ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂಧನೂರು
ಸರ್ಕಾರಿ ಪದವಿ ಕಾಲೇಜ್ ಸುವರ್ಣ ಮಹೋತ್ಸವ, ೨೦೦ ಕೋಟಿ ವೆಚ್ಚದ ಜಲಧಾರೆ ಯೋಜನೆಗೆ ಶಂಕುಸ್ಥಾಪನೆ, ಕನ್ನಡ ರಥಯಾತ್ರೆ ಮತ್ತು ತಿಮ್ಮಾಪುರ ಏತ ನೀರಾವರಿ ಯೋಜನೆಯ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು 6 ಜನ ಸಚಿವರು ಡಿ.೧೯ರಂದು ಸಿಂಧನೂರಿಗೆ ಆಗಮಿಸಲಿದ್ದಾರೆ ಎಂದು ತಹಸೀಲ್ದಾರ್ ಅರುಣ್ ಎಚ್. ದೇಸಾಯಿ ತಿಳಿಸಿದರು.ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಹಸೀಲ್ದಾರ್ ಅರುಣ್ ದೇಸಾಯಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ, ನಾಲ್ಕು ಪ್ರಮುಖ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಅಧಿಕಾರಿ ವರ್ಗದವರು ಮತ್ತು ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಮುಖ್ಯಸ್ಥರು ಮುತುವರ್ಜಿ ವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ತಹಸೀಲ್ದಾರ್ ಮನವಿ ಮಾಡಿದರು.
ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಪ್ರಥಮ ಬಾರಿಗೆ ರಾಯಚೂರು ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸುತ್ತಿರುವುದರಿಂದ ಈ ಕಾರ್ಯಕ್ರಮ ತಾಲೂಕಿನ ಎಲ್ಲ ನಾಗರಿಕರ ಕಾರ್ಯಕ್ರಮವಾಗಿ ಗೋಚರಿಸುವಂತೆ ಶ್ರಮಿಸಬೇಕು ಎಂದು ಹೇಳಿದರು.ಸಿಎಂ, ಡಿಸಿಎಂ ಮತ್ತು ಆರು ಜನ ಸಚಿವರು ಅಂದು ಬೆಳಗ್ಗೆ ೧೦.೩೦ಕ್ಕೆ ಗಂಟೆಗೆ ಸಿಂಧನೂರಿಗೆ ಬರಲಿದ್ದಾರೆ. ಅಷ್ಟರೊಳಗಾಗಿ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳು ಮೆರವಣಿಗೆಗೆ ಸಿದ್ಧವಾಗಿರಬೇಕು. ಬಸವ ವೃತ್ತ, ಎಪಿಎಂಸಿ ಮತ್ತು ಕನಕದಾಸ ಕಾಲೇಜ ಬಳಿ ವಿವಿಧ ತಂಡಳಿಂದ ನೃತ್ಯಗಳನ್ನು ಆಯೋಜಿಸಲಾಗಿದೆ ಎಂದರು.ರಾಜ್ಯಾದ್ಯಂತ ಕನ್ನಡ ರಥ ಸಂಚರಿಸುತ್ತಿದ್ದು, ಅದೇ ದಿನ ