ನಗರಸಭೆಯ ಆಡಳಿತಾವಧಿಯಲ್ಲಿ ನಗರದ ಅಭಿವೃದ್ಧಿ ಜತೆಗೆ ಎಲ್ಲ ಸಮುದಾಯಗಳಿಗೂ, ಅದರಲ್ಲೂ ಶ್ರಮಿಕ ವರ್ಗಕ್ಕೆ ಅನುಕೂಲವಾಗುವ ಹಲವು ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಕಾರ್ಯಗಳಿಗೆ ಸಾರ್ವಜನಿಕರ ಸಹಕಾರವೂ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನ.3ರಂದು ನಗರಸಭೆ ವತಿಯಿಂದ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಹಾಗೂ ವಿವಿಧ ವರ್ಗಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಿದ್ದಾರೆ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ತಿಳಿಸಿದರು.

ನಗರಸಭೆ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಸಭೆಯ ಆಡಳಿತಾವಧಿಯಲ್ಲಿ ನಗರದ ಅಭಿವೃದ್ಧಿ ಜತೆಗೆ ಎಲ್ಲ ಸಮುದಾಯಗಳಿಗೂ, ಅದರಲ್ಲೂ ಶ್ರಮಿಕ ವರ್ಗಕ್ಕೆ ಅನುಕೂಲವಾಗುವ ಹಲವು ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಕಾರ್ಯಗಳಿಗೆ ಸಾರ್ವಜನಿಕರ ಸಹಕಾರವೂ ಕಾರಣವಾಗಿದೆ ಎಂದರು.

ಕೆಂಪೇಗೌಡರ ಪ್ರತಿಮೆ ಅನಾವರಣ: ಬೆಂಗಳೂರು ನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಆದರ್ಶಗಳು ಎಲ್ಲರಿಗೂ ಮಾದರಿಯಾಗಲಿ ಎಂಬ ಉದ್ದೇಶದಿಂದ ನಗರಸಭೆ ಆವರಣದಲ್ಲಿ ಅವರ ಪ್ರತಿಮೆ ಅನಾವರಣಗೊಳಿಸಲಾಗುವುದು. ಜಿಲ್ಲೆಯ ಮಾಗಡಿ ಮೂಲದ ಕೆಂಪೇಗೌಡರ ಪ್ರತಿಮೆ ನಗರದ ಹೆಮ್ಮೆಯ ಸಂಕೇತವಾಗಲಿದೆ. ಇದೇ ಆವರಣದಲ್ಲಿ ಈಗಾಗಲೇ ಡಾ. ಬಿ.ಆರ್. ಅಂಬೇಡ್ಕರ್, ಸಂವಿಧಾನ ಪೀಠಿಕೆ ಹಾಗೂ ಬಸವಣ್ಣನವರ ಪುತ್ಥಳಿಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಅರಸು ಸಭಾಂಗಣ ಲೋಕಾರ್ಪಣೆ:

ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಹೆಸರಿನಲ್ಲಿ ನಗರಸಭೆಯ ಮೇಲ್ಮಹಡಿಯಲ್ಲಿ ನಿರ್ಮಿಸಿರುವ ನೂತನ ಸಭಾಂಗಣವನ್ನು ಉದ್ಘಾಟಿಸಲಾಗುವುದು. ನಗರದ ಆಹಾರ ಸಂಸ್ಕೃತಿಗೆ ಉತ್ತೇಜನ ನೀಡುವ ಉದ್ದೇಶದಿಂದ ನಿರ್ಮಿಸಿರುವ 38 ಮಳಿಗೆಗಳ ಫುಡ್ ಕೋರ್ಟ್ ಹಾಗೂ ಕ್ಲಾಕ್ ಟವರ್‌ನ್ನೂ ಲೋಕಾರ್ಪಣೆಗೊಳಿಸಲಾಗುವುದು ಎಂದರು.

ಇದಲ್ಲದೆ, ರೋಟರಿ ವೃತ್ತದಲ್ಲಿರುವ ಸ್ವಾಮಿ ವಿವೇಕಾನಂದರ ಪುತ್ಥಳಿ ಸೌಂದರ್ಯೀಕರಣ ಹಾಗೂ ರೈಲು ನಿಲ್ದಾಣದ ಬಳಿಯ ಟಿಪ್ಪು ಸರ್ಕಲ್ ಅಭಿವೃದ್ಧಿ ಕಾಮಗಾರಿಗಳಿಗೂ ಆದ್ಯತೆ ನೀಡಲಾಗಿದೆ. 11 ಸಾವಿರ ಅಸಂಘಟಿತ ಕಾರ್ಮಿಕರಿಗೆ ವಿಮೆ

ನಗರದ ಸುಮಾರು 11 ಸಾವಿರ ಅಸಂಘಟಿತ ಕಾರ್ಮಿಕರಿಗೆ ಉಚಿತ ಜೀವವಿಮೆ ಸೌಲಭ್ಯ ಒದಗಿಸಲಾಗುತ್ತಿದ್ದು, ಇದು ದೇಶದಲ್ಲೇ ಮೊದಲ ಪ್ರಯತ್ನವಾಗಿದೆ ಎಂದು ಶೇಷಾದ್ರಿ ತಿಳಿಸಿದರು.

ವಿವಿಧ ವೃತ್ತಿಗಳಲ್ಲಿ ತೊಡಗಿರುವ ಶ್ರಮಿಕರಿಗೆ ನೆರವಾಗುವ ನಿಟ್ಟಿನಲ್ಲಿ ಬಡಗಿಗಳು, ಬಾರ್ ಬೆಂಡಿಂಗ್ ಕಾರ್ಮಿಕರು ಹಾಗೂ ಇತರ ಅರ್ಹ ವೃತ್ತಿಪರರಿಗೆ ಟೂಲ್ ಕಿಟ್‌ಗಳನ್ನು ವಿತರಿಸಲಾಗುವುದು. 250 ಮಹಿಳಾ ಸ್ವಸಹಾಯ ಸಂಘಗಳಿಗೆ ಅಗತ್ಯ ಸಲಕರಣೆಗಳನ್ನು ನೀಡಲಾಗುವುದು. ಟೀ ಅಂಗಡಿಗಳಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಟೀ ಲೋಟ ತೊಳೆಯಲು ಸ್ಟೀಮರ್‌ಗಳನ್ನು ವಿತರಿಸಲಾಗುವುದು ಎಂದು ಹೇಳಿದರು.

ನಗರದ 650 ಆಟೊ ಚಾಲಕರಿಗೆ ತಲಾ ಎರಡು ಜೊತೆ ಸಮವಸ್ತ್ರ, 270 ಫಿಲೇಚರಿ ಕಾರ್ಮಿಕರಿಗೆ ಉಡುಪು ಹಾಗೂ ಅಲೆಮಾರಿ ಸಮುದಾಯದವರು ಸ್ವಯಂ ಉದ್ಯೋಗ ಕೈಗೊಳ್ಳಲು ಅಗತ್ಯ ಪರಿಕರಗಳನ್ನು ವಿತರಿಸುವ ಕಾರ್ಯಕ್ರಮವೂ ನಡೆಯಲಿದೆ. ಬೀದಿಬದಿ ವ್ಯಾಪಾರಿಗಳು ಸೇರಿದಂತೆ ವಿವಿಧ ವರ್ಗಗಳ ದುಡಿಯುವ ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು.

ಎರಡು ವಾರ್ಡ್‌ಗಳಲ್ಲಿ ಯುಜಿಡಿ ಕಾಮಗಾರಿ:

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಅನುದಾನದಡಿ ನಗರದ 1 ಮತ್ತು 2ನೇ ವಾರ್ಡ್‌ಗಳಲ್ಲಿ ಸಂಪೂರ್ಣ ಒಳಚರಂಡಿ (ಯುಜಿಡಿ) ಕಾಮಗಾರಿಗೆ ಚಾಲನೆ ನೀಡಲಾಗುವುದು. ಇದರಿಂದ ಈ ಭಾಗದ ಒಳಚರಂಡಿ ವ್ಯವಸ್ಥೆ ಸುಧಾರಣೆಯಾಗಲಿದೆ ಎಂದು ತಿಳಿಸಿದರು.

ರಾಮನಗರ ಅಭಿವೃದ್ಧಿಗೆ ಇನ್ನೂ ಸಾಕಷ್ಟು ಕೆಲಸಗಳು ಬಾಕಿ ಇವೆ. ನಗರದ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳಿಗೆ ₹750 ಕೋಟಿ ವಿಶೇಷ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಗಿತ್ತು. ಈ ಸಂಬಂಧ ವಿವರವಾದ ಯೋಜನಾ ವರದಿ (ಡಿಪಿಆರ್) ತರಿಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯ ಅನುದಾನ ಬಿಡುಗಡೆಯಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಸಿಗಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ನ. 3ರಂದು ಮಧ್ಯಾಹ್ನ 3 ಗಂಟೆಗೆ ಅಭಿವೃದ್ಧಿ ಕಾಮಗಾರಿಗಳ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5 ಗಂಟೆಗೆ ಜೂನಿಯರ್ ಕಾಲೇಜಿನಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ನಗರದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಬೇಕು ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ದೌಲತ್ ಷರೀಪ್, ಮುತ್ತುರಾಜ್, ಪಾರ್ವತಮ್ಮ, ಪವಿತ್ರ ಲಕ್ಷ್ಮೀಕಾಂತ್, ಸೋಮಶೇಖರ್ ಮಣಿ, ನಿಜಾಮುದ್ದೀನ್, ಗ್ಯಾಬ್ರಿಯಲ್, ಅಜ್ಮತ್, ಸಮದ್, ನಗರಸಭಾ ಸಿಬ್ಬಂದಿ ನಟರಾಜ್ ಗೌಡ, ನಾಗರಾಜು ಸೇರಿದಂತೆ ಹಲವರು ಇದ್ದರು.