ಸಾರಾಂಶ
ಮುಂಡಗೋಡ: ಮೇ ೩ರಂದು ಮುಖ್ಯಮಂತ್ರಿ, ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಪಟ್ಟಣಕ್ಕೆ ಆಗಮಿಸಲಿದ್ದು, ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಜಿ ಶಾಸಕ ವಿ.ಎಸ್. ಪಾಟೀಲ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಉತ್ತಮ ವಾತಾವರಣವಿದೆ. ವಿರೋಧ ಪಕ್ಷದ ತೀವ್ರ ವಿರೋಧದ ನಡುವೆಯೂ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ೫ ಗ್ಯಾರಂಟಿಗಳನ್ನು ಕಾರ್ಯಗತಗೊಳಿಸಿ ಜನಪರವಾದ ಯೋಜನೆಯನ್ನು ಜಾರಿಗೆ ತಂದು ಬಡವರು ಹಾಗೂ ಸಾಮಾನ್ಯ ಜನರಿಗೆ ಅನುಕೂಲ ಮಾಡಿಕೊಟ್ಟಿರುವ ಕಾಂಗ್ರೆಸ್‌ಅನ್ನು ಜನರು ಎಂದಿಗೂ ಕೈ ಬಿಡುವುದಿಲ್ಲ ಎಂದರು.ಈ ಹಿಂದೆ ಮಾತೆತ್ತಿದರೆ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಿದ್ದ ಬಿಜೆಪಿಯವರ ೧೦ ವರ್ಷದ ಆಡಳಿತದಲ್ಲಿ ಎಲ್ಲ ವಸ್ತುಗಳ ಬೆಲೆ ದುಪ್ಪಟ್ಟಾಗಿದೆ. ಇದರಿಂದ ಬೇಸತ್ತಿರುವ ಜನ ತಕ್ಕ ಉತ್ತರ ನೀಡಲಿದ್ದು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಅವರು ಕನಿಷ್ಠ ೧ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನದೇವ ಗುಡಿಯಾಳ, ಉತ್ತರಕನ್ನಡ ಜಿಲ್ಲಾ ಚುನಾವಣಾ ಉಸ್ತುವಾರಿ ಶಂಕರಗೌಡ ಪಾಟೀಲ, ಶ್ರೀನಿವಾಸ ದಾತ್ರೆ, ಕ್ಷೇತ್ರ ಉಸ್ತುವಾರಿ ಜ್ಯೋತಿ ಪಾಟೀಲ, ರಾಜು ಕುನ್ನೂರ, ಬಸವರಾಜ ನಡುವಿನಮನಿ, ಶಾರದಾ ರಾಥೋಡ ಮುಂತಾದವರು ಉಪಸ್ಥಿತರಿದ್ದರು.ಕುಮಟಾದ ಮಣಕಿ ಮೈದಾನದಲ್ಲಿ ಸಾರ್ವಜನಿಕ ಸಭೆ
ಕುಮಟಾ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ ಬಾರಿ ಗೆಲ್ಲಲೇಬೇಕು ಎಂಬ ಕಾರಣಕ್ಕೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೇ ೩ರಂದು ಮಧ್ಯಾಹ್ನ ೩ ಗಂಟೆಗೆ ಕುಮಟಾದ ಮಣಕಿ ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಇನ್ನಿತರ ನಾಯಕರು ಬಂದು ಅಭ್ಯರ್ಥಿ ಪರ ಪ್ರಚಾರ ಭಾಷಣ ಮಾಡಲಿದ್ದಾರೆ. ಕ್ಷೇತ್ರಕ್ಕೆ ಕಾಂಗ್ರೆಸ್ ಸರ್ಕಾರದ ಕೊಡುಗೆಗಳು ದೊಡ್ಡದಿದೆ. ಇಲ್ಲಿನ ಅಭಿವೃದ್ಧಿ, ಜನರ ಸಮಸ್ಯೆಗಳು, ಯೋಜನೆಗಳು ಜನರಿಗೆ ಎಷ್ಟರಮಟ್ಟಿಗೆ ತಲುಪಿದೆ? ಹಾಗೂ ಕಾಂಗ್ರೆಸ್ ಪಕ್ಷದ ವಿಶ್ವಾಸಪೂರ್ಣ ಆಡಳಿತವನ್ನು ನೆನಪಿಸುವ ಜತೆಗೆ ಚುನಾವಣೆ ಪ್ರಚಾರ ಮತ್ತು ಪಕ್ಷ ಸಂಘಟನೆಯಲ್ಲಿ ತೊಡಗಿರುವ ಕಾರ್ಯಕರ್ತರಿಗೆ ಹುರುಪು ತುಂಬುವ ಉದ್ದೇಶದಿಂದ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಬೆಳಗ್ಗೆ ೧೧ ಗಂಟೆಗೆ ಮುಂಡಗೋಡಕ್ಕೆ ಬಂದು ಸಭೆ ನಡೆಸಿದ ಬಳಿಕ ಕುಮಟಾದಲ್ಲಿ ೩ ಗಂಟೆಗೆ ಸಭೆ ನಡೆಸಲಿದ್ದಾರೆ. ಜಿಲ್ಲೆಯ ಕರಾವಳಿ ತಾಲೂಕುಗಳಿಗೆ ಸೀಮಿತವಾಗಿ ನಡೆಯುತ್ತಿರುವ ಈ ಸಭೆಗೆ ಕನಿಷ್ಠ ೨೫ ಸಾವಿರಕ್ಕೂ ಹೆಚ್ಚು ಜನರ ನಿರೀಕ್ಷೆ ಇದೆ ಎಂದರು.ಪಕ್ಷದಲ್ಲಿ ಯಾವುದೇ ಗೊಂದಲವೂ ಇಲ್ಲ. ಭಿನ್ನಾಭಿಪ್ರಾಯವೂ ಇಲ್ಲ. ಒಗ್ಗಟ್ಟಿನಿಂದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತಿದ್ದೇವೆ. ಕಾಂಗ್ರೆಸ್ ಕೊಡುಗೆಗಳನ್ನು ನೋಡಿ ಜನರೇ ತೀರ್ಮಾನಿಸಲಿದ್ದಾರೆ. ೩೦ ವರ್ಷಗಳ ಕಾಲ ಬೇರೆ ಪಕ್ಷದ ಹಿಡಿತದಲ್ಲಿದ್ದ ಸಂಸದ ಸ್ಥಾನವನ್ನು ಮರಳಿ ಪಡೆಯಲಿದ್ದು ಡಾ. ಅಂಜಲಿ ನಿಂಬಾಳ್ಕರ್ ಕನಿಷ್ಠ ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಶಾಸಕ ಶಿವರಾಮ ಹೆಬ್ಬಾರ ಅವರ ಪುತ್ರ ತಮ್ಮ ಭವಿಷ್ಯಕ್ಕಾಗಿ ಕಾಂಗ್ರೆಸ್ ಸೇರಿದ್ದು ಸ್ವಾಗತಿಸಿದ್ದೇವೆ. ಆದರೆ ಶಾಸಕ ಶಿವರಾಮ ಹೆಬ್ಬಾರ ನಮ್ಮ ಪಕ್ಷಕ್ಕೆ ಚುನಾವಣೆಯಲ್ಲಿ ಬೆಂಬಲಿಸುವ ಬಗ್ಗೆ ತಿಳಿದಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಮಾಲೂರು ಶಾಸಕ ನಂಜೇಗೌಡ, ಮಾಜಿ ಶಾಸಕಿ ಶಾರದಾ ಶೆಟ್ಟಿ, ನಿವೇದಿತ್ ಆಳ್ವಾ, ಹೊನ್ನಪ್ಪ ನಾಯಕ, ಭಾಸ್ಕರ ಪಟಗಾರ, ಮಜೀದ್, ರವಿಕುಮಾರ ಶೆಟ್ಟಿ, ಸಚಿನ್ ನಾಯ್ಕ ಇತರರು ಇದ್ದರು.