ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ನವೆಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾವಣೆ ನಿಶ್ಚಿತ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಪುನರುಚ್ಚರಿಸಿದರು.ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಅವರನ್ನು ಅಭಿನಂದಿಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಏನೆಲ್ಲಾ ನಡೆಯುತ್ತಿದೆ ಎಂದು ಹೇಳಲು ಜ್ಯೋತಿಷಿ ನಾನಲ್ಲ. ಆದರೂ ನಾನು ಹೇಳುವುದು ಸತ್ಯದ ಸಂಗತಿ. ನವೆಂಬರ್‌ನಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಖಚಿತ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದಂತೆ ಉಚಿತ, ಖಚಿತ, ನಿಶ್ಚಿತ ಎಂಬಂತೆ ಬದಲಾವಣೆಯೂ ನಿಶ್ಚಿತ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು.ಯತ್ನಾಳ್, ವಿಜಯೇಂದ್ರ ಇಬ್ಬರು ಬಿಜೆಪಿ ನಾಯಕರು. ಯಾರೋ ಹೇಳಿದ ತಕ್ಷಣ ಅಧ್ಯಕ್ಷರನ್ನು ವಜಾಗೊಳಿಸುವ ಪ್ರಶ್ನೆ ಇಲ್ಲ. ಅಧ್ಯಕ್ಷರನ್ನು ಇಳಿಸಲು ನನಗೆ ಅಧಿಕಾರ ಇಲ್ಲ. ಕೇಂದ್ರದವರಿಗೆ ಅಧಿಕಾರ ಇದೆ. ಎಲ್ಲಾ ಗೊಂದಲಗಳು ಸುಖಾಂತ್ಯವಾಗುತ್ತವೆ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಇಡೀ ದೇಶದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮೂರು ವರ್ಷಕ್ಕೊಮ್ಮೆ ಆಂತರಿಕ ಚುನಾವಣೆ ನಡೆಯುತ್ತದೆ. ರಾಷ್ಟ್ರೀಯ ಅಧ್ಯಕ್ಷರೇ ಬದಲಾವಣೆಯಾಗುತ್ತಾರೆ. ಉಳಿಸಿಕೊಳ್ಳುವುದು, ಬಿಡುವುದು, ತೀರ್ಮಾನ ಮಾಡುವುದು ರಾಷ್ಟ್ರೀಯ ಅಧ್ಯಕ್ಷರು, ಸಂಸದೀಯ ಮಂಡಳಿ ಹಾಗೂ ಅಮಿತ್‌ಶಾ ಅವರು ಎಂದು ಹೇಳಿದರು.ಇತ್ತೀಚಿನ ದಿನಗಳಲ್ಲಿ ಪಕ್ಷದಲ್ಲಿನ ಘಟನೆ ಬೇಸರ ತರಿಸಿದೆ. ಗುಂಪುಗಾರಿಕೆ ಸರಿಯಲ್ಲ, ಒಳ್ಳೆಯ ಬೆಳವಣಿಗೆಯೂ ಅಲ್ಲ. ಸರ್ಕಾರದ ವಿರುದ್ಧ ವಿಪಕ್ಷದವರು ಹೋರಾಟ ಮಾಡಬೇಕು. ತಾರ್ಕಿಕ ಅಂತ್ಯ ಹಾಡಲು ವರಿಷ್ಠರು 20 ದಿನಗಳ ಕಾಲಾವಕಾಶ ಕೇಳಿದ್ದಾರೆ. ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ಈಗ ಸರ್ಕಾರಕ್ಕೆ ನಿಗಮಗಳಿಗೆ ಕೊಡಲು ಖಜಾನೆಯಲ್ಲಿ ಹಣ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾತು ಅಧಿಕಾರಿಗಳು ಕೇಳುತ್ತಿಲ್ಲ. ಈ ಸಮಸ್ಯೆಯನ್ನು ನಿರ್ವಹಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿದರು.ಮುಖಂಡರಾದ ಎಸ್.ಪಿ. ಸ್ವಾಮಿ, ಸಚ್ಚಿದಾನಂದ, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಇಂದ್ರೇಶ್, ಅಶೋಕ್ ಜಯರಾಂ ಇತರರು ಇದ್ದರು.