ಚಿಕ್ಕಮಗಳೂರುಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶನಿವಾರ ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೆ ಭೇಟಿ ನೀಡಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶನಿವಾರ ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೆ ಭೇಟಿ ನೀಡಿದರು.

ಮಠದ ಕ್ಷೇತ್ರನಾಥ ವೀರಭದ್ರಸ್ವಾಮಿ ದರ್ಶನ ಪಡೆದ ಅವರು, ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು. ರಂಭಾಪುರಿ ಮಠದ 119ನೇ ಜಗದ್ಗುರು ವೀರ ಗಂಗಾಧರ ಅಜ್ಜಯ್ಯನವರ ಪರಮ ಭಕ್ತರಾಗಿರುವ ಡಿ.ಕೆ.ಶಿವಕುಮಾರ್, ಮಠದ ಶಾಖಾ ಮಠಗಳ ಶ್ರೀಗಳ ಆಶೀರ್ವಾದವನ್ನೂ ಪಡೆದರು.ನಂತರ ರಂಭಾಪುರಿ ಜಗದ್ಗುರುಗಳು ಹಾಗೂ ಶಾಖಾ ಮಠಾಧೀಶರೊಂದಿಗೆ ಮುಖ್ಯಮಂತ್ರಿ ಸಮಾಲೋಚನೆ ನಡೆಸಿದರು.ರಂಭಾಪುರಿ ಮಠದಲ್ಲಿ ನೂತನ ದೇವಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ:

ಇದೇ ವೇಳೆ ರಂಭಾಪುರಿ ಪೀಠದಲ್ಲಿ ರೇಣುಕಾಚಾರ್ಯರ ನೂತನ ದೇವಾಲಯ ನಿರ್ಮಾಣಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶಂಕುಸ್ಥಾಪನೆ ನೆರವೇರಿಸಿದರು.

ಸುಮಾರು ಮೂರು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ರಂಭಾಪುರಿ ಪೀಠ ದೇಶದ ಪಂಚಪೀಠಗಳಲ್ಲಿ ಮೊದಲ ಪೀಠವೆಂದು ಪರಿಗಣಿಸಲಾಗಿದೆ. ಉಜ್ಜಯಿನಿ, ಕೇದಾರ, ಶ್ರೀಶೈಲ ಹಾಗೂ ಕಾಶಿ ಪೀಠಗಳಿಗೆ ರಂಭಾಪುರಿ ಪೀಠವೇ ಮೂಲ ಪೀಠ ಎಂಬುದು ಪರಂಪರೆಯ ನಂಬಿಕೆಯಿದೆ.

ಸುಮಾರು 200 ವರ್ಷಗಳ ಹಳೆ ಕಟ್ಟಡವನ್ನು ತೆರವುಗೊಳಿಸಿ, ಸಂಪೂರ್ಣ ಕಲ್ಲಿನಿಂದ ನೂತನ ದೇವಾಲಯ ನಿರ್ಮಿಸಲು ಯೋಜಿಸಲಾಗಿದೆ. ರೇಣುಕಾಚಾರ್ಯರ ಮೂಲ ಮೂರ್ತಿ ಇರುವ ಗುಡಿಯನ್ನು ಹೊರತುಪಡಿಸಿ ಉಳಿದ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಲ್ಲಿನ ಕಟ್ಟಡ ನಿರ್ಮಾಣವಾಗಲಿದೆ.

ಮಠದ ಕಟ್ಟಡವನ್ನು ಕಾಲಕಾಲಕ್ಕೆ ಜಗದ್ಗುರುಗಳು ಹಾಗೂ ಆಡಳಿತ ಮಂಡಳಿ ನವೀಕರಿಸುತ್ತಾ ಬಂದಿದ್ದು, ಇದೀಗ ಹೊಸ ದೇವಾಲಯ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.

-- ಬಾಕ್ಸ್...ರಂಭಾಪುರಿ ಮಠದಲ್ಲಿ ಮಂಗಳಾರತಿ ವೇಳೆ ಕೆಳಗೆ ಬಿದ್ದ ₹500 ನೋಟು:ರಂಭಾಪುರಿ ಮಠಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡಿದ ವೇಳೆ ಮಂಗಳಾರತಿ ಕಾಣಿಕೆ ಸಲ್ಲಿಸುವ ಸಂದರ್ಭದಲ್ಲಿ ₹500 ನೋಟುಗಳು ಕೆಳಗೆ ಬಿದ್ದ ಘಟನೆ ನಡೆಯಿತು.ಕಾಣಿಕೆ ಸಲ್ಲಿಸುತ್ತಿದ್ದ ವೇಳೆ ಕಂತೆಯಿಂದ ಹಣ ಎಳೆಯುವ ಸಂದರ್ಭದಲ್ಲಿ ಕೆಳಗೆ ಬಿದ್ದ ನೋಟುಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಆಯ್ದುಕೊಂಡರು. ಬಳಿಕ ₹500ರ ನೋಟುಗಳನ್ನು ಕಾಣಿಕೆ ಹುಂಡಿಗೆ ಹಾಕಿದರು.