ಎಸ್ಸಿಎಸ್ಪಿ-ಟಿಎಸ್ಪಿ ಅಸಮರ್ಪಕ ಜಾರಿಗೆ ಸಿಎಂ ಗರಂ

| N/A | Published : Aug 17 2025, 01:41 AM IST

ಸಾರಾಂಶ

ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆ ಅಡಿ ಕಳೆದ 10 ವರ್ಷಗಳಲ್ಲಿ 2.97 ಲಕ್ಷ ಕೋಟಿ ರು. ವ್ಯಯಿಸಲಾಗಿದೆ. ಇಷ್ಟಾದರೂ ನಿರೀಕ್ಷಿತ ಮಟ್ಟದಲ್ಲಿ ಬದಲಾವಣೆಗಳು ಕಂಡುಬಂದಿಲ್ಲ ಎಂದರೆ ಅದು ನಾಚಿಕೆಗೇಡಿನ ವಿಚಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

  ಬೆಂಗಳೂರು :  ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆ ಅಡಿ ಕಳೆದ 10 ವರ್ಷಗಳಲ್ಲಿ 2.97 ಲಕ್ಷ ಕೋಟಿ ರು. ವ್ಯಯಿಸಲಾಗಿದೆ. ಇಷ್ಟಾದರೂ ನಿರೀಕ್ಷಿತ ಮಟ್ಟದಲ್ಲಿ ಬದಲಾವಣೆಗಳು ಕಂಡುಬಂದಿಲ್ಲ ಎಂದರೆ ಅದು ನಾಚಿಕೆಗೇಡಿನ ವಿಚಾರ. ಹೀಗಾಗಿ ಈ ಯೋಜನೆ ಸಮರ್ಪಕ ಅನುಷ್ಠಾನವಾಗುತ್ತಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದಲ್ಲಿ ಶನಿವಾರ ತಮ್ಮ ಅಧ್ಯಕ್ಷತೆಯಲ್ಲಿ ರಾಜ್ಯ ಅನುಸೂಚಿತ ಜಾತಿಗಳು/ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್ತಿನ ಸಭೆ ನಡೆಸಿದ ಅವರು, ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆ ಅನುಷ್ಠಾನದಲ್ಲಾಗುತ್ತಿರುವ ಹಿನ್ನಡೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆಯಂತೆ ಪ್ರತಿ ವರ್ಷದ ಬಜೆಟ್‌ನಲ್ಲಿ ಶೇ.24.1ರಷ್ಟು ಅನುದಾನ ನೀಡಲಾಗುತ್ತಿದೆ. ಆದರೆ, 2019-20ರಲ್ಲಿ ನಿಗದಿತ ಶೇಕಡಾವಾರು ಅನುದಾನಕ್ಕಿಂತ ಕಡಿಮೆ ಅನುದಾನ ಬಿಡುಗಡೆ ಮಾಡಲಾಗಿದೆ. ಒಟ್ಟಾರೆ 10 ವರ್ಷಗಳಲ್ಲಿ ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆ ಅಡಿ 2.97 ಲಕ್ಷ ಕೋಟಿ ರು. ವೆಚ್ಚ ಮಾಡಲಾಗಿದೆ. ಪರಿಶಿಷ್ಟ ಜಾತಿ-ಪಂಗಡದವರ ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಬದಲಾವಣೆ, ಜೀವನ ಮಟ್ಟ ಮತ್ತು ವಾಸಸ್ಥಳಗಳ ಅಭಿವೃದ್ಧಿಪಡಿಸುವುದು ಕಾಯ್ದೆಯ ಉದ್ದೇಶ. ಆದರೆ, ಕಳೆದ 10 ವರ್ಷಗಳಲ್ಲಿ ನಿರೀಕ್ಷಿತ ಬದಲಾವಣೆ ಸಾಧ್ಯವಾಗಿಲ್ಲ. ಹೀಗಾಗಿ ಕಾಯ್ದೆ ಅಡಿ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗುತ್ತಿದೆಯೇ ಎಂಬ ಬಗ್ಗೆ ಪರಿಶೀಲಿಸಬೇಕು ಎಂದರು.

ಕೇಂದ್ರದಿಂದ ಹಣ ಬಿಡುಗಡೆಯಾಗಿಲ್ಲ:

ಕಳೆದ ವರ್ಷ ಎಸ್‌ಸಿಎಸ್‌ಪಿ-ಟಿಎಸ್‌ಪಿ ಅಡಿ ಕಲ್ಯಾಣ ಕಾರ್ಯಕ್ರಮಗಳಿಗಾಗಿ ರಾಜ್ಯ ಸರ್ಕಾರದಿಂದ 38,793 ಕೋಟಿ ರು. ಬಿಡುಗಡೆಯಾಗಿದ್ದು, 38,717 ಕೋಟಿ ರು. ವ್ಯಯಿಸಲಾಗಿದೆ. ಶೇ.97ರಷ್ಟು ಪ್ರಗತಿ ಸಾಧಿಸಲಾಗಿದೆ. ಆದರೆ, ಕೇಂದ್ರ ಸರ್ಕಾರದಿಂದ 880 ಕೋಟಿ ರು. ಅನುದಾನ ಬಿಡುಗಡೆಯಾಗಿಲ್ಲ. ಅದನ್ನು ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ಸಿದ್ದರಾಮಯ್ಯ ನಿರ್ದೇಶಿಸಿದರು.

