ಪಂಚರಾಜ್ಯ ಚುನಾವಣೆಗೆ ಸಿಎಂ ಹಣ ಸಂಗ್ರಹ

| Published : Oct 17 2023, 12:30 AM IST

ಸಾರಾಂಶ

ಪಂಚ ರಾಜ್ಯಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಕ್ರಮವಾಗಿ ಹಣ ಸಂಗ್ರಹಿಸಿ ರವಾನಿಸಲು ಮುಂದಾಗಿದ್ದಾರೆಂದು ಬಿಜೆಪಿ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದರು.

ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಮಾಜಿ ಕಾರ್ಯದರ್ಶಿ ಸಿ.ಟಿ.ರವಿ ಆರೋಪ ಕನ್ನಡಪ್ರಭ ವಾರ್ತೆ ಚಿತ್ರದುರ್ಗ ಪಂಚ ರಾಜ್ಯಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಕ್ರಮವಾಗಿ ಹಣ ಸಂಗ್ರಹಿಸಿ ರವಾನಿಸಲು ಮುಂದಾಗಿದ್ದಾರೆಂದು ಬಿಜೆಪಿ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಬಿಜೆಪಿ ವತಿಯಿಂದ ಸೋಮವಾರ ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾದ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾಜಿ ಕಾರ್ಪೊರೇಟರ್ ಪತಿ ಅಂಬಿಕಾಪತಿಯವರ ಮನೆ ಹಾಗೂ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಸಿಕ್ಕಿರುವ ಕಂತೆ ಕಂತೆ ಹಣ ಯಾರದ್ದು, ಇದಕ್ಕೆ ಹೊಣೆಗಾರರು ಯಾರು ಎನ್ನುವುದ ಕಾಂಗ್ರೆಸ್‍ನವರೆ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು. ಪಂಚಾಯಿತಿಗೊಂದು ಬಾರ್, ಪಂಚೆಗೊಂದು ಕ್ವಾಟರ್ ಕೊಡಲು ಹೊರಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕೆ ತಿಂಗಳಲ್ಲಿ ದಿವಾಳಿಯತ್ತ ಸಾಗುತ್ತಿದೆ.ಅಧಿಕಾರ ಉಳಿಸಿಕೊಳ್ಳಲು ಕಚ್ಚಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರುಗಳ ಕಾಟಕ್ಕೆ ರಾಜ್ಯದಲ್ಲಿ ರೈತರು, ಗುತ್ತಿಗೆದಾರರು ಬದುಕುವಂತಿಲ್ಲ. ಈಗಾಗಲೆ ನೂರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದ್ಯಾವುದನ್ನು ಲೆಕ್ಕಿಸದ ರಾಜ್ಯ ಸರ್ಕಾರ ಪಂಚರಾಜ್ಯ ಚುನಾವಣೆಗೆ ಹಣ ಸಂಗ್ರಹಿಸುತ್ತಿದೆ ಎಂದರು. ಮೈಸೂರಿನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಣ ಲೂಟಿ ಹೊಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ನಿರ್ಮಿಸುವ ಅಪಾರ್ಟ್‍ಮೆಂಟ್‍ಗಳಲ್ಲಿ ಇಂತಿಷ್ಟು ಹಣ ನಿಗದಿಪಡಿಸಿ ಸಂಗ್ರಹಣೆಯಲ್ಲಿ ತೊಡಗಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಮಾತೆತ್ತಿದರೆ ಪ್ರಧಾನಿ ಮೋದಿ ಕಡೆ ಕೈತೋರಿಸಿ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಯೋಜನೆಗಳನ್ನು ಬಿಟ್ಟರೆ ಕಾಂಗ್ರೆಸ್ ಯಾವುದೇ ಹೊಸ ಕಾಮಗಾರಿಗಳನ್ನು ಆರಂಭಿಸಿಲ್ಲ. ಇಂತಹ ಭ್ರಷ್ಟ ಸರ್ಕಾರಕ್ಕೆ ರಾಜ್ಯದ ಜನ ತಕ್ಕಪಾಠ ಕಲಿಸಲಿದ್ದಾರೆಂದು ಎಚ್ಚರಿಸಿದರು.

ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ, ಚುನಾವಣೆ ಪೂರ್ವದಲ್ಲಿಯೇ ಉಚಿತ ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ರೈತರಿಗೆ ಗುಣಮಟ್ಟದ ವಿದ್ಯುತ್ ನೀಡುತ್ತಿಲ್ಲ. ಬೆಂಗಳೂರಿನಲ್ಲಿ ಮಾಜಿ ಕಾರ್ಪೊರೇಟರ್ ಹಾಗೂ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಕೋಟಿಗಟ್ಟಲೆ ಹಣ ಸಿಕ್ಕಿರುವುದು ಯಾರಿಗೆ ಸೇರಿದ್ದು ಎನ್ನುವುದು ತನಿಖೆಯಾಗಬೇಕಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಯೋಜನೆಗಳನ್ನು ಉದ್ಘಾಟಿಸು ತ್ತಿರುವ ಕಾಂಗ್ರೆಸ್‍ನವರು ಉಚಿತ ಭಾಗ್ಯಗಳಿಗೆ ಹಣ ಹೊಂದಿಸಲು ಆಗದೆ ಪರದಾಡುತ್ತಿದ್ದಾರೆಂದು ಟೀಕಿಸಿದರು. ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಹಾಗೂ ಸೋನಿಯಾ ಗಾಂಧಿಯವರನ್ನು ಖುಷಿಪಡಿಸುವುದಕ್ಕಾಗಿ ರಾಜ್ಯ ಸರ್ಕಾರ ರಾತ್ರೋರಾತ್ರಿ ತಮಿಳುನಾಡಿಗೆ ನೀರು ಹರಿಸಿ ರಾಜ್ಯದಲ್ಲಿರುವ ಜಲಾಶಯಗಳನ್ನು ಖಾಲಿ ಮಾಡಿದೆ ಎಂದರು.

ಬೆಳೆ ಉಳಿಸಿಕೊಳ್ಳಲು ರೈತರ ಹರಸಾಹಸ

ಶಾಸಕ ಎಂ.ಚಂದ್ರಪ್ಪ ಮಾತನಾಡಿ, ಇಂತಹ ಭ್ರಷ್ಟ ಸರ್ಕಾರವನ್ನು ಹಿಂದೆಂದು ಕಂಡಿರಲಿಲ್ಲ. ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸಪಡುತ್ತಿದ್ದಾರೆ. ಬೆಲೆ ಏರಿಕೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದರೆ. ಮೊದಲೆ ಬರಗಾಲಕ್ಕೆ ತುತ್ತಾಗಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಜಿಲ್ಲೆಗೆ ನೀರಾವರಿ ಯೋಜನೆಯನ್ನು ಜಾರಿಗೆ ತಂದು ರೈತರ ಹೊಲಗಳಿಗೆ ನೀರು ಹರಿಸಲಿ ಎಂದು ಒತ್ತಾಯಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಉಪಾಧ್ಯಕ್ಷ ಸಂಪತ್‍ಕುಮಾರ್, ಪ್ರಧಾನ ಕಾರ್ಯದರ್ಶಿ ಜೈಪಾಲ್, ಯುವ ಮುಖಂಡರುಗಳಾದ ಜಿ.ಎಸ್.ಅನಿತ್‍ಕುಮಾರ್, ರಘುಚಂದನ್, ನಗರಾಧ್ಯಕ್ಷ ನವೀನ್ ಚಾಲುಕ್ಯ, ಗ್ರಾಮಾಂತರ ಅಧ್ಯಕ್ಷ ಕಲ್ಲೇಶಯ್ಯ, ಎ.ರೇಖ, ದಗ್ಗೆ ಶಿವಪ್ರಕಾಶ್, ನಂದಿ ನಾಗರಾಜ್, ಶ್ಯಾಮಲಶಿವಪ್ರಕಾಶ್, ರೈತ ಮೋರ್ಚ ಜಿಲ್ಲಾಧ್ಯಕ್ಷ ವೆಂಕಟೇಶ್‍ಯಾದವ್, ಮಲ್ಲಿಕಾರ್ಜುನ್, ಮಾಧುರಿಗಿರೀಶ್, ಶಿವಣ್ಣಾಚಾರ್, ನರೇಂದ್ರ, ಶಾಂತಮ್ಮ, ಕಾಂಚನ, ಕಿರಣ್, ಶಿವಣ್ಣಾಚಾರ್, ಜಯಪಾಲಯ್ಯ, ಡಾ.ಪಿ.ಎಂ.ಮಂಜುನಾಥ್, ಹೇಮಂತ್ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಾಕ್ಸ್‌....

