ಸಾರಾಂಶ
ಹೊಸಪೇಟೆ: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಗರಣದ ಆರೋಪ ಹೊತ್ತು ನ್ಯಾಯಾಲಯಕ್ಕೆ ಅಲೆಯುತ್ತಿದ್ದಾರೆ. ಇದರಿಂದ ಇಡೀ ರಾಜ್ಯವೇ ತಲೆ ತಗ್ಗಿಸುವಂತಾಗಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ ನಾರಾಯಣ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಗರಸಭೆ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ ಸಮಾರಂಭ ಹಾಗೂ ಬೂತ್ ಮಟ್ಟದ ಸದಸ್ಯತಾ ಮಹಾ ಅಭಿಯಾನ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿಲುಕಿದ್ದಾರೆ. ಬಿಜೆಪಿಯಿಂದ ಈಗಾಗಲೇ ಹೋರಾಟ ನಡೆಸಿ ಪಾದಯಾತ್ರೆ ನಡೆಸಲಾಗಿದೆ. ಡಿ.ಕೆ. ಶಿವಕುಮಾರ ಕೂಡ ಅಕ್ರಮ ಹಗರಣದಲ್ಲಿ ಸಿಲುಕಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಜನರು ಬೇಸತ್ತಿದ್ದಾರೆ ಎಂದರು.ಚೀನಾದಲ್ಲಿ ಕಮ್ಯುನಿಸ್ಟ್ ಪಕ್ಷ ಬಿಟ್ಟರೆ, ಬಿಜೆಪಿ ಜಗತ್ತಿನಲ್ಲಿ ದೊಡ್ಡ ಪಕ್ಷವಾಗಿದೆ. ರಾಜ್ಯದಲ್ಲಿ ಶಾಸಕರಿಗೆ ಮಂತ್ರಿಗಳ ಸಹಕಾರ ಸಿಗುತ್ತಿಲ್ಲ ಎಂದು ಸಿಎಂಗೆ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಪತ್ರ ಬರೆಯುತ್ತಾರೆ. ಆದರೆ, ಸಿಎಂ ಬಿಸ್ಕೀಟ್ ಹಾಕಿ, ಅವರಿಗೆ ಉತ್ತಮ ಹುದ್ದೆ ನೀಡಿ ಬಾಯಿ ಮುಚ್ಚಿಸಿದ್ದಾರೆ. ಇನ್ನೂ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಫೈಟು, ಸಿಎಂ ಹೆಂಡತಿಗೆ ಸೈಟು ಎಂಬ ಸುದ್ದಿ ಕೂಡ ಜೋರಾಗಿದೆ ಎಂದರು.
ಈಗಾಗಲೇ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿ ಗುದ್ದಾಟ ಜೋರಾಗಿ ನಡೆದಿದೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ತೆರಿಗೆ ನಮ್ಮ ಹಕ್ಕು ಎಂಬ ಹೆಸರಿನಲ್ಲಿ ದಕ್ಷಿಣ ಭಾರತ ಸೇರಿದಂತೆ ಪ್ರತಿಪಕ್ಷಗಳ ಮುಖ್ಯಮಂತ್ರಿಗಳ ಸಭೆಯನ್ನು ಕೇರಳದಲ್ಲಿ ನಡೆಸಲು ಹೊರಟಿದ್ದಾರೆ. ಈ ಮೂಲಕ ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೊರಟಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಮುಖ್ಯಮಂತ್ರಿ ಹುದ್ದೆ ನೀಡಲು ನಿರ್ಧರಿಸಿದೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ಇದರಿಂದ ಪಾರಾಗಲು ಈಗ ಪ್ರತಿಪಕ್ಷಗಳ ಮುಖ್ಯಮಂತ್ರಿಗಳ ಸಭೆ ನಡೆಸಲು ಹೊರಟಿದ್ದಾರೆ ಎಂದು ದೂರಿದರು.ಮಲ್ಲಿಕಾರ್ಜುನ ಖರ್ಗೆ ಜಾಗಕ್ಕೆ ರಾಹುಲ್ ಗಾಂಧಿ ಅವರನ್ನು ಎಐಸಿಸಿ ಅಧ್ಯಕ್ಷ ಮಾಡಲು ಕಾಂಗ್ರೆಸ್ ಹೈಕಮಾಂಡ್ ಹೊರಟಿದೆ. ರಾಜ್ಯ ಸರ್ಕಾರ ಸಂಪೂರ್ಣ ವಿಫಲಗೊಂಡಿದೆ. ಕೇಂದ್ರ ಸರ್ಕಾರದ ಸಾಧನೆ ಜನ ಸಾಮಾನ್ಯರಿಗೆ ಮನೆ, ಮನೆಗೆ ತೆರಳಿ ಬಿಜೆಪಿ ಕಾರ್ಯಕರ್ತರು ಮುಟ್ಟಿಸಬೇಕಿದೆ. ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಮಾತನಾಡಿ, ಅಖಂಡ ಬಳ್ಳಾರಿ ಜಿಲ್ಲೆ ಇದ್ದಾಗ ರಾಜ್ಯದಲ್ಲೇ ಸದಸ್ಯತ್ವ ಅಭಿಯಾನದಲ್ಲಿ ಮೂರನೇ ಸ್ಥಾನದಲ್ಲಿದ್ದೆವು. ಈ ಬಾರಿ ವಿಜಯನಗರ ಜಿಲ್ಲೆಯಲ್ಲಿ ಅಭಿಯಾನ ಇನ್ನಷ್ಟು ಚುರುಕುಗೊಳಿಸಬೇಕು. ಪಕ್ಷ ನೀಡಿರುವ ಟಾಸ್ಕ್ ಅನ್ನು ಎಲ್ಲ ಮಂಡಳಗಳು ಸರಿಯಾಗಿ ನಿರ್ವಹಿಸಬೇಕು ಎಂದರು.ಬಿಜೆಪಿ ಯುವಮೋರ್ಚಾ ರಾಜ್ಯ ಕೋಶಾಧ್ಯಕ್ಷ ಸಿದ್ಧಾರ್ಥ ಸಿಂಗ್ ಮಾತನಾಡಿ, ಡಿಜಿಟಲ್ ಸೇರಿದಂತೆ ಮನೆ ಮನೆಗೆ ತೆರಳಿ ನಾವು ಸದಸ್ಯತ್ವ ಅಭಿಯಾನ ಮಾಡಿಸಬೇಕು. ಯಾವುದೇ ಕಾರಣಕ್ಕೂ ವಿಶ್ರಾಂತಿ ಪಡೆಯದೇ ಈ ಕಾರ್ಯ ಮಾಡಬೇಕು. ಜನರ ಸಂಪರ್ಕ ಇದ್ದರೆ ಮಾತ್ರ ಪಕ್ಷ ಬೆಳೆಯಲು ಸಾಧ್ಯ. ಹಾಗಾಗಿ ಬೇರು ಮಟ್ಟದಲ್ಲಿ ಪಕ್ಷ ಬಲವರ್ಧನೆಗೆ ಒತ್ತು ನೀಡಬೇಕು ಎಂದರು.
ನಗರಸಭೆ ಅಧ್ಯಕ್ಷ ಎನ್. ರೂಪೇಶ್‌ಕುಮಾರ ಹಾಗೂ ಉಪಾಧ್ಯಕ್ಷ ರಮೇಶ್ ಗುಪ್ತಾ ಅವರನ್ನು ಸನ್ಮಾನಿಸಲಾಯಿತು.ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಅಶೋಕ್ ಜೀರೆ, ಸಾಲಿ ಸಿದ್ದಯ್ಯ ಸ್ವಾಮಿ, ಶಂಕರ ಮೇಟಿ, ಕೆ.ಎಸ್. ರಾಘವೇಂದ್ರ, ಟಿಂಕರ್ ರಫೀಕ್, ಪ್ರಿಯಾಂಕಾ ಜೈನ್, ಬಸವರಾಜ ನಾಲತ್ವಾಡ, ತಾರಿಹಳ್ಳಿ ಜಂಬುನಾಥ, ದ್ವಾರಕೀಶ್ ಇತರರಿದ್ದರು.