ಸಾರಾಂಶ
ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿರುವುದು ಪಕ್ಷದ ಆಂತರಿಕ ವಿಷಯವಾಗಿದ್ದು, ಈ ಬಗ್ಗೆ ಪ್ರತಿಪಕ್ಷಗಳಿಗೆ ಉತ್ತರಿಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ
ಕನ್ನಡಪ್ರಭ ವಾರ್ತೆ ವಿಧಾನ ಪರಿಷತ್
ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿರುವುದು ಪಕ್ಷದ ಆಂತರಿಕ ವಿಷಯವಾಗಿದ್ದು, ಈ ಬಗ್ಗೆ ಪ್ರತಿಪಕ್ಷಗಳಿಗೆ ಉತ್ತರಿಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಗುರುವಾರ ಶೂನ್ಯವೇಳೆಯ ನಂತರ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿರುವ ಬಗ್ಗೆ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಸಭಾನಾಯಕರು ಭರವಸೆ ನೀಡಿದ್ದರು. ಅದರಂತೆ ಮುಖ್ಯಮಂತ್ರಿಗಳು ವಜಾ ಕಾರಣಗಳನ್ನು ತಿಳಿಸಬೇಕು. ರಾಜಣ್ಣ ಅವರು ರಾಜೀನಾಮೆ ಕೊಟ್ಟಿದ್ದರೆ ನಾವು ಕೇಳುತ್ತಿರಲಿಲ್ಲ. ವಜಾ ಮಾಡಿರುವ ಕಾರಣ ವಿವರಣೆ ನೀಡಬೇಕೆಂದು ಆಗ್ರಹಿಸಿದರು.
ಇದಕ್ಕೆ ಸಭಾನಾಯಕ ಬೋಸರಾಜು ಅವರು ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಹೇಳಿಲ್ಲ. ಬೇಕಾದರೆ ಕಡತ ತೆಗೆದು ನೋಡಬಹುದು ಎಂದು ಉತ್ತರಿಸಿದರು.ಈ ನಡುವೆ ಬಿಜೆಪಿಯ ಅನೇಕ ಸದಸ್ಯರು ಎದ್ದು ನಿಂತು ಮುಖ್ಯಮಂತ್ರಿಗಳು ಉತ್ತರ ನೀಡಬೇಕೆಂದು ಆಗ್ರಹಿಸತೊಡಗಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ ಬಗ್ಗೆ ವಿವರಣೆಯನ್ನು ಪಕ್ಷ ನೀಡಿತ್ತೇ ಎಂದೆಲ್ಲ ಪ್ರಶ್ನಿಸತೊಡಗಿದರು.
ಈ ನಡುವೆ ಬಿಜೆಪಿ ಸದಸ್ಯರ ಆಗ್ರಹಕ್ಕೆ ಉತ್ತರಿಸದೇ ಮುಖ್ಯಮಂತ್ರಿಗಳು ಸದನದಿಂದ ಹೊರಡಲು ಮುಂದಾದಾಗ, ಛಲವಾದಿ ನಾರಾಯಣಸ್ವಾಮಿ ಅವರು ಮುಖ್ಯಮಂತ್ರಿಗಳು ಪಲಾಯನವಾದ ಮಾಡಬಾರದು ಎಂದರು. ಆಗ ಪುನಃ ತಮ್ಮ ಆಸನಕ್ಕೆ ವಾಪಸಾದ ಮುಖ್ಯಮಂತ್ರಿಗಳು, ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರ ಕೊಡುವ ಅಗತ್ಯವಿಲ್ಲ. ಈಗಾಗಲೇ ಸಭಾನಾಯಕರು ಉತ್ತರ ಕೊಟ್ಟಿದ್ದಾರೆ. ಪಕ್ಷದ ಆಂತರಿಕ ವಿಷಯವಾಗಿರುವುದರಿಂದ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯವಿಲ್ಲ ಎಂದರು.