮುಂಗಾರು ಮಳೆ ಕೊರತೆಯಾಗುತ್ತಿದ್ದಂತೆ ಹಾವೇರಿ ಜಿಲ್ಲೆಯ ಕಾಂಗ್ರೆಸ್‌ ಶಾಸಕರು ಸರ್ಕಾರ ಮೋಡ ಬಿತ್ತನೆಗೆ ನಿರ್ಣಯ ಕೈಗೊಳ್ಳುವ ಮೊದಲೇ ತಾವೇ ತಮ್ಮ ಸ್ವಂತ ಖರ್ಚಿನಿಂದ ಮೋಡ ಬಿತ್ತನೆ ಮಾಡಿಸುವ ಮೂಲಕ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದಂತಾಗಿದೆ. ಇನ್ನು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸರ್ಕಾರವೇ ಮೋಡಬಿತ್ತನೆ ಮಾಡಬೇಕು ಎಂದು ಆಗ್ರಹಿಸುತ್ತಿದ್ದರೆ, ಹಿರಿಯ ಶಾಸಕರಾದ ಎಚ್‌.ಕೆ. ಪಾಟೀಲ, ಎನ್‌.ಎಚ್‌. ಕೋನರಡ್ಡಿ ಮೋಡ ಬಿತ್ತನೆಗೆ ಸರ್ಕಾರ ವಿಳಂಬ ಮಾಡುತ್ತಿರುವುದೇಕೆ ಎಂಬುದು ತಿಳಿಯದಂತಾಗಿದೆ. ಮೋಡಗಳು ದಟ್ಟವಾಗಿದ್ದು ಮೋಡ ಬಿತ್ತನೆ ಮಾಡಿದರೆ ಉತ್ತಮ ಮಳೆ ಸುರಿಯುತ್ತದೆ. ಈ ನಿಟ್ಟಿನಲ್ಲಿ ವಿಳಂಬ ನೀತಿ ಅನುಸರಿಸದೆ ತನ್ನ ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದರೆ ಹಾವೇರಿ ಶಾಸಕರಂತೆ ನಾವೇ ನಮ್ಮ ಖರ್ಚಿನಲ್ಲಿ ಮೋಡ ಬಿತ್ತನೆ ಮಾಡುತ್ತೇವೆಂದು ತಮ್ಮದೇ ಸರ್ಕಾರಕ್ಕೆ ಶಾಸಕರು ಸವಾಲು ಹಾಕಿದ್ದಾರೆ.

ಕೈಕೊಟ್ಟ ಮುಂಗಾರು:

ಮಾರ್ಚ್‌, ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಉತ್ತಮ ಮಳೆ ಸುರಿದಿತ್ತು. ಇದರಿಂದ ಸಂತಸಗೊಂಡಿದ್ದ ರೈತರಿಗೆ ಹವಾಮಾನ ಇಲಾಖೆ ಈ ವರ್ಷ ನಿಗದಿಕ್ಕಿಂತ ಮಳೆ ಕಡಿಮೆ ಆಗಲಿದೆ ಎಂಬ ವರದಿ ಬರಸಿಡಿಲಿನಂತೆ ಬಡಿಯಿತು. ಇಲಾಖೆಯ ಮುನ್ಸೂಚನೆಯಂತೆ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಬಿತ್ತಿದ ಬೆಳೆ ಭೂತಾಯಿಯ ಒಡಲಿನಲ್ಲಿ ಕಮರಿತು. ಅಳಿದು-ಉಳಿದ ಬೆಳೆ ಇದೀಗ ಆಗೊಮ್ಮೆ ಇಗೊಮ್ಮೆ ಸುರಿಯುವ ಮಳೆಯಿಂದ ಜೀವ ಇಟ್ಟುಕೊಂಡಿವೆ.

ದಟ್ಟವಾದ ಕಪ್ಪು ಮೋಡ ಇದ್ದರೂ ಮಳೆಯಾಗಿ ಪರಿವರ್ತನೆ ಆಗದೆ ಗಾಳಿಗೆ ಚದುರಿ ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ಮೋಡ ಬಿತ್ತನೆ ಮಾಡಿದರೆ ಉತ್ತಮ ಮಳೆಯಾಗುವ ಜತೆಗೆ ರೈತರು ಬೆಳೆ ಬೆಳೆದರೆ, ಕೆರೆ-ಕಟ್ಟೆಗಳು ತುಂಬಿ ನೀರಿನ ದಾಹ ನೀಗಲಿದೆ. ಹವಾಮಾನ ಇಲಾಖೆ ಜುಲೈ 10ರ ಬಳಿಕ ಮುಂಗಾರು ಮಳೆ ಮತ್ತಷ್ಟು ಕ್ಷೀಣಸಲಿದೆ ಎಂದು ಹೇಳಿದೆ. ಹೀಗಾಗಿ ತಕ್ಷಣ ಮೋಡ ಬಿತ್ತನೆ ಸರ್ಕಾರ ಮುಂದಾಗಬೇಕೆಂದು ಶಾಸಕರು ಆಗ್ರಹಿಸಿದ್ದಾರೆ.

ಕಾಂಗ್ರೆಸ್‌ ಸರ್ಕಾರದ ವಿಳಂಬತೆ ವಿರುದ್ಧ ಆ ಪಕ್ಷದ ಶಾಸಕರೇ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.ಕೋಟ್‌...

ಸಮರ್ಪಕ ಮಳೆಯಾಗದೇ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬರದ ಛಾಯೆ ಆವರಿಸುತ್ತಿದ್ದರೂ ಸರ್ಕಾರ ಮೋಡ ಬಿತ್ತನೆಗೆ ಏಕೆ ವಿಳಂಬ ಮಾಡುತ್ತಿದೆ ತಿಳಿಯುತ್ತಿಲ್ಲ. ಸರ್ಕಾರ ರೈತರ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅಧಿಕಾರಿಗಳ ಮಾತು ಕೇಳದೆ ವಿಜ್ಞಾನಿಗಳ ಮಾತು ಕೇಳಬೇಕು.

ಎಚ್‌.ಕೆ. ಪಾಟೀಲ, ಶಾಸಕ, ಗದಗ

ಧಾರವಾಡ ಜಿಲ್ಲೆಯಲ್ಲಿಯೂ ಮೋಡ ಬಿತ್ತನೆ ನಡೆಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸರ್ಕಾರ ಈ ಕುರಿತು ಕ್ರಮಕೈಗೊಳ್ಳದಿದ್ದರೆ ಧಾರವಾಡ ಹಾಗೂ ಗದಗ ಜಿಲ್ಲೆಯ ಶಾಸಕರು ಒಗ್ಗೂಡಿ ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆ ನಡೆಸುವ ಕುರಿತು ಚಿಂತನೆ ನಡೆಸಲಾಗುವುದು.

ಎನ್‌.ಎಚ್‌. ಕೋನರಡ್ಡಿ, ಶಾಸಕ, ನವಲಗುಂದಮೋಡ ಬಿತ್ತನೆಗೆ ಇದು ಸಕಾಲ. ಈ ಬಗ್ಗೆ ಆ ಪಕ್ಷದ ಶಾಸಕರೇ ಹೇಳಿದರೂ ಸರ್ಕಾರ ಕ್ರಮಕೈಗೊಳ್ಳುತ್ತಿಲ್ಲ. ಮಳೆಯಿಲ್ಲದೇ ಬೆಳೆಗಳೆಲ್ಲ ಒಣಗುತ್ತಿವೆ. ರೈತರ ಸಮಸ್ಯೆ ಅರಿತು ತಕ್ಷಣವೇ ಮೋಡ ಬಿತ್ತನೆ ಮಾಡಿ ಪುಣ್ಯಕಟ್ಕೊಳ್ಳಿ.

ಕಲ್ಮೇಶ್ವರ ಹುಲ್ಜತ್ತಿ, ರೈತ, ಸುಳ್ಳ