ದೇಶದಲ್ಲೇ ರಾಜ್ಯಕ್ಕೆ ಮೊದಲ ಸ್ಥಾನ:

ಕಾಯ್ದೆ ಜಾರಿಯಾಗಿ 10 ವರ್ಷಗಳಾದ ಹಿನ್ನೆಲೆಯಲ್ಲಿ ಅನುಷ್ಠಾನ ಪ್ರಗತಿ ಕುರಿತು ಐಸೆಕ್‌ನಿಂದ ಮೌಲ್ಯಮಾಪನ ನಡೆಸಲಾಗಿದೆ. ಎಸ್ಸಿ/ಎಸ್ಟಿ ಜನಸಂಖ್ಯೆ ಹೆಚ್ಚಿರುವ 39 ತಾಲೂಕುಗಳನ್ನು ಗುರುತಿಸಿ ಅಧ್ಯಯನ ಕೈಗೊಳ್ಳಲಾಗಿದೆ. ಶಿಕ್ಷಣ, ಆರೋಗ್ಯ, ಜೀವನಮಟ್ಟ ಸುಧಾರಣೆ ಮತ್ತು ಬಡತನ ನಿರ್ಮೂಲನೆ ಮಾನದಂಡಗಳನ್ನು ಪರಿಗಣಿಸಿ ಸಮೀಕ್ಷೆ ಮಾಡಲಾಗಿದೆ. ಅದರಲ್ಲಿ ಅಭಿವೃದ್ಧಿ ಅನುದಾನ ಬಿಡುಗಡೆಯಲ್ಲಿ ಶೇ.9.6ರಷ್ಟು ವಾರ್ಷಿಕ ಪ್ರಗತಿ ಸಾಧಿಸಿರುವುದು ಕಂಡು ಬಂದಿದೆ. ದೇಶದ ಇತರ ರಾಜ್ಯಗಳಿಗೆ ಕರ್ನಾಟಕ ವಿವಿಧ ಮಾನದಂಡಗಳಲ್ಲಿ ಮುಂಚೂಣಿಯಲ್ಲಿದೆ ಎಂದು ಸಿಎಂ ವಿವರಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಡಾ.ಎಚ್‌.ಸಿ.ಮಹದೇವಪ್ಪ, ಸತೀಶ್‌ ಜಾರಕಿಹೊಳಿ, ಪ್ರಿಯಾಂಕ್‌ ಖರ್ಗೆ, ಡಾ. ಎಂ.ಸಿ.ಸುಧಾಕರ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಇತರರಿದ್ದರು.

ದೇವದಾಸಿ ಪದ್ಧತಿ ಇದ್ದರೆ ತಲೆತಗ್ಗಿಸಬೇಕು: ಸಿಎಂ

ದೇವದಾಸಿ ಪುನರ್‌ವಸತಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವ ಉದ್ದೇಶದಿಂದ ಸೆಪ್ಟೆಂಬರ್‌ ಮೊದಲ ವಾರದಿಂದ ಮರು ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ದೇವದಾಸಿ ಪದ್ಧತಿ ಸಂಪೂರ್ಣ ನಿಷೇಧಕ್ಕೆ ಕಾನೂನಿನಲ್ಲಿ ಸೂಕ್ತ ತಿದ್ದುಪಡಿ ತರಲಾಗುವುದು. ಹೆಣ್ಣು ಮಕ್ಕಳನ್ನು ದೇವದಾಸಿ ಪದ್ಧತಿಗೆ ದೂಡುವ ಪಾಲಕರು ಸೇರಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಲಾಗುವುದು. ಅಲ್ಲದೆ, ದೇವದಾಸಿ ಪದ್ಧತಿ ಇನ್ನೂ ಜೀವಂತವಾಗಿದೆ ಎಂದರೆ ನಾವೆಲ್ಲರೂ ತಲೆತಗ್ಗಿಸಬೇಕಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಇಲಾಖೆಗಳು ಕಾಯ್ದೆಯ ಆಶಯಕ್ಕೆ ಭಂಗ ಬರದಂತೆ ಕೆಲಸ ಮಾಡಬೇಕು. ಆಯಾ ಇಲಾಖೆಗಳು ಸಮರ್ಪಕ ಕ್ರಿಯಾ ಯೋಜನೆ ರೂಪಿಸಿ ಪರಿಶಿಷ್ಟ ಜಾತಿ/ಪಂಗಡದ ಜನರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪರಿಸ್ಥಿತಿ ಸುಧಾರಣೆಗೆ ಯೋಜನಾಬದ್ಧವಾಗಿ ಕಾರ್ಯನಿರ್ವಹಿಸಬೇಕು. ಅನುಷ್ಠಾನ ಇಲಾಖೆಗಳು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ವಿವಿಧ ಕಲ್ಯಾಣ ಕಾರ್ಯಕ್ರಮಗಳಡಿ ಬ್ಯಾಂಕ್‌ಗಳು ಸಕಾಲದಲ್ಲಿ ಸಾಲ ಸೌಲಭ್ಯ ನೀಡಬೇಕು. ಒಂದು ವೇಳೆ ವಿಳಂಬ ಮಾಡುವ ಬ್ಯಾಂಕ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರಸಕ್ತ ವರ್ಷದಲ್ಲಿ 42 ಸಾವಿರ ಕೋಟಿ ರು. ಹಂಚಿಕೆ ಮಾಡಲಾಗಿದ್ದು, ಶೇ. 100ರಷ್ಟು ವ್ಯಯ ಮಾಡಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯವಹಿಸುವ ಅಧಿಕಾರಿಗಳ ವಿರುದ್ಧ ಕಾಯ್ದೆ ಪ್ರಕಾರ ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Read more Articles on