ಸಿಎಂ,ಡಿಸಿಎಂರಿಂದ ರಾಜ್ಯಕ್ಕೆ ಉಪಯೋಗವಿಲ್ಲ

ರಾಜ್ಯದಲ್ಲಿ ಕುರ್ಚಿ ಉಳಿಸಿಕೊಳ್ಳುವ ಪೈಪೋಟಿಯಲ್ಲಿ ತೊಡಗಿರುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಂದ ರಾಜ್ಯಕ್ಕೆ ಏನೂ ಉಪಯೋಗವಿಲ್ಲ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು. ಭದ್ರಾ ಮೇಲ್ದಂಡೆ ಯೋಜನೆಗಾಗಿ ನಮ್ಮ ಸರ್ಕಾರ 5,300 ಕೋಟಿ ರು.ಗಳನ್ನು ಘೋಷಿಸಿದೆ. ಬಿಡುಗಡೆಯೂ ಮಾಡುತ್ತದೆ. ಆದರೆ ನೀವುಗಳು ಕಮಿಷನ್ ಹೊಡೆಯಲು ಕಾಯುತ್ತೀದ್ದೀರ ಪ್ರಶ್ನಿಸಿದರು.

ತುಮಕೂರು, ಚಿತ್ರದುರ್ಗ, ದಾವಣಗೆರೆ ನೇರ ರೈಲು ಮಾರ್ಗ ಯೋಜನೆಗೂ ಹಣ ಬಿಡುಗಡೆಯಾಗಿಲ್ಲ. ದಲಿತರಿಗಾಗಿ ಮೀಸಲಿಟ್ಟಿದ್ದ ಹನ್ನೊಂದುವರೆ ಸಾವಿರ ಕೋಟಿ ರು.ಗಳನ್ನು ಬೇರೆ ಉದ್ದೇಶಕ್ಕೆ ಬಳಸಲಾಗಿದೆ. ಯಾವ ಪುರುಷಾರ್ಥಕ್ಕಾಗಿ ದಲಿತರ ಮತಗಳನ್ನು ಸೆಳೆಯಲು ಹೊರಟಿದ್ದೀರ. ರಾಜ್ಯದ ಜನ ನಿಮ್ಮನ್ನು ಕ್ಷಮಿಸುವುದಿಲ್ಲ. ಪ್ರಧಾನಿ ಮೋದಿ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿ ಕಡೆ ಗಮನ ಕೊಡಿ. ಕತ್ತಲೆ ಭಾಗ್ಯದಿಂದ ಜನರಿಗೆ ಮುಕ್ತಿ ಕೊಡಿ ಎಂದರು.------------

ಪೋಟೋ ಕ್ಯಾಪ್ಸನ

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಸೋಮವಾರ ಚಿತ್ರದುರ್ಗದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಸಿ.ಟಿ.ರವಿ ಮಾತನಾಡಿದರು. ----------ಫೋಟೋ ಫೈಲ್ ನೇಮ್ 16 ಸಿಟಿಡಿ6