ಬಿಡದಿ ಟೌನ್‌ಶಿಪ್ ಕೈಬಿಡದಿದ್ದರೆ ಸಿಎಂ, ಡಿಸಿಎಂ, ವಿಧಾನಸೌಧಕ್ಕೆ ಮುತ್ತಿಗೆ

| Published : May 17 2025, 01:44 AM IST

ಬಿಡದಿ ಟೌನ್‌ಶಿಪ್ ಕೈಬಿಡದಿದ್ದರೆ ಸಿಎಂ, ಡಿಸಿಎಂ, ವಿಧಾನಸೌಧಕ್ಕೆ ಮುತ್ತಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಸರ್ಕಾರ ರೈತರ ಮೇಲೆ ದೌರ್ಜನ್ಯ ಎಸಗಿ ಭೂಮಿ ಕಬಳಿಸಲು ಮುಂದಾಗಿದೆ. ಕಳೆದೊಂದು ವರ್ಷದಿಂದ ಆ ಪಕ್ಷದ ನಾಯಕರು ಬೇನಾಮಿ ಹೆಸರಿನಲ್ಲಿ ಸಾವಿರಾರು ಎಕರೆ ಭೂಮಿ ಖರೀದಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ರಾಮನಗರಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ಭೂಮಿ ಕಬಳಿಸಿ ರಿಯಲ್ ಎಸ್ಟೇಟ್ ಮಾಡಲು ಹೊರಟಿದೆ. ಕೂಡಲೇ ಈ ಯೋಜನೆ ಕೈ ಬಿಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಮಾಜಿ ಶಾಸಕ ಎ.ಮಂಜುನಾಥ್ ಎಚ್ಚರಿಕೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಮೀಪದ ಖಾಸಗಿ ಬಡಾವಣೆಯಲ್ಲಿ ಬೈರಮಂಗಲ - ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂ ಸ್ವಾಧೀನ ವಿರೋಧಿಸಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.ಕಾಂಗ್ರೆಸ್ ಸರ್ಕಾರ ರೈತರ ಮೇಲೆ ದೌರ್ಜನ್ಯ ಎಸಗಿ ಭೂಮಿ ಕಬಳಿಸಲು ಮುಂದಾಗಿದೆ. ಕಳೆದೊಂದು ವರ್ಷದಿಂದ ಆ ಪಕ್ಷದ ನಾಯಕರು ಬೇನಾಮಿ ಹೆಸರಿನಲ್ಲಿ ಸಾವಿರಾರು ಎಕರೆ ಭೂಮಿ ಖರೀದಿ ಮಾಡಿದ್ದಾರೆ. ಭೂಮಿ ಉಳಿಸಿಕೊಳ್ಳಲು ರೈತರು ನಡೆಸುತ್ತಿರುವ ಹೋರಾಟವನ್ನು ಮಿಲಿಟರಿ ಪಡೆ ಬಂದರೂ ಹತ್ತಿಕ್ಕಲು ಸಾಧ್ಯವಿಲ್ಲ. ಹಾಗೊಂದು ವೇಳೆ ಭೂ ಸ್ವಾಧೀನಕ್ಕೆ ಮುಂದಾದರೆ ಮಹಿಳೆಯರು ಮನೆಯ ಮೂಲೆಯಲ್ಲಿರುವುದನ್ನು ಕೈಗೆತ್ತಿಕೊಂಡು ಅಧಿಕಾರಿಗಳಿಗೆ ಮೋಕ್ಷ ಮಾಡುತ್ತಾರೆ ಎಂದರು.