ಕೇಂದ್ರ ಸರ್ಕಾರದಿಂದ ಪಕ್ಷಪಾತ : ಸಿಎಂ ಸಿದ್ದರಾಮಯ್ಯ ಕಿಡಿ

| N/A | Published : Aug 16 2025, 05:41 AM IST

Siddaramaiah speech
ಕೇಂದ್ರ ಸರ್ಕಾರದಿಂದ ಪಕ್ಷಪಾತ : ಸಿಎಂ ಸಿದ್ದರಾಮಯ್ಯ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರ ತೆರಿಗೆ, ಮತ್ತಿತರ ಸಂಪನ್ಮೂಲಗಳ ಹಂಚಿಕೆಯಲ್ಲಿ ನಿಷ್ಪಕ್ಷಪಾತ ಧೋರಣೆ ಅನುಸರಿಸುತ್ತಿಲ್ಲ. ಐಟಿ, ಇ.ಡಿ., ಸಿಬಿಐನಂಥ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಈ ಬಗ್ಗೆ ನಾಗರಿಕರು ಧ್ವನಿ ಎತ್ತಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

 ಬೆಂಗಳೂರು :  ಕೇಂದ್ರ ಸರ್ಕಾರ ತೆರಿಗೆ, ಮತ್ತಿತರ ಸಂಪನ್ಮೂಲಗಳ ಹಂಚಿಕೆಯಲ್ಲಿ ನಿಷ್ಪಕ್ಷಪಾತ ಧೋರಣೆ ಅನುಸರಿಸುತ್ತಿಲ್ಲ. ಐಟಿ, ಇ.ಡಿ., ಸಿಬಿಐನಂಥ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಈ ಬಗ್ಗೆ ನಾಗರಿಕರು ಧ್ವನಿ ಎತ್ತಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪೆರೇಡ್ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ನಾಡಿನ ಜನತೆಯನ್ನುದ್ದೇಶಿಸಿ ಮಾತನಾಡಿದರು.

ಕೇಂದ್ರ ಸರ್ಕಾರ ಸಂಪನ್ಮೂಲಗಳ ಹಂಚಿಕೆಯಲ್ಲಿ ಅನುಸರಿಸುತ್ತಿರುವ ಧೋರಣೆಗಳ ಬಗ್ಗೆ ವಿವಿಧ ವೇದಿಕೆಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನು ಐಟಿ, ಇ.ಡಿ, ಸಿಬಿಐ ಸೇರಿ ಸಾಂವಿಧಾನಿಕ ಸಂಸ್ಥೆಗಳು ಪ್ರಜಾಪ್ರಭುತ್ವದ ಹಾಗೂ ಸಂವಿಧಾನದ ನೈಜ ಮೌಲ್ಯಗಳ ಉಳಿವಿಗಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಬಗ್ಗೆ ಜವಾಬ್ದಾರಿಯುತ ನಾಗರಿಕರು ಪ್ರಶ್ನಿಸಬೇಕು ಎಂದು ಹೇಳಿದರು.

ಕರ್ನಾಟಕ ಅಭಿವೃದ್ಧಿ ಮಾದರಿ:

ರಾಜ್ಯವು ತನ್ನದೇ ಆದ ಅಭಿವೃದ್ಧಿ ಮಾದರಿಗಳನ್ನು ನಿರ್ಮಿಸಿದೆ. ಇದಕ್ಕೆ ‘ಕರ್ನಾಟಕ ಅಭಿವೃದ್ಧಿ ಮಾದರಿ’ಎಂಬ ಹೆಸರಿನಲ್ಲಿ ಮನ್ನಣೆ ದೊರೆತಿರುವುದು ಹೆಮ್ಮೆಯ ಸಂಗತಿ. ವಿಶ್ವಸಂಸ್ಥೆ ಮುಖ್ಯಸ್ಥ ಫಿಲೆಮಾನ್ ಯಾಂಗ್‌ ಕರ್ನಾಟಕಕ್ಕೆ ಬಂದು ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ ಎಂದರು.

ದೇಶದ ಶೇ.80ರಷ್ಟು ಸಂಪತ್ತು ಶೇಖರಣೆಯಾದ ಶೇ.10ರಷ್ಟು ಮಂದಿ ಶೇ.3ರಷ್ಟು ಜಿಎಸ್‌ಟಿ ಪಾವತಿ ಮಾಡುತ್ತಿದ್ದಾರೆ. ಹೊಟ್ಟೆ ಬಟ್ಟೆ ಕಟ್ಟಿ ದುಡಿಯುವ ಶೇ.90ರಷ್ಟು ಮಂದಿ ಶೇ.97ರಷ್ಟು ಜಿಎಸ್‌ಟಿ ಪಾವತಿಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಯಾವ ಆರ್ಥಿಕತೆ ಮುಂದುವರೆಯಲು ಸಾಧ್ಯ? ಸಂವಿಧಾನದ ಆಶಯಗಳು ಈಡೇರುವುದು ಹೇಗೆ ಎಂದು ಪ್ರಶ್ನಿಸಿದ ಅವರು, ಈ ಅಸಮಾನತೆ ಪರಿಹಾರಕ್ಕೆ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜನಕಲ್ಯಾಣಕ್ಕಾಗಿ ಆರಂಭಿಸಿದೆ ಎಂದರು.

ಪ್ರಾದೇಶಿಕ ಅಸಮಾನತೆ ಸರಿಪಡಿಸ್ತೇವೆ:

ಪ್ರಾದೇಶಿಕ ಅಸಮಾನತೆ ಹೋಗಲಾಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇವೆ. ಇದಕ್ಕಾಗಿ ರೂಪಿಸಿದ ಪ್ರೊ.ಗೋವಿಂದರಾವ್ ಸಮಿತಿ ವರದಿ ನೀಡಿದ ಕೂಡಲೇ ಅದರ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಎಸ್‌ಇಪಿಗಾಗಿ ಪ್ರೊ.ಸುಖದೇವ್ ಥೋರಟ್ ಸಮಿತಿ ವರದಿ ನೀಡಿದೆ. ಪೂರ್ಣ ಪ್ರಮಾಣದಲ್ಲಿ ರಾಜ್ಯದ್ದೇ ಆದ ಶಿಕ್ಷಣ ನೀತಿ ಸಿದ್ಧಪಡಿಸಲು ಕ್ರಮವಹಿಸಿರುವುದು ಇದೇ ಮೊದಲು. ವರದಿಯನ್ನು ಗಂಭೀರವಾಗಿ ಪರಿಶೀಲಿಸಿ ಅದರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

6 ಲಕ್ಷಕ್ಕೂ ಹೆಚ್ಚಿನ ಉದ್ಯೋಗ ಸೃಷ್ಟಿ:

ಉದ್ಯೋಗ ಸೃಜನೆಯ ದೃಷ್ಟಿಯಿಂದ ರಾಜ್ಯ ಸರ್ಕಾರ ಪೂರಕ ಉಪಕ್ರಮಗಳನ್ನು ಕೈಗೊಂಡಿದೆ. ಕಳೆದ ಫೆಬ್ರವರಿಯಲ್ಲಿ ‘ಇನ್ವೆಸ್ಟ್ ಕರ್ನಾಟಕ’ದಲ್ಲಿ ಒಟ್ಟು 3250 ಉದ್ದಿಮೆದಾರರು ಭಾಗವಹಿಸಿದ್ದು, ಒಟ್ಟು 98 ಕಂಪನಿಗಳೊಂದಿಗೆ 6,23,970 ಕೋಟಿ ರು. ಹೂಡಿಕೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. 4,03,533 ಕೋಟಿ ರು. ಹೂಡಿಕೆ ಮಾಡಲು 1,101 ಕಂಪನಿಗಳು ಸಂಬಂಧಿಸಿದ ಸಮಿತಿಗಳಿಂದ ಅನುಮೋದನೆ ಪಡೆದಿವೆ. ಇವುಗಳಿಂದ ರಾಜ್ಯದಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚಿನ ಉದ್ಯೋಗಗಳು ಸೃಜನೆಯಾಗುವ ನಿರೀಕ್ಷೆಯಿದೆ ಎಂದರು.

