‘ಕಾವೇರಿ ವಿಚಾರದಲ್ಲಿ ಸಿಎಂ, ಡಿಸಿಎಂಗೆ ನಾಚಿಕೆಯಾಗಬೇಕು’
KannadaprabhaNewsNetwork | Published : Oct 04 2023, 01:00 PM IST
‘ಕಾವೇರಿ ವಿಚಾರದಲ್ಲಿ ಸಿಎಂ, ಡಿಸಿಎಂಗೆ ನಾಚಿಕೆಯಾಗಬೇಕು’
ಸಾರಾಂಶ
ಇನ್ನು 1 ಸಾವಿರ ನೀರು ಬಿಟ್ಟರೆ ಸಾಕು ಎಂದು ಉಡಾಫೆಯಿಂದ ನಗು ನಗುತ್ತಲೆ ನಮ್ಮ ಕಾವೇರಿ ವಿಚಾರದಲ್ಲಿ ಮಾತನಾಡಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಕಾವೇರಿ ವಿಚಾರದಲ್ಲಿ ಅಸಡ್ಡೆ ತೋರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾಚಿಕೆಯಾಗಬೇಕು ಎಂದು ಮಾಜಿ ಸಚಿವ ಎನ್ ಮಹೇಶ್ ಕಿಡಿಕಾರಿದರು
ಬಂದ್ ಪ್ರಯುಕ್ತ ಹಮ್ಮಿಕೊಂಡಿದ್ದ ಮೆರವಣಿಯಲ್ಲಿ ಮಾಜಿ ಸಚಿವ ಮಹೇಶ್ ಆಕ್ರೋಶ ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ ಕಾವೇರಿಯಿಂದ ತಮಿಳುನಾಡಿಗೆ ನೀರು ಹರಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ಗೋಸುಂಬೆಯ ರೀತಿ ಬಣ್ಣ ಬದಲಾಯಿಸುತ್ತಿದೆ. 3 ಸಾವಿರ ಕ್ಯುಸೆಕ್ ನೀರು ಈಗಾಗಲೇ ಸರಾಗವಾಗಿ ಹರಿದು ಹೋಗಿದೆ. ಇನ್ನು 1 ಸಾವಿರ ನೀರು ಬಿಟ್ಟರೆ ಸಾಕು ಎಂದು ಉಡಾಫೆಯಿಂದ ನಗು ನಗುತ್ತಲೆ ನಮ್ಮ ಕಾವೇರಿ ವಿಚಾರದಲ್ಲಿ ಮಾತನಾಡಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಕಾವೇರಿ ವಿಚಾರದಲ್ಲಿ ಅಸಡ್ಡೆ ತೋರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾಚಿಕೆಯಾಗಬೇಕು ಎಂದು ಮಾಜಿ ಸಚಿವ ಎನ್ ಮಹೇಶ್ ಕಿಡಿಕಾರಿದರು. ಬಂದ್ ಪ್ರಯುಕ್ತ ಸಂಘಟನೆಗಳು ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇದು ರಾಜಕೀಯ ಪಕ್ಷದ ಪ್ರತಿಭಟನೆಯಲ್ಲ, ರೈತರು, ಸಾರ್ವಜನಿಕರು, ಕನ್ನಡಪರ ಸಂಘಟನೆಗಳ ಬಂದ್ ಇದಾಗಿದ್ದು, ನಾವು ಸಹ ಇಂದು ಬೆಂಬಲ ನೀಡಿದ್ದೇವೆ ಎಂದರು. ಆಗಸ್ಟ್ ತಿಂಗಳಲ್ಲಿ ಕಾವೇರಿ ಪ್ರಾಧಿಕಾರದ ಸೂಚನೆ ಬಂದಿರಲಿಲ್ಲ, ಸುಪ್ರಿಂ ಕೋರ್ಟ್ ಯಾವುದೇ ಸೂಚನೆ ನೀಡಿರಲಿಲ್ಲ. ಈ ವರ್ಷ ಮಳೆ ಅಭಾವ ಇದೆ ಎಂಬ ತಜ್ಞರ ಅಬಿಪ್ರಾಯವಿದೆ. ಇಂತಹ ಸೂಚನೆಗಳಿದ್ದರೂ 15 ಸಾವಿರ ಕ್ಯುಸೆಕ್ ನೀರನ್ನು ಏಕೆ ತಮಿಳುನಾಡಿಗೆ ಹರಿಸಲಾಯಿತು ಎಂಬುದನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಿಕೆಶಿ ಹೇಳಬೇಕಿದೆ. ನೀರಿನ ಅಭಾವವಿದ್ದರೂ ರೈತರಿಗೆ ಸಂಕಷ್ಟವಾಗಲಿದೆ ಎಂಬ ಪರಿಜ್ಞಾನವಿಲ್ಲದೆ ನೀರು ಬಿಟ್ಟ ಕ್ರಮ ಸರಿಯಲ್ಲ ಎಂದು ಕಿಡಿಕಾರಿದರು. 28 ಸಾವಿರ ಕೋಟಿ ಕೖಷಿ ವಲಯದಲ್ಲಿ ನಷ್ಚವಾಗಲಿದೆ ಎಂಬ ತಜ್ಞರ ವರದಿ ಇದ್ದರೂ ಇದನ್ನ ಅರಿಯುವಲ್ಲಿ ರಾಜ್ಯ ಸಕಾ೯ರ ವಿಫಲವಾಗಿದೆ ಎಂದು ಆಕ್ರೋಶ ಹೊರಹಾಕಿದರಲ್ಲದೆ ರಾಜ್ಯದ ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ತಕ್ಕ ಉತ್ತರ ನೀಡಬೇಕಿದೆ. ನೀರು ಬಿಟ್ಟು ಸವ೯ಪಕ್ಷಗಳ ಸಭೆ ಕರೆದ ಮುಖ್ಯಮಂತ್ರಿಗಳಿಗೆ ನಾಚಿಕೆಯಾಗಬೇಕು ಎಂದರು. ಮಾಜಿ ಶಾಸಕ ಎಸ್.ಬಾಲರಾಜು ಮಾತನಾಡಿ, ‘ರಾಜ್ಯದಲ್ಲಿ ಕುಡಿಯುವ ನೀರಿಗೆ ತೊಂದರೆಯುಂಟಾಗಿದೆ. ಇಂತಹ ಸಂದರ್ಭದಲ್ಲಿ ಹೋರಾಟ ಅನಿವಾರ್ಯ. ಲಭ್ಯ ಇರುವ ನೀರಿನಲ್ಲಿ 50 ಟಿಎಂಸಿ ನೀರು ಮಾತ್ರ ನಮ್ಮಲ್ಲಿದ್ದು ಪ್ರತಿ ತಿಂಗಳಿಗೆ ಕನಿಷ್ಠ 5 ಟಿಎಂಸಿ ನೀರು ಅತ್ಯಗತ್ಯ, ಲಭ್ಯವಿರುವ ನೀರಿನಲ್ಲಿ ಡಿಸೆಂಬರ್ ತನಕ ಮಾತ್ರ ಕುಡಿಯುವ ನೀರು ಸಿಗುತ್ತೆ, ಬಳಿಕ ನಾವೆಲ್ಲರೂ ನೀರಿಗೂ ಹಾಹಾಕಾರ ಅನುಭವಿಸಬೇಕಾಗುತ್ತದೆ. ತಮಿಳುನಾಡು ಕೇಳುತ್ತಿರುವುದು ಕುಡಿಯುವ ನೀರಿಗಾಗಿ ಅಲ್ಲ, ಮೂರನೇ ಬೆಳೆಗೆ, ಇದನ್ನು ಪ್ರಾಧಿಕಾರದ ಮುಂದೆ ಮಂಡಿಸಲು ರಾಜ್ಯ ಸರ್ಕಾರ ವಿಫಲವಾಗಿದೆ’ ಎಂದರು. ರೈತ ಸಂಘ ಶೈಲೇಂದ್ರ, ಶಿವಮಲ್ಲು, ಬಸವರಾಜು, ಚಾರ್ಲಿ, ಜೂಯೆಲ್ ನಿವಾಸ್, ಜಯಮೇರಿ ಸೂಸೆಯಮ್ಮ, ಮರಿಯಮ್ಮ, ಸಗಯಾಮೇರಿ, ಮೇರಿ, ಜಪಮಾಲೆ, ನಾಗರಿಕ ಹಿತರಕ್ಷಣಾ ಸಮಿತಿ ನಟರಾಜು ಮಾಳಿಗೆ, ಕರವೇ ಕಾರ್ಯಾಧ್ಯಕ್ಷ ಅಯಾಜ್, ಸಹ ಸಂಘಟನಾ ಕಾರ್ಯದರ್ಶಿ ಮೊಹಮ್ಮದ್ ಅಬ್ಜಲ್, ಅಪ್ರೋಜ್ ಪಾಷ, ಸಂಚಾಲಕ ಸಲೀಮ್ ಕುಮಾರ್, ಎಸ್.ಡಿ.ಪಿ.ಐ ಕಲೀಲ್, ದಲಿತ ಸಂಘಟನೆಯ ದಿಲೀಪ್, ಜಯ ಕರ್ನಾಟಕದ ಅಧ್ಯಕ್ಷ ಪ್ರಭುಸ್ವಾಮಿ, ಛಲವಾದಿ ಮಹಾಸಭೆ ರಾಜ್ಯ ಉಪಾಧ್ಯಕ್ಷ ಅಣಗಳ್ಳಿ ಬಸವರಾಜು, ಸಾಹಿತಿ ಮಹದೇವು, ವೈಶಾಲಮೂರ್ತಿ, ರಘು, ಸಿ.ಆರ್.ಚೌದರಿ, ಉತ್ತಮ್ ಚೌದರಿ, ಸುರೇಶ್ ರಾಜ್ ಪುರೋಹಿತ್, ಮೆಂಹದರ್ ಚೌದರಿ, ಚೈನಾ ರಾಮ್ ಕಾಪಡಿ, ಜಗದೀಶ್, ಮಧುಚಂದ್ರ, ಬಸವರಾಜಪ್ಪ, ಶಂಕರ್, ಶಿವಕುಮಾರ್, ಸಿದ್ದಪ್ಪಾಜಿ, ನಾಗಣ್ಣ, ಬಸವರಾಜು (ದ್ವಾರಕೀ) ಷಣ್ಮುಗಸ್ವಾಮಿ, ಲಕ್ಷ್ಮಣಮೂರ್ತಿ ಇದ್ದರು. ಖಾಲಿ ಚೆಂಬು, ಪೈರು ತೋರಿಸಿ ಪ್ರತಿಭಟನೆ ಕೊಳ್ಳೇಗಾಲ: ಕರ್ನಾಟಕ ಬಂದ್ ವೇಳೆ ನಗರಸಭೆ ಮಾಜಿ ಸದಸ್ಯ ಮಧುಚಂದ್ರ ತಲೆ ಮೇಲೆ ಖಾಲಿ ಚೆಂಬು, ಹಸಿ ಪೈರನ್ನು ಇಟ್ಟು ‘ನಮ್ಮ ಬೆಳೆಗಳಿಗೆ ನೀರಿಲ್ಲ’ ಎಂದು ಖಾಲಿ ಚೆಂಬು ಪ್ರದರ್ಶಿಸುವ ಮೂಲಕ ಗಮನ ಸೆಳೆದರು. ‘ನಮ್ಮ ರೈತರ ಪೈರುಗಳು ಒಣಗುತ್ತಿವೆ, ನಮಗೆ ಕುಡಿಯಲು ನೀರಿಲ್ಲ’ ಎಂದು ಮಧುಚಂದ್ರ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೊಳ್ಳೇಗಾಲದಲ್ಲಿ ನಡೆದ ಕಾವೇರಿ ಪ್ರತಿಭಟನೆಯಲ್ಲಿ ನಗರಸಭೆ ಮಾಜಿ ಸದಸ್ಯ ಮಧು ತಲೆ ಮೇಲೆ ಖಾಲಿ ಚೆಂಬು, ಪೈರನ್ನಿಟ್ಟುಕೊಂಡು ಗಮನ ಸೆಳೆದರು. ಮಾಜಿ ಸಚಿವ ಎನ್ ಮಹೇಶ್, ಮಾಜಿ ಶಾಸಕ ಎಸ್ ಬಾಲರಾಜು ಇನ್ನಿತರಿದ್ದರು.