ಸಾರಾಂಶ
ಕನ್ನಡಪ್ರಭ ವಾರ್ತೆ, ಕಲಬುರಗಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಪ್ರವಾಹಪೀಡಿತ ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ 2 ಸುತ್ತು ವೈಮಾನಿಕ ಸಮೀಕ್ಷೆ ನಡೆಸಿದ್ದು, ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆ ನಡೆಸಿದರು. ಸಚಿವರಾದ ಎಂ.ಬಿ.ಪಾಟೀಲ್, ಕೃಷ್ಣ ಬೈರೇಗೌಡ ಮತ್ತು ಪ್ರಿಯಾಂಕ್ ಖರ್ಗೆ, ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್ ಸಿಂಗ್ ಅವರಿಗೆ ಸಾಥ್ ನೀಡಿದರು.ಮಂಗಳವಾರ ಬೆಳಗ್ಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ, ಪ್ರವಾಹದಿಂದಾಗಿ ಭೀಮಾ ತೀರದ ಪ್ರದೇಶಗಳಲ್ಲಿ ಉಂಟಾಗಿರುವ ಹಾನಿ ಬಗ್ಗೆ ವಿಮಾನ ನಿಲ್ದಾಣದಲ್ಲೇ ಅಧಿಕಾರಿಗಳ ಸಭೆ ನಡೆಸಿದರು. ವಿಜಯಪುರ, ಕಲಬರಗಿ, ಯಾದಗಿರಿ, ಬೀದರ್ ಜಿಲ್ಲೆಗಳಿಗೆ ಸೇರಿದ ಹಿರಿಯ ಅಧಿಕಾರಿಗಳು, ಉಸ್ತುವಾರಿ ಕಾರ್ಯದರ್ಶಿಗಳು ಸಭೆಯಲ್ಲಿ ಹಾಜರಿದ್ದು, ಮಳೆ, ಹಾನಿಯ ಸಮಗ್ರ ಮಾಹಿತಿ ನೀಡಿದರು.
ಬಳಿಕ, ಸಚಿವರ ಜೊತೆ 2 ಸುತ್ತುಗಳಲ್ಲಿ ಪ್ರವಾಹಪೀಡಿತ ಭೀಮಾ ತೀರದ ಗ್ರಾಮಗಳ ವೈಮಾನಿಕ ಸಮೀಕ್ಷೆ ನಡೆಸಿದರು. ಸಮೀಕ್ಷೆ ಬಳಿಕ, ಕಲಬುರಗಿ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಮತ್ತೊಮ್ಮೆ ನಾಲ್ಕೂ ಜಿಲ್ಲೆಗಳ ಶಾಸಕರು, ಸಚಿವರು ಮತ್ತು ಅಧಿಕಾರಿಗಳ ಸಭೆ ನಡೆಸಿದರು. ಬಳಿಕ, ಸುದ್ದಿಗೋಷ್ಠಿ ನಡೆಸಿ, ಅತಿವೃಷ್ಟಿಪೀಡಿತ ಪ್ರದೇಶದ ರೈತರಿಗೆ ಪರಿಹಾರ ಘೋಷಣೆ ಮಾಡಿದರು.ಭೀಮೆಯ ರೌದ್ರ ನರ್ತನ ಕಂಡ ಸಿಎಂ:ಸಮೀಕ್ಷೆ ವೇಳೆ, ಸಿಎಂ ಅವರು ಕಲಬುರಗಿ ಜಿಲ್ಲೆಯ ಅಫಜಲ್ಪುರದಲ್ಲಿರುವ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೊನ್ನ ಬ್ಯಾರೇಜ್, ಸನ್ನತಿ ಬ್ಯಾರೇಜ್, ಆಲಮೇಲ್ ಬಳಿಯ ಬ್ರಿಡ್ಜ್ ಕಂ ಬ್ಯಾರೇಜ್ ಸೇರಿ 11 ಸ್ಥಳಗಳ ವೀಕ್ಷಣೆ ನಡೆಸಿದರು. ಜನ ವಸತಿ, ಪೈರು ಬೆಳೆದು ನಿಂತಿದ್ದ ಹೊಲಗದ್ದೆಗಳಿಗೆ ಜಲರಾಶಿ ಹಿಗ್ಗಾಮುಗ್ಗಾ ನುಗ್ಗಿ, ಎಲ್ಲವನ್ನು ಆಪೋಷನ ಪಡೆದದ್ದನ್ನು ಕಂಡು ಮರುಗಿದರು.
ಸಿದ್ದರಾಮಯ್ಯ ಹಾಗೂ ಸಚಿವರ ವೈಮಾನಿಕ ಸಮೀಕ್ಷೆ 2 ಸುತ್ತಲ್ಲಿ ನಡೆಯಿತು. ಮೊದಲ ಸುತ್ತಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಹಾಗೂ ಸಚಿವರು ಕಲಬುರಗಿ, ಬೀದರ, ಯಾದಗಿರಿ, ವಿಜಯಪುರ ಜಿಲ್ಲೆಗಳ ವೀಕ್ಷಣೆ ಮಾಡಿದರು. ಮಧ್ಯಾಹ್ನ ಭೋಜನದ ನಂತರ ನಡೆದ ಸಮೀಕ್ಷೆಯಲ್ಲಿ ಮತ್ತೊಮ್ಮೆ ಬೀದರ್ ಭಾಗದಲ್ಲಿ ಸುತ್ತಾಡಿ, ಅಲ್ಲಿನ ಅತಿವೃಷ್ಟಿ ಹಾನಿಯನ್ನು ಕಣ್ಣಾರೆ ಕಂಡರು.20 ವರ್ಷಗಳ ನಂತರ ಈ ಪರಿಯಲ್ಲಿ ನಡೆದ ಭೀಮಾ ನದಿಯ ರೌದ್ರ ನರ್ತನ, ರೈತರ ಲಕ್ಷಾಂತರ ಎಕರೆ ಬೆಳೆ ಹಾನಿ, ಜನವಸತಿ ಗ್ರಾಮಗಳಿಗೆ ನೀರು ನುಗ್ಗಿ ಆಗಿರುವ ಹಾನಿ, ರಸ್ತೆ, ಸೇತುವೆಗಳೇ ಭೀಮಾರ್ಪಣವಾಗಿರುವುದು ಸೇರಿದಂತೆ ಪ್ರವಾಹ ಉಂಟು ಮಾಡಿರುವ ದಾಂಧಲೆಯನ್ನೆಲ್ಲ 2 ಗಂಟೆಗಳ ಕಾಲದ ವೈಮಾನಿಕ ಸಮೀಕ್ಷೆಯಲ್ಲಿ ವೀಕ್ಷಿಸಿ, ಮಮ್ಮಲ ಮರುಗಿದರು.