- ದುಗ್ಗಮ್ಮ ಗುಡಿ, ದರ್ಗಾದಲ್ಲಿ ಪೂಜೆ, ಛತ್ರಪತಿ ಪುತ್ಥಳಿಗೆ ಮಾಲಾರ್ಪಣೆ: ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಮಾಹಿತಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಮರ್ಥ ಎಂ. ಶಾಮನೂರು ಮಾ.23ರಂದು ಬೆಳಗ್ಗೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಹಾಗೂ ಹಜರತ್ ಖಡಕ್ ಷಾವಲಿ ದರ್ಗಾದಲ್ಲಿ ಪೂಜೆ ಸಲ್ಲಿಸುವ ಮೂಲಕ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ, ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ. ಮಂಜಪ್ಪ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10 ಗಂಟೆಗೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವರು. ಅನಂತರ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಮಾಲಾರ್ಪಣೆ ಮಾಡುವರು. ಅಲ್ಲಿಂದ ಹಜರತ್ ಷಾವಲಿ ದರ್ಗಾಗೆ ತೆರಳಿ, ಪೂಜೆ ಸಲ್ಲಿಸುವ ಮೂಲಕ ನಾಮಪತ್ರ ಸಲ್ಲಿಸಲು ಮೆರವಣಿಗೆಯಲ್ಲಿ ಸಾಗಲಿದ್ದಾರೆ ಎಂದರು.

ಹಗೇದಿಬ್ಬ ವೃತ್ತ, ಗಾಂಧಿ ನಗರ, ಆಜಾದ್ ನಗರ, ಅಹಮ್ಮದ್ ನಗರ ರಸ್ತೆ ಮಾರ್ಗವಾಗಿ ಚಾರ್ಲಿ ಪೈಲ್ವಾನ್ ವೃತ್ತದ ಮಾರ್ಗವಾಗಿ ಹಾಸಬಾವಿ ವೃತ್ತ, ಚಾಮರಾಜ ಪೇಟೆ ಮುಖ್ಯ ರಸ್ತೆಯ ಮಾರ್ಗವಾಗಿ ಮಂಡಿಪೇಟೆ, ಹಳೇ ರೈಲ್ವೆ ಅಂಡರ್ ಬ್ರಿಡ್ಜ್ ಮೂಲಕ ಹಳೇ ಪಿ.ಬಿ. ರಸ್ತೆ ತಲುಪಿ, ಅಲ್ಲಿಂದ ಮಹಾನಗರ ಪಾಲಿಕೆಯಲ್ಲಿ ದಕ್ಷಿಣ ಕ್ಷೇತ್ರ ಚುನಾವಣಾಧಿಕಾರಿ ಕಚೇರಿಗೆ ತೆರಳಿ, ಕ್ಷೇತ್ರದ ಚುನಾವಣಾಧಿಕಾರಿಗೆ ಅಧಿಕೃತವಾಗಿ ಮತ್ತೊಮ್ಮೆ ನಾಮಪತ್ರ ಸಲ್ಲಿಸುವರು ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಭಾಗವಹಿಸುವರು. ಪಕ್ಷದ ಪದಾಧಿಕಾರಿಗಳು, ಹಾಲಿ- ಮಾಜಿ ಜನಪ್ರತಿನಿಧಿಗಳು, ಕಾರ್ಯಕರ್ತರು ಸೇರಿದಂತೆ ಸುಮಾರು 25 ಸಾವಿರಕ್ಕೂ ಅಧಿಕ ಜನರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.


ಈಗಾಗಲೇ ಕ್ಷೇತ್ರದಲ್ಲಿ ಸಮರ್ಥ ಶಾಮನೂರು ಪ್ರಚಾರ ಕೈಗೊಂಡಿದ್ದು, ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ಕಂಡುಬರುತ್ತಿದೆ. ದಿವಂಗತ ಶಾಮನೂರು ಶಿವಶಂಕರಪ್ಪನವರ ನಿಧನದಿಂದಾಗಿ ತೆರವಾಗಿರುವ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ನಮ್ಮ ಪಕ್ಷವು ಕ್ಷೇತ್ರವನ್ನು ಉಳಿಸಿಕೊಳ್ಳಲಿದೆ. ಅತಿ ಹೆಚ್ಚು ಮತಗಳ ಅಂತರದಲ್ಲಿ ಸಮರ್ಥ ಶಾಮನೂರು ಕ್ಷೇತ್ರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಎಚ್.ಬಿ. ಮಂಜಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಮಾಜಿ ಮೇಯರ್‌ಗಳಾದ ಕೆ.ಚಮನ್ ಸಾಬ್‌, ಅನಿತಾಬಾಯಿ ಮಾಲತೇಶ, ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಮುದೇಗೌಡ್ರ ಗಿರೀಶ, ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ಬಿ.ಎಚ್.ವೀರಭದ್ರಪ್ಪ, ಹದಡಿ ಜಿ.ಸಿ.ನಿಂಗಪ್ಪ, ಕೆ.ಜಿ.ಶಿವಕುಮಾರ, ಎ.ನಾಗರಾಜ, ರಾಘವೇಂದ್ರ ಗೌಡ, ರಾಕೇಶ ಗಾಂಧಿ ನಗರ, ಹನುಮಂತಪ್ಪ, ಹರೀಶ ಇತರರು ಇದ್ದರು.

- - -

(ಬಾಕ್ಸ್‌) * ಶಾಮನೂರು ಕುಟುಂಬ ಆಹಾರ ಕಿಟ್ ಹಂಚಿಲ್ಲ: ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ

- ಮುಸ್ಲಿಂ ಮುಖಂಡರ ಭೇಟಿ ಮಾಡಿ, ಮನವೊಲಿಸ್ತೇವೆ: ಜಿಲ್ಲಾಧ್ಯಕ್ಷ ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಯಾರಿಗೂ ಕಾಂಗ್ರೆಸ್ ಪಕ್ಷದಿಂದಾಗಲೀ, ಅಭ್ಯರ್ಥಿಯಿಂದಾಗಲೀ ಆಹಾರ ಕಿಟ್ ಹಂಚಿಲ್ಲ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಸ್ಪಷ್ಟಪಡಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಮನೂರು ಕುಟುಂಬದ ಅಭಿಮಾನಿಗಳು ಯಾರಾದರೂ ಹಂಚಿರಬಹುದು. ಆಹಾರ ಕಿಟ್ ಮೇಲೆ ನಮ್ಮ ನಾಯಕರ ಫೋಟೋ ಹಾಕಿ, ಅಭಿಮಾನದಿಂದ ಅಲ್ಪಸಂಖ್ಯಾತರಿಗೆ ಹಂಚಿರಬಹುದು. ಆದರೆ, ನಮ್ಮ ಅಭ್ಯರ್ಥಿ ಕುಟುಂಬದಿಂದಾಗಲೀ, ಪಕ್ಷದಿಂದಾಗಲೀ ಯಾರಿಗೂ, ಯಾವುದೇ ಆಹಾರ ಕಿಟ್‌ಗಳನ್ನು ನೀಡಿಲ್ಲ ಎಂದರು.

ಶಾಮನೂರು ಹಿತೈಷಿಗಳು, ಅಭಿಮಾನಿಗಳು, ಬೆಂಬಲಿಗರು ತಮ್ಮ ತಮ್ಮ ವ್ಯಾಪಾರ, ವ್ಯವಹಾರ ಮಾಡಿಕೊಂಡು ಆರ್ಥಿಕವಾಗಿ ಸದೃಢವಾಗಿದ್ದಾರೆ. ಅಂತಹವರು ಯಾರಾದರೂ ಹಂಚಿಕೆ ಮಾಡಿರಬಹುದು. ಆದರೆ, ನಮ್ಮ ಪಕ್ಷದಿಂದಾಗಲೀ, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ‍‍‍ಆಗಲೀ, ಶಾಮನೂರು ಕುಟುಂಬದವರಾಗಲೀ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣಕ್ಕೆ ಕಿಟ್ ನೀಡಿಲ್ಲ ಎಂದು ಅವರು ಪುನರುಚ್ಛರಿಸಿದರು.

ದಕ್ಷಿಣದ ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ಹೈಕಮಾಂಡ್ ಸಮರ್ಥಗೆ ಅಭ್ಯರ್ಥಿಯಾಗಿ ಘೋಷಿಸಿದೆ. ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ನಮ್ಮ ರಾಜ್ಯ, ರಾಷ್ಟ್ರೀಯ ನಾಯಕರು ಮಾತನಾಡಿ, ಮನವೊಲಿಸಿದ್ದಾರೆ. ಪಕ್ಷವು ಅನೇಕ ನಾಯಕರಿಗೆ ಈ ಬಗ್ಗೆ ಜವಾಬ್ಧಾರಿ ವಹಿಸಿದೆ. ನಾವೂ ಸಹ ಸ್ಥಳೀಯ ಮುಸ್ಲಿಂ ಮುಖಂಡರ ಮನವೊಲಿಸುತ್ತೇವೆ. ಖುದ್ದಾಗಿ ಇವತ್ತಿನಿಂದಲೇ ನಮ್ಮ ಅಲ್ಪಸಂಖ್ಯಾತ ಮುಖಂಡರನ್ನು ಭೇಟಿ ಮಾಡಿ, ಎಲ್ಲವನ್ನೂ ತಿಳಿಗೊಳಿಸುತ್ತೇವೆ ಎಂದು ತಿಳಿಸಿದರು.

ಸಹಜವಾಗಿಯೇ ಮುಸ್ಲಿಂ ಸಮುದಾಯವು ಟಿಕೆಟ್‌ಗೆ ಬೇಡಿಕೆ ಇಡುತ್ತಿರುವುದನ್ನು ಒಪ್ಪುತ್ತೇನೆ. ಕ್ಷೇತ್ರವು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ. ಎದುರಾಳಿಗಳು ಸಹ ಅಷ್ಟೇ ಶ್ರಮವನ್ನು ಹಾಕುತ್ತಿದ್ದಾರೆ. ಕ್ಷೇತ್ರದಲ್ಲಿ ಯಾವುದೇ ರೀತಿಯ ಟ್ವಿಸ್ಟ್ ಆದರೂ ಆಗಬಹುದು. ಹಾಗಾಗಿ, ಕಾಂಗ್ರೆಸ್ ಪಕ್ಷವು ಕ್ಷೇತ್ರವನ್ನು ಉಳಿಸಿಕೊಳ್ಳಲು ಒತ್ತು ನೀಡಿದೆ. ಈ ಎಲ್ಲ ವಿಚಾರವನ್ನೂ ಮುಸ್ಲಿಂ ಮುಖಂಡರಿಗೆ ಮನವರಿಕೆ ಮಾಡಿಕೊಡುತ್ತೇವೆ. ಮುಂದಿನ ದಿನಗಳಲ್ಲಿ ಪಕ್ಷವು ಅವಕಾಶಗಳನ್ನು ಕೊಡುತ್ತದೆಂಬ ವಿಶ್ವಾಸವಿದೆ ಎಂದು ಎಚ್.ಬಿ.ಮಂಜಪ್ಪ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

- - -

-22ಕೆಡಿವಿಜಿ5: ದಾವಣಗೆರೆಯಲ್ಲಿ ಭಾನುವಾರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.