ಪ್ರಸಕ್ತ ಬಜೆಟ್‌ನಲ್ಲಿ ಆಡಳಿತ ಇಲಾಖೆಗಳಿಂದ ರಸ್ತೆಗಳ ಅಭಿವೃದ್ಧಿಗೆ ಅನುದಾನ ಒದಗಿಸಿರುವುದಲ್ಲದೆ, ರಸ್ತೆ, ಸೇತುವೆ ಮುಂತಾದ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ‘ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ’ ಯೋಜನೆ ಆರಂಭಿಸಿ ಈ ವರ್ಷ 8 ಸಾವಿರ ಕೋಟಿ ರು. ನೀಡುತ್ತಿದ್ದೇವೆ ಎಂದು ತಿಳಿಸಿದರು.

ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಯೇ ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಸಾಮರಸ್ಯದಿಂದ ಕೂಡಿದ ಸಮೃದ್ಧ ಕರ್ನಾಟಕ ನಿರ್ಮಾಣ ಮೂಲಕ ಸಶಕ್ತ ಭಾರತ ಕಟ್ಟೋಣ. ಸ್ವಾತಂತ್ರ್ಯ, ಸಂವಿಧಾನ ಹಾಗೂ ನೈಜ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜೀವಕ್ಕಿಂತ ಮಿಗಿಲು ಎಂದು ಭಾವಿಸೋಣ. ಸಾಮಾಜಿಕ, ಆರ್ಥಿಕ, ರಾಜಕೀಯ ಸ್ವಾತಂತ್ರ್ಯ ಹಾಗೂ ನ್ಯಾಯಗಳನ್ನು ನಿರಂತರವಾಗಿ ರಕ್ಷಿಸಿಕೊಳ್ಳುವ ಪ್ರತಿಜ್ಞೆ ಮಾಡಿ ಈ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣಗೊಳಿಸೋಣ ಎಂದರು.

ಎತ್ತಿನಹೊಳೆ 2027ರ ವೇಳೆಗೆ ಪೂರ್ಣ

ಎತ್ತಿನಹೊಳೆ ಯೋಜನೆಯನ್ನು 2027ರ ವೇಳೆಗೆ ಪೂರ್ಣಗೊಳಿಸುವ ಗುರಿ ಹಾಕಿಕೊಂಡಿದ್ದೇವೆ. ನೀರಾವರಿ ಕ್ಷೇತ್ರದತ್ತವೂ ಸರ್ಕಾರ ಹೆಚ್ಚಿನ ಗಮನ ಹರಿಸಿದ್ದು, ಚುನಾವಣೆಗೂ ಮೊದಲು ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ರಾಜ್ಯದ ಪಶುಪಾಲಕ ಸಮುದಾಯಗಳ ಹಿತ ಕಾಪಾಡಲು ಆಕಸ್ಮಿಕವಾಗಿ ಮರಣ ಹೊಂದಿದ ಕುರಿ, ಮೇಕೆ ಹಾಗೂ ಇನ್ನಿತರ ಜಾನುವಾರುಗಳಿಗೆ ಅನುಗ್ರಹ ಯೋಜನೆಯಡಿ 80 ಕೋಟಿ ರು. ಪರಿಹಾರ ನೀಡಲಾಗಿದೆ. ವಲಸೆ ಕುರಿಗಾರರ ರಕ್ಷಣೆಗಾಗಿ ಕಾಯ್ದೆಯನ್ನೂ ಜಾರಿ ಮಾಡುತ್ತಿದ್ದೇವೆ ಎಂದು ಈ ವೇಳೆ ಸಿದ್ದರಾಮಯ್ಯ ತಿಳಿಸಿದರು.

Read more Articles on