ಹಗಲು ಲೂಟಿಗೆ ಇಳಿದ ಸಿಎಂ-ಡಿಸಿಎಂ: ಮಾಜಿ ಶಾಸಕ ಬಸವರಾಜ ದಢೇಸ್ಗೂರು ಆರೋಪ

| Published : Jun 21 2024, 01:04 AM IST

ಹಗಲು ಲೂಟಿಗೆ ಇಳಿದ ಸಿಎಂ-ಡಿಸಿಎಂ: ಮಾಜಿ ಶಾಸಕ ಬಸವರಾಜ ದಢೇಸ್ಗೂರು ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸಿರುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರತಿಕೃತಿ ದಹನ ಮಾಡಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರತಿಕೃತಿ ದಹನ

ಕನ್ನಡಪ್ರಭ ವಾರ್ತೆ ಕಾರಟಗಿ

ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸಿರುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರತಿಕೃತಿ ದಹನ ಮಾಡಿದರು.

ಕನಕಗಿರಿ ಮತ್ತು ಕಾರಟಗಿ ಮಂಡಲ ಬಿಜೆಪಿ ಕಾರ್ಯಕರ್ತರು ಮಾಜಿ ಶಾಸಕ ಬಸವರಾಜ ದಢೇಸ್ಗೂರು ನೇತೃತ್ವದಲ್ಲಿ ಬಿಜೆಪಿ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ಆರ್ಥಿಕ ದಿವಾಳಿ ಎದ್ದಿದ್ದು, ಅದನ್ನು ಸರಿದೂಗಿಸಲು ಈಗ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸಿದೆ. ಇದರಿಂದ ಮಧ್ಯಮ ವರ್ಗದವರಿಗೆ ಬರೆ ಬೀಳಲಿದ್ದು, ಕೂಡಲೇ ಬೆಲೆ ಏರಿಕೆ ತಡೆಗಟ್ಟಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮಾಜಿ ಶಾಸಕ ಬಸವರಾಜ ದಢೇಸ್ಗೂರು ಮಾತನಾಡಿ, ಅವಶ್ಯಕ ವಸ್ತುಗಳ ಬೆಲೆ ಏರಿಸುವ ಮೂಲಕ ರಾಜ್ಯ ಸರ್ಕಾರ ಹಗಲು ಲೂಟಿಗೆ ಇಳಿದಿದೆ. ಬಡವರು, ರೈತರು ಹೊಲ ಮನೆ ಖರೀದಿಸಿದರೆ ಉಪನೋಂದಣೆ ಬೆಲೆಯನ್ನು ಏರಿಕೆ ಮಾಡಿದೆ. ಇನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರವೆಸಗಿ ಕೋಟಿಗಟ್ಟಲೆ ಹಣವನ್ನು ಆಂಧ್ರ-ತೆಲಂಗಾಣ ಚುನಾವಣೆಗೆ ಬಳಕೆ ಮಾಡಿದ್ದಾರೆ. ಇದೆಲ್ಲವನ್ನು ನೋಡಿದರೆ ರಾಜ್ಯದ ಸಿಎಂ-ಡಿಸಿಎಂ ಹಗಲು ಲೂಟಿಗೆ ಇಳಿದಿದ್ದಾರೆ ಎನ್ನುವುದು ಸ್ಪಷ್ಟ ಎಂದು ಆರೋಪಿಸಿದರು.

ದೀನ ದಲಿತರು, ಹಿಂದುಳಿದ ವರ್ಗದವರೆ ಹೆಸರಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೂ ಆ ವರ್ಗದ ಜನತೆಗೆ ರಾಜ್ಯ ಕಾಂಗ್ರೆಸ್ ಮೋಸ ಮಾಡಿ ಲೂಟಿಗಿಳಿದಿದೆ, ಎಸ್‌ಸಿ, ಎಸ್‌ಟಿ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿದ್ದು, ಇದು ಆ ವರ್ಗದ ಜನರು ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕೆಂದರು.