ಬೆಂಗಳೂರು ನಗರದಲ್ಲಿಯೇ ಸುಮಾರು 8 ಲಕ್ಷಕ್ಕೂ ಅಧಿಕ ನಿವೇಶನಗಳು ಹಾಗೂ ನೂರಾರು ಅಪಾರ್ಟ್‌ಮೆಂಟ್‌ಗಳಲ್ಲಿ ಮನೆಗಳು ಖಾಲಿ ಇವೆ. ಹೀಗಿದ್ದರೂ ಟೌನ್‌ಶಿಪ್ ಹೆಸರಿನಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ರಿಯಲ್ ಎಸ್ಟೇಟ್‌ಗಾಗಿ ಕಬಳಿಸಲು ಮುಂದಾಗಿದ್ದಾರೆ. ಅಲ್ಲದೆ, 2013ರ ಭೂ ಸ್ವಾಧೀನ ಕಾಯ್ದೆಯನ್ನು ಗಾಳಿಗೆ ತೂರಿ ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಇದರ ವಿರುದ್ಧ ವಿಧಾನಸಭಾ ಅಧಿವೇಶನದಲ್ಲಿ ವಿಪಕ್ಷ ನಾಯಕರು ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಾನು ಈ ಮಣ್ಣಿನ ಮಗ, ಜಿಲ್ಲೆಯನ್ನು ಅಭಿವೃದ್ಧಿ ಮಾಡಬೇಕು. ರೈತರ ಬದುಕನ್ನು ಹಸನ ಮಾಡಲು ಪೆನ್ನು ಪೇಪರ್ ಬೇಕೆಂದು ಕೇಳಿದ್ದರು. ಈಗ ಅಧಿಕಾರಕ್ಕೆ ಬಂದ ಮೇಲೆ ಮಹಲ್‌ನಲ್ಲಿ ಕುಳಿತು ರೈತರಿಗೆ ವಿಷ ಕೊಡಲು ಹೊರಟಿದ್ದಾರೆ. ಟೌನ್ ಶಿಪ್ ಬಗ್ಗೆ ನನಗೇನು ಗೊತ್ತಿಲ್ಲ. ಎಲ್ಲ ಕುಮಾರಸ್ವಾಮಿ ಅ‍‍ವರೇ ಮಾಡಿದ್ದು ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.ಈ ಹಿಂದೆ ಕುಮಾರಸ್ವಾಮಿರವರು ಬಿಡದಿ, ಸಾತನೂರು ಸೇರಿದಂತೆ 5 ಟೌನ್ ಶಿಪ್ ಯೋಜನೆ ರೂಪಿಸಿದ್ದರು. ರೈತರ ಮನವಿ ಮೇರೆಗೆ ಬಿಡದಿ ಟೌನ್‌ಶಿಪ್ ಯೋಜನೆ ಕೈಬಿಟ್ಟರು. ಕನಕಪುರ ರೈತರಿಗೆ ಭೂಮಿ ಕಳೆದುಕೊಳ್ಳಬೇಡಿ, ಚಿನ್ನದ ಬೆಲೆ ಬರುತ್ತದೆ ಎನ್ನುತ್ತೀರಿ. ಈಗ ನಿಮಗೆ ಅಧಿಕಾರ ಇದೆಯಲ್ಲ ಸಾತನೂರು ಟೌನ್ ಶಿಪ್ ಮಾಡಲು ಪ್ರಾಥಮಿಕ ಅಧಿಸೂಚನೆ ಹೊರಡಿಸಿ ತೋರಿಸಿ ನೋಡೋಣ ಎಂದು ಸವಾಲು ಹಾಕಿದರು.ಬಿಡದಿ ಟೌನ್ ಶಿಪ್ ಯೋಜನೆ ತಿರಸ್ಕರಿಸಿದಾಗ ಶಾಸಕ ಬಾಲಕೃಷ್ಣರವರು ಕುಮಾರಸ್ವಾಮಿರವರ ಜೊತೆಯಲ್ಲಿಯೇ ಇದ್ದರು. ಆದರೀಗ ಕುಮಾರಸ್ವಾಮಿ ಮತ್ತು ಯಡಿಯೂರಪ್ಪರವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಿದೆ. ರೈತರನ್ನು ಉಳಿಸುವ ಸ್ವಾಭಿಮಾನ ಮತ್ತು ತಾಕತ್ತಿದ್ದರೆ ಬಾಲಕೃಷ್ಣ ಅವರೇ ದಿನಾಂಕ ನಿಗದಿ ಪಡಿಸಿಕೊಂಡು ಬೈರಮಂಗಲ ವೃತ್ತದಲ್ಲಿ ಚರ್ಚೆಗೆ ಬರಲಿ. ಅಲ್ಲಿಯೇ ರೈತರು ಅವರ ಹುಟ್ಟುಹಬ್ಬ ಆಚರಿಸುತ್ತಾರೆ ಎಂದು ಪಂಥಾಹ್ವನ ನೀಡಿದರು.