ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಕಾಂತರಾಜು ವರದಿ ಜಾರಿಗೆ ತರಬೇಕು ಎಂದು ಅಹಿಂದ ವರ್ಗದಿಂದ ಸರ್ಕಾರಕ್ಕೆ ಒತ್ತಾಯ ಮಾಡಲಾಗಿತ್ತು ಎಂದು ಮಾಜಿ ಶಾಸಕ ಪ್ರೊ.ರಾಜು ಆಲಗೂರ ಹೇಳಿದರು.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಏ.17 ರಂದು ಸುಧೀರ್ಘ ಚರ್ಚೆ ಮಾಡಲಾಗುವುದು ಎಂದು ಸಿಎಂ ಭರವಸೆ ಕೊಟ್ಟಿದ್ದಾರೆ. ಸಲ್ಲಿಕೆಯಾದ ವರದಿಯಲ್ಲಿ ಯಾವುದೇ ಲೋಪವಾಗಿಲ್ಲ. ಲೋಪವಾಗಿದ್ದರೆ ಸರಿಪಡಿಸಿಕೊಳ್ಳಲು ಅವಕಾಶ ಕೊಡುತ್ತೇವೆ ಎಂದು ಸಿಎಂ ಹೇಳಿದ್ದಾರೆ. ರಾಜ್ಯದಲ್ಲಿ ಈ ವರದಿಗೆ ಯಾರದ್ದು ವಿರೋಧವಿಲ್ಲ. ಲಿಂಗಾಯತ ಹಾಗೂ ಒಕ್ಕಲಿಗ ಸಮಾಜಗಳು ಜಾತಿಗಣತಿ ಅವೈಜ್ಞಾನಿಕವಾಗಿದೆ ಪರಿಶೀಲನೆ ಮಾಡಬೇಕು ಎಂದು ಆರೋಪಿಸುತ್ತಿವೆ. ನಾವು ಅವರ ವಿರೋಧಿಗಳಲ್ಲ, ಅವರಿಗೆ ಸಿಗಬೇಕಾದ ನ್ಯಾಯ ಸಿಗಬೇಕು ಎಂಬುದು ನಮ್ಮ ಅಪೇಕ್ಷೆ. ಲಿಂಗಾಯತರಿಗೆ ಹಾಗೂ ಒಕ್ಕಲಿಗರಿಗೆ ಅನ್ಯಾಯವಾಗಿದ್ದರೆ ಲಿಂಗಾಯತ, ಒಕ್ಕಲಿಗ ಅವರಷ್ಟೆ ಸರ್ವೇ ಮಾಡಿಸಿ ನ್ಯಾಯ ಪಡೆದುಕೊಳ್ಳಬೇಕು. ಹಿಂದುಳಿದ ವರ್ಗಗಳ ಜಾತಿ ಗಣತಿಯನ್ನು ಜಾರಿ ಮಾಡಿ ಸಿಎಂ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು. ನೀವು ಜಾರಿ ಮಾಡಿ, ಅಕಸ್ಮಾತ ಇದು ಜಾರಿಯಾಗದಿದ್ದರೆ ನಾವು ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.ಭಾರತದಲ್ಲೇ ಅತಿ ಎತ್ತರದ ಅಂಬೇಡ್ಕರ ಪ್ರತಿಮೆ ಮಾಡುವ ಭರವಸೆ ನೀಡಿದ ಸಿಎಂ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಬಿಜೆಪಿಯವರಿಗೆ ಸಿದ್ರಾಮಯ್ಯನವರ ಸಾಮಾಜಿಕ ಹೋರಾಟದ ಬಗ್ಗೆ ಅರಿವಿಲ್ಲ. ಅಲ್ಪಸಂಖ್ಯಾತರನ್ನು ಬಹುಸಂಖ್ಯಾತರನ್ನು ಘೋಷಿಸಿ ಎಂದು ಯತ್ನಾಳ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಬಹು ಸಂಖ್ಯಾತರೆಂದು ಘೋಷಿಸಿ ಅದರಂತೆ ರಾಜಕೀಯದಲ್ಲಿ ಟಿಕೆಟ್ ಕೊಡಬೇಕು, ಇನ್ನುಳಿದ ಸೌಲಭ್ಯಗಳನ್ನು ಕೊಡಬೇಕು ಎಂದರು.