ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ವಿವಿಗೆ ಸಿಎಂ ಕುಲಾಧಿಪತಿ: ಎಬಿವಿಪಿ ಪ್ರತಿಭಟನೆ

| Published : Dec 01 2024, 01:30 AM IST

ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ವಿವಿಗೆ ಸಿಎಂ ಕುಲಾಧಿಪತಿ: ಎಬಿವಿಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಸಂಚಾಲಕ ಕಾರ್ತಿಕ್ ಎಂ. ಮಾತನಾಡಿ, ಈಗಾಗಲೇ ಅನೇಕ ಹಗರಣಗಳ ಆರೋಪಗಳನ್ನು ಹೆಗಲ ಮೇಲೇರಿಸಿಕೊಂಡ ಮುಖ್ಯಮಂತ್ರಿಗಳು ಶಿಕ್ಷಣ ಕ್ಷೇತ್ರದಲ್ಲಿಯೂ ಹಸ್ತಕ್ಷೇಪವನ್ನು ನಡೆಸಿ ಕೆಳಮಟ್ಟದ ರಾಜಕೀಯ ನಡೆಸುತ್ತಿದ್ದಾರೆ ಇದನ್ನು ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಉಡುಪಿ

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಾಧಿಪತಿ ಹುದ್ದೆಯನ್ನು ರಾಜ್ಯಪಾಲರ ಬದಲು ಮುಖ್ಯಮಂತ್ರಿಗಳಿಗೆ ನೀಡುತ್ತಿರುವ ಸರ್ಕಾರದ ನಡೆಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಅಜ್ಜರಕಾಡು ಹುತಾತ್ಮರ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಗರ ಕಾರ್ಯದರ್ಶಿ ಮಾಣಿಕ್ಯ ಭಟ್, ಶಿಕ್ಷಣದಲ್ಲಿ ರಾಜಕೀಯ ಹಸ್ತಕ್ಷೇಪ ಆಗುತ್ತಿರುವುದು ಖಂಡನೀಯ. ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರನ್ನು ಕಡೆಗಣಿಸಿ ಮುಖ್ಯಮಂತ್ರಿಗಳನ್ನು ವಿಶ್ವವಿದ್ಯಾಲಯಗಳ ಕುಲಪತಿಯನ್ನಾಗಿಸುವುದನ್ನು ವಿದ್ಯಾರ್ಥಿ ಸಮುದಾಯ ತೀವ್ರವಾಗಿ ವಿರೋಧಿಸುತ್ತದೆ ಎಂದರು.

ಜಿಲ್ಲಾ ಸಂಚಾಲಕ ಕಾರ್ತಿಕ್ ಎಂ. ಮಾತನಾಡಿ, ಈಗಾಗಲೇ ಅನೇಕ ಹಗರಣಗಳ ಆರೋಪಗಳನ್ನು ಹೆಗಲ ಮೇಲೇರಿಸಿಕೊಂಡ ಮುಖ್ಯಮಂತ್ರಿಗಳು ಶಿಕ್ಷಣ ಕ್ಷೇತ್ರದಲ್ಲಿಯೂ ಹಸ್ತಕ್ಷೇಪವನ್ನು ನಡೆಸಿ ಕೆಳಮಟ್ಟದ ರಾಜಕೀಯ ನಡೆಸುತ್ತಿದ್ದಾರೆ ಇದನ್ನು ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದರು.

ಮಂಗಳೂರು ವಿಭಾಗ ಸಂಚಾಲಕ ಗಣೇಶ್ ಪೂಜಾರಿ ಮಾತನಾಡಿ ರಾಜ್ಯ ಸರ್ಕಾರದ ಕೆಲಸ ಏನಿದ್ದರೂ ಶಿಕ್ಷಣಕ್ಕೆ ಪೂರಕವಾಗಿ ಅನುದಾನ ಬಿಡುಗಡೆ ಮಾಡುವುದೇ ಹೊರತು ಇಲ್ಲಿನ ಆಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳುವುದು ಅಲ್ಲ. ಇಂದು ನಾವು ಇಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಈ ಕೂಡಲೇ ಇಂತಹ ಯೋಚನೆಯನ್ನು ಕೈಬಿಡುವಂತೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ ಎಂದರು.

ಪ್ರತಿಭಟನೆಯಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ ಸಾಮಾಜಿಕ ಜಾಲತಾಣ ಸಹ ಸಂಚಾಲಕರಾದ ಶ್ರೀವತ್ಸ ಡಿ., ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಸಂಹಿತಾ ಕೆ., ನಗರ ಸಹ ಕಾರ್ಯದರ್ಶಿ ಶಿವನ್ ಮತ್ತು ಪ್ರಮುಖರಾದ ಕಿಶೋರ್, ನವೀನ್, ಅಭಿಲಾಷ್, ಮನೀಶ್, ರಕ್ಷಿತಾ ಉಪಸ್ಥಿತರಿದ್ದರು.