ಈ ವೇಳೆ ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ, ಚಂದ್ರಶೇಖರ ಮುಸಾಲಿ, ಕೊಟ್ನೆಕಲ್ ಬಸವರಾಜ ಮತ್ತು ನಾಗರಾಜ ಬಿಲ್ಗಾರ್ ಮಾತನಾಡಿದರು. ಈ ವೇಳೆ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ಪ್ರತಿಕೃತಿ ದಹನ ಮಾಡಿದರು. ಉಪತಹಸೀಲ್ದಾರ್ ವಿಶ್ವೇಶ್ವರಯ್ಯ ಸಾಲಿಮಠ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷ ರತ್ನಕುಮಾರಿ, ಪ್ರಿಯಾ ಪವಾರ, ಹುಲಿಗೆಮ್ಮ ನಾಯಕ, ಸೋಮಶೇಖರ ಗೌಡ ಮುಷ್ಟೂರು, ಶರಣಬಸವ ರೆಡ್ಡಿ, ದೇವರಾಜ ನಾಯಕ, ಆದಿಲ್ ಭಾಷಾ, ಪುರಸಭೆ ಸದಸ್ಯರು, ವಿವಿಧ ಮೋರ್ಚಾ ಸದಸ್ಯರು, ಪದಾಧಿಕಾರಿಗಳು ಇದ್ದರು.ಕಲ್ಲು ಕಳವು ಮಾಡಿಲ್ಲವೇ?:

ಬಳ್ಳಾರಿ-ಕೊಪ್ಪಳ ಜಿಲ್ಲೆಗೆ ನಂಟಿದೆ. ಅದರೆ ಬಾಗಲಕೋಟೆ ಜಿಲ್ಲೆಯಿಂದ ಬಂದ ನೀವು ಕೊಪ್ಪಳ ಜಿಲ್ಲೆಯಲ್ಲಿ ಶಾಸಕರಾಗಿ ಮಂತ್ರಿ ಆಗಿದ್ದಿರಾ, ಆದರೆ, ಪಕ್ಕದ ಬಳ್ಳಾರಿ ಜಿಲ್ಲೆಯಿಂದ ಬಂದಂಥ ಜನಾರ್ದನ ರೆಡ್ಡಿ ಅವರನ್ನು ಆಕ್ಷೇಪಿಸುವುದೇಕೆ ಸಚಿವ ಶಿವರಾಜ್ ತಂಗಡಗಿ ವಿರುದ್ಧ ಮಾಜಿ ಶಾಸಕ ಬಸವರಾಜ ದಢೇಸ್ಗೂರು ವಾಗ್ದಾಳಿ ನಡೆಸಿದರು.

ರೆಡ್ಡಿಯವರನ್ನು ಮಣ್ಣು ಕಳ್ಳ ಎನ್ನುತ್ತಿರಾ ಈ ಹಿಂದೆ ಮತ್ತು ಈಗಲೂ ಇಲಕಲ್ಲನಲ್ಲಿ ನೀವು ಕಲ್ಲು ಕಳವು ಮಾಡುತ್ತಿದ್ದಿರಲ್ಲವೇ ಎಂದು ದಢೇಸ್ಗೂರು ಪ್ರಶ್ನೆ ಮಾಡಿದರು. ಬನ್ನಿ ನಿಮ್ಮ ಹುಟ್ಟೂರು ಇಲ್ಲಕಲ್‌ಗೆ ಬರುವೆ ಅಲ್ಲಿನ ಜನರನ್ನು ಕೇಳುವೆ, ಅಲ್ಲಿನ ಯಾವುದೇ ಸರ್ಕಲ್‌ನಲ್ಲಿ ಜನರನ್ನು ಕೇಳುವಾ ನೀವು ಕಲ್ಲು ಕಳ್ಳತನ ಮಾಡಿದ್ದು, ಮಾಡ್ತಾ ಇದ್ದಿದ್ದು ಸತ್ಯವೋ ಸುಳ್ಳೋ ಎಂದು ಗೋತ್ತಾಗುತ್ತದೆ ಎಂದು ಸವಾಲು ಹಾಕಿದರು.