ಮುಖಂಡ ಚಂದ್ರಶೇಖರ ಕೊಡಬಾಗಿ ಮಾತನಾಡಿ, ಲಿಂಗಾಯತರು ಒಂದು ಕೋಟಿ ಇದ್ದಾರೆ ಎಂದು ಉಸ್ತುವಾರಿ ಸಚಿವರು ಅಧ್ಯಯನ ಮಾಡಿ ಹೇಳಿದ್ದಾರೆ. ಲಿಂಗಾಯತರಲ್ಲಿ ಪ್ರವರ್ಗ ಅ, ಪ್ರವರ್ಗ ಬ ಅವರನ್ನು ವಿಂಗಡಿಸಿದ್ದಾರೆ. ಅದನ್ನು ಸೇರಿಸಿದರೆ ಒಂದು ಕೋಟಿ ಆಗಲಿದೆ. ಅದಕ್ಕೆ ನಮ್ಮ ಸಹಮತಿ ಇದೆ, ಲಿಂಗಾಯತ ಹಾಗೂ ಒಕ್ಕಲಿಗರ ಬಗ್ಗೆ ಅಹಿಂದ ವರ್ಗದ ವಿರೋಧವಿಲ್ಲ, ನಮ್ಮೆಲ್ಲರ ಸಹಮತವಿದೆ. ಅದನ್ನು ಸರಿಪಡಿಸಿ ವರದಿ ಜಾರಿ ಮಾಡಲೇಬೇಕು ಎಂದು ಹೇಳಿದರು.ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ಎಐಸಿಸಿ ವರಿಷ್ಠರು ಸಿಎಂಗೆ ಜಾತಿಗಣತಿ ಜಾರಿ ಮಾಡಲು ಹೇಳಿದ್ದಾರೆ. ಸಿಎಂ ಸಿದ್ಧರಾಮಯ್ಯನವರು ಮಾಡುತ್ತಾರೆ. ಈ ವರದಿ ಜಾರಿಗೆ ನಮ್ಮ ಸಹಮತಿ ಇದೆ ಎಂದರು.
ಮುಖಂಡ ಸೋಮನಾಥ ಕಳ್ಳಿಮನಿ, ಎಂ.ಸಿ.ಮುಲ್ಲಾ, ಮಹಮ್ಮದ ರಫೀಕ್ ಟಪಾಲ್ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಸ್.ಎಂ.ಪಾಟೀಲ ಗಣಿಹಾರ, ಅಡಿವೆಪ್ಪ ಸಾಲಗಲ್, ಪ್ರೊ.ಎಂ.ಜಿ.ಯಂಕಂಚಿ, ವಸಂತ ಹೊನಮೊಡೆ, ಎಂ.ಸಿ.ಮುಲ್ಲಾ ಉಪಸ್ಥಿತರಿದ್ದರು.----------ಕೋಟ್‌ಯಾರು ಎಷ್ಟು ಜನಸಂಖ್ಯೆಯಲ್ಲಿದ್ದೇವೆ, ಎಲ್ಲರಿಗೂ ನ್ಯಾಯ ಸಿಗಬೇಕಿದೆ. ಇದಕ್ಕೆ ಬಿಜೆಪಿಯವರು ವಿರೋಧ ಮಾಡುತ್ತಿದ್ದಾರೆ. ಅವರು ಅಹಿಂದ ವರ್ಗದ ವಿರೋಧಿಗಳಾಗಿದ್ದು, ಮೈಸೂರು ಎಂಪಿ ಯದುವೀರ ಒಡೆಯರ ಅವರು ವಿರೋಧಿಸುತ್ತಿದ್ದಾರೆ. ಕೃಷ್ಣಾರಾಜ ಒಡೆಯರ ಅವರು ಜಾತಿಗಳ ಜನಸಂಖ್ಯೆಗೆ ಮೀಸಲಾತಿ ಕೊಟ್ಟಿದ್ದಾರೆ. ಆ ಕುಟುಂಬದವರು ವಿರೋಧ ಮಾಡುತ್ತಿರುವುದು ವಿಪರ್ಯಾಸ. ಯಾರು ಏನೇ ವಿರೋಧ ಮಾಡಿದರು ಅಹಿಂದ ವರ್ಗ ಸಿದ್ಧರಾಮಯ್ಯನವರ ಬೆನ್ನಿಗೆ ಇದ್ದೇವೆ,ಪ್ರೊ.ರಾಜು ಆಲಗೂರ, ಮಾಜಿ ಶಾಸಕ