ಸಾರಾಂಶ
ಯಲಬುರ್ಗಾ: ‘ನನ್ನ ಜತೆಗೆ ಶಾಸಕರಾದವರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಮಂತ್ರಿಗಳಾಗಿದ್ದಾರೆ. ಆದರೆ, ನನಗೆ ಅವಕಾಶ ಮತ್ತು ಅದೃಷ್ಟವಿಲ್ಲದೆ ಇರುವುದರಿಂದ ಇಂದು ಸಿಎಂರವರ ಆರ್ಥಿಕ ಸಲಹೆಗಾರನಾಗಿದ್ದೇನೆ’ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು. ಮಂಗಳವಾರ ಇಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 1985ರಲ್ಲಿ ನನ್ನ ಜತೆಗೆ ಶಾಸಕರಾದ ಸಿದ್ದರಾಮಯ್ಯ, ಜಿ.ಪರಮೇಶ್ವರ ಅವರು ಸಿಎಂ, ಡಿಸಿಎಂ ಆಗಿದ್ದಾರೆ. ಕಾಂಗ್ರೆಸ್ ಕಟ್ಟುವಲ್ಲಿ ಪ್ರಮುಖರಾದ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನನಗೆ ಅದೃಷ್ಟ ಮತ್ತು ಅವಕಾಶ ಇಲ್ಲದ್ದಕ್ಕೆ ಸಿಎಂ ಆರ್ಥಿಕ ಸಲಹೆಗಾರ ಹುದ್ದೆಗೆ ತೃಪ್ತಿಪಡಬೇಕಾಯಿತು. ಎಲ್ಲವನ್ನೂ ಸಮಯ ಮತ್ತು ಸಂದರ್ಭ ನಿರ್ಧರಿಸುತ್ತದೆ ಎಂದರು.
ಅಭಿವೃದ್ಧಿ ವಿಚಾರ ಇಟ್ಟುಕೊಂಡು ರಾಜಕಾರಣಕ್ಕೆ ಬಂದಿರುವ ನಾನು ಜಾತಿ, ದ್ವೇಷದ ರಾಜಕಾರಣ ಮಾಡಿಲ್ಲ. ಅಲ್ಲದೆ, ರಾಜಕೀಯಕ್ಕೆ ನನ್ನ ಕುಟುಂಬದವರನ್ನು ತಂದಿಲ್ಲ. ಪಕ್ಷದ ಕಾರ್ಯರ್ತರನ್ನೇ ನನ್ನ ಕುಟುಂಬದ ಸದಸ್ಯರೆಂದು ತಿಳಿದಿದ್ದೇನೆ. ಆದರೆ, ರಾಜಕೀಯದಲ್ಲಿ ಇಂದು ಜಾತಿ ವ್ಯವಸ್ಥೆಯೇ ಹೆಚ್ಚಾಗಿದೆ ಎಂದು ಅವರು ವಿಷಾದಿಸಿದರು.ರಾಜಕಾರಣದಲ್ಲಿ ನನ್ನನ್ನು ನಂಬಿದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಗೌರವ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ್ ಅವರ ಸ್ನೇಹಿತರಿಗೆ ಸಹಕಾರಿ ರತ್ನ ಪ್ರಶಸ್ತಿ ಕೊಡಲು ಶಿಫಾರಸು ಮಾಡಲಾಗುವುದು ಎಂದು ಅವರು ಕಿಚಾಯಿಸಿದರು.