ದೇವನಹಳ್ಳಿ: ಸರ್ಕಾರಿ ಆಸ್ಪತ್ರೆಯಲ್ಲಿ ಸರ್ವ್ ಟು ಗೆದರ್ ಸಂಸ್ಥೆಯಿಂದ ಉಚಿತ ವಕ್ರಪಾದ ಚಿಕಿತ್ಸಾ ಘಟಕ ಪ್ರಾರಂಭಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ವೈಸಾಕ್ ತಿಳಿಸಿದರು

ದೇವನಹಳ್ಳಿ: ಸರ್ಕಾರಿ ಆಸ್ಪತ್ರೆಯಲ್ಲಿ ಸರ್ವ್ ಟು ಗೆದರ್ ಸಂಸ್ಥೆಯಿಂದ ಉಚಿತ ವಕ್ರಪಾದ ಚಿಕಿತ್ಸಾ ಘಟಕ ಪ್ರಾರಂಭಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ವೈಸಾಕ್ ತಿಳಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸರ್ವ್ ಟು ಗೆದರ್ ಸಂಸ್ಥೆ ವಕ್ರಪಾದ ಚಿಕಿತ್ಸಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಾರಂಭಿಕ ಹಂತದಲ್ಲೇ ವಕ್ರಪಾದವನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿದರೆ ೩-೪ ತಿಂಗಳಲ್ಲೇ ಸರಿಪಡಿಸಬಹುದು. ತಡ ಮಾಡಿದರೆ ಶಸ್ತಚಿಕಿತ್ಸೆ ಮೂಲಕ ಸರಿಪಡಿಸಬೇಕಾಗುತ್ತದೆ. ಸಾರ್ವಜನಿಕರು ಪ್ರತಿ ಬುಧವಾರ ಆಸ್ಪತ್ರೆಗೆ ಭೇಟಿ ನೀಡಿ ವಕ್ರಪಾದವನ್ನು ಪರೀಕ್ಷೆ ಮಾಡಿಸಿಕೊಂಡು ಸರ್ವ ಟು ಗೆದರ್ ಸಂಸ್ಥೆಯಿಂದ ಉಚಿತವಾಗಿ ಅದಕ್ಕೆ ಬೇಕಾದ ಪರಿಕರಗಳನ್ನು ಕೊಡುತ್ತಾರೆ ಹಾಗೂ ಆಸ್ಪತ್ರೆಯ ಮೂಳೆ ರೋಗ ತಜ್ಞರು ಚಿಕಿತ್ಸೆ ನೀಡಲಿದ್ದಾರೆ ಎಂದರು.

ಸರ್ವ್ ಟು ಗೆದರ್ ಸಂಸ್ಥೆ ನಿರ್ದೇಶಕ ಗೋಪಿ ಭೂಷನಾಥಮ್ ಮಾತನಾಡಿ, ವಕ್ರಪಾದ ಮಗು ತಾಯಿ ಹೊಟ್ಟೆಯಲ್ಲಿರುವಾಗಲೆ ಅದು ಪ್ರಾರಂಭವಾಗುತ್ತದೆ. ೫೦೦ ಮಕ್ಕಳಲ್ಲಿ ಒಂದು ಮಗು ವಕ್ರಪಾದ ಹೊಂದಿರುತ್ತದೆ. ಭಾರತ ದೇಶದಲ್ಲಿ ಪ್ರತಿ ೧೦ ನಿಮಿಷಕ್ಕೆ ಒಂದು ಮಗು ವಕ್ರಪಾದ ಸಮಸ್ಯೆಯಿಂದ ಜನಿಸುತ್ತದೆ. ಮಗು ಜನಿಸಿದಾಗ ವಕ್ರಪಾದವನ್ನು ಗುರುತಿಸಿ ಒಂದು ತಿಂಗಳ ಮಗುವಿನಲ್ಲೇ ಚಿಕಿತ್ಸೆ ನೀಡಿ ಸರಿಪಡಿಸಬಹುದಾಗಿದೆ ಎಂದು ಹೇಳಿದರು.

ಡಾ.ರಾಜೀವ್ ಮಾತನಾಡಿ, ೦-೨ ವರ್ಷದ ಮಕ್ಕಳಿಗೆ ವಿಶೇಷ ಶೂ ಹಾಕುವ ಮೂಲಕ ವಕ್ರಪಾದ ೩-೪ ತಿಂಗಳಲ್ಲಿ ಸರಿಪಡಿಸಬಹುದು. ವಕ್ರಪಾದ ಕಂಡುಬಂದರೆ ತಕ್ಷಣ ದೇವನಹಳ್ಳಿ ತಾಲೂಕು ಆಸ್ಪತ್ರೆಗೆ ಪ್ರತಿ ಬುಧವಾರ ಕರೆ ತಂದರೆ ಅವರಿಗೆ ಅಗತ್ಯ ಚಿಕಿತ್ಸೆ ನೀಡಿ ಗುಣಪಡಿಸಲಾಗುವುದು ತಿಳಿಸಿದರು.

ಇದೆ ವೇಳೆ ಮಕ್ಕಳ ತಜ್ಞರಾದ ಶ್ರೀನಾಥ್, ನರ್ಸಿಂಗ್ ಸೂಪರಿಂಟೆಂಡೆಟ್ ಪಾರ್ವತಮ್ಮ, ಸರ್ವ್ ಟು ಗೆದರ್ ಸಂಸ್ಥೆಯ ರಾಜ್ಯ ಸಂಚಾಲಕ ರಾಹುಲ್, ಜಿಲ್ಲಾ ಸಂಚಾಲಕ ಡೇವಿಡ್, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ವರ್ಗ ಇದ್ದರು.

೨೪ದೇವನಹಳ್ಳಿ ಚಿತ್ರಸುದ್ದಿ:೦೨

ದೇವನಹಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸರ್ವ ಟು ಗೆದರ್ ಸಂಸ್ಥೆ ಸ್ಥಾಪಿಸಿರುವ ವಕ್ರಪಾದ ಚಿಕಿತ್ಸಾ ಘಟಕವನ್ನು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ವೈಸಾಕ್ ಹಾಗೂ ಡಾ. ರಾಜೀವ್‌ ಉದ್ಘಾಟಿಸಿದರು.