ರಾಜ್ಯದಲ್ಲಿ ಇಲ್ಲಿವರೆಗೆ ಪ್ರಾಧಿಕಾರದಿಂದ 10 ಸಾವಿರ ಎಕರೆ ಸ್ವಾಧೀನ ಪಡಿಸಿಕೊಂಡ ಉದಾಹರಣೆಯೇ ಇಲ್ಲ. ಆದರೆ, ಜಿಬಿಡಿಎಯಲ್ಲಿ ಹಣವೇ ಇಲ್ಲ. ಹೀಗಿದ್ದರೂ ಭೂ ಸ್ವಾಧೀನ ಪಡಿಸಿಕೊಂಡು ರೈತರಿಗೆ ಎಲ್ಲಿಂದ ಪರಿಹಾರ ನೀಡುತ್ತದೆ. ಸರ್ಕಾರ ಈಗಲ್ ಟನ್ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದಕ್ಕೆ ಎಕರೆಗೆ 12.87 ಕೋಟಿ ರು.ನಂತೆ 77 ಎಕೆರೆಗ 982 ಕೋಟಿ ದಂಡ ವಿಧಿಸಿತು. ಹಾಗಾದರೆ ಟೌನ್ ಶಿಪ್ ಗೆ ಭೂ ಕಳೆದುಕೊಳ್ಳುವ ರೈತರಿಗೆ ಎಷ್ಟು ಪರಿಹಾರ ನಿಗದಿ ಮಾಡುತ್ತೀರಾ ಎಂದು ಪ್ರಶ್ನೆ ಮಾಡಿದರು.ರೈತರ ಬೆನ್ನಿನ ಮೂಳೆಯನ್ನೇ ಮುರಿದಂತೆ :ಸಂಸದ ಡಾ.ಸಿ.ಎನ್ .ಮಂಜುನಾಥ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಧೋರಣೆ ನಿಮ್ಮ ಭೂಮಿ, ನಮ್ಮ ಹಕ್ಕು ಎನ್ನುವಂತಿದೆ. ಇದೇ ಕಾರಣದಿಂದಾಗಿ ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಕೃಷಿ ಭೂಮಿ ಕಡಿಮೆಯಾಗಿ ಕಟ್ಟಡಗಳು ನಿರ್ಮಾಣಗೊಳ್ಳುತ್ತಿದೆ. ಕೃಷಿ ಭೂಮಿಯ ಮಾರಾಟದಿಂದ ಬರುವ ಹಣ ಒಂದು ತಲೆಮಾರಿಗೆ ಮಾತ್ರ ಸಾಕಾಗುತ್ತದೆ. ಅದೇ ಭೂಮಿ ಉಳಿಸಿಕೊಂಡರೆ ಸೂರ್ಯ ಚಂದ್ರ ಇರುವ ತನಕ ತಲೆ ಮಾರಿನಿಂದ ತಲೆಮಾರಿಗೆ ಶಾಶ್ವತವಾಗಿ ಇರಲಿದೆ ಎಂದರು.ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ ನಾರಾಯಣಗೌಡ, ಸಂಘದ ಅಧ್ಯಕ್ಷ ಅರಳಾಳಸಂದ್ರ ಕೆ. ರಾಮಯ್ಯ, ಪದಾಧಿಕಾರಿ ಮಂಡಲಹಳ್ಳಿ ನಾಗರಾಜು, ಕರ್ನಾಟಕ ಪ್ರಾಂತ ರೈತಸಂಘ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ, ವೆಂಕಟಾಚಲಯ್ಯ, ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಮುಖಂಡರಾದ ಭರತ್ ಕೆಂಪಣ್ಣ, ಬಿಜೆಪಿ ಮುಖಂಡರಾದ ಗೌತಮ್ ಗೌಡ, ಪ್ರಸಾದ್ ಗೌಡ ಮತ್ತಿತರರು ಹಾಜರಿದ್ದರು.

...ಕೋಟ್....

ರಾಜ್ಯದಲ್ಲಿ ಅದೇ ಕಾಂಗ್ರೆಸ್ ಸರ್ಕಾರ 2013ರ ಭೂ ಸ್ವಾಧೀನ ಕಾಯ್ದೆಯನ್ನು ಗಾಳಿಗೆ ತೂರಿ ಕೃಷಿ ಭೂಮಿ ಕಬಳಿಸಲು ಹೊರಟಿದೆ. ಟೌನ್ ಶಿಪ್ ಯೋಜನೆ ವಿರುದ್ಧ ನಡೆಯುತ್ತಿರುವ ನಮ್ಮ ಭೂಮಿ ನಮ್ಮ ಹಕ್ಕು ಹೋರಾಟದಲ್ಲಿ ನಮ್ಮ ಭೂಮಿಯನ್ನು ಕಸಿದುಕೊಳ್ಳಲು ಯಾವುದೇ ಕಾರಣಕ್ಕೂ ಅವಕಾಶ ನೀಡಲ್ಲ.- ವೆಂಕಟಚಲಯ್ಯ, ಮುಖಂಡರು, ಕರ್ನಾಟಕ ಪ್ರಾಂತ ರೈತ ಸಂಘ...ಕೋಟ್ ......

ಟೌನ್‌ಶಿಪ್‌ಗಾಗಿ ಭೂ ಸ್ವಾಧೀನಕ್ಕೂ ಮುನ್ನ ರೈತರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿಲ್ಲ. ಈ ಸರ್ಕಾರ ಎಷ್ಟೇ ಅನುದಾನ ನೀಡುತ್ತೇವೆಂದು ಆಮಿಷವೊಡ್ಡಿದರು ಮಣಿಯದೆ ಭೂಮಿ ಉಳಿಸಿಕೊಳ್ಳುವವರೆಗೂ ಹೋರಾಟ ನಡೆಸಬೇಕು.- ಗೀತಾ, ಅರಳಾಳುಸಂದ್ರ....ಕೋಟ್ ....

ಕೈಗಾರಿಕೆಗಳ ಸ್ಥಾಪನೆಗೆ ಬಂಡವಾಳ ಹರಿದು ಬರುತ್ತದೆ ಎಂಬ ನೆಪವೊಡ್ಡಿ ಸರ್ಕಾರಗಳೇ ರಿಯಲ್ ಎಸ್ಟೇಟ್ ಧಂಧೆ ಮಾಡುತ್ತಿವೆ. ರೈತರನ್ನು ದಿವಾಳಿ ಮಾಡಿ ಶ್ರೀಮಂತರಾಗುತ್ತಿರುವ ಭೂಗಳ್ಳರು ಸರ್ಕಾರ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಅವರಂತಹ ವಚನ ಭ್ರಷ್ಟ ಮುಖ್ಯಮಂತ್ರಿ ಮತ್ತೊಬ್ಬರು ಇಲ್ಲ.

- ಟಿ.ಯಶವಂತ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಪ್ರಾಂತ ರೈತಸಂಘ.-------ರಾಜ್ಯ ಸರ್ಕಾರ ಟೌನ್‌ಶಿಪ್‌ಗಾಗಿ 1987ರ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಅಲ್ಲದೆ, 2013ರ ಭೂ ಸ್ವಾಧೀನ ಕಾಯ್ದೆಯನ್ನು ಉಲ್ಲಂಘನೆ ಮಾಡುತ್ತಿದೆ. ಇಲ್ಲಿರುವ 5 ಲಕ್ಷ ಕಲ್ಪವೃಕ್ಷಗಳನ್ನು ಕಡಿದರೆ ಅದರ ಪಾಪ ತಟ್ಟದೆ ಬಿಡುವುದಿಲ್ಲ.- ಪ್ರಕಾಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ,------ 16ಕೆಆರ್ ಎಂಎನ್ 3.ಜೆಪಿಜಿರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಸಮೀಪದ ಖಾಸಗಿ ಬಡಾವಣೆಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂ ಸ್ವಾಧೀನ ವಿರೋಧಿಸಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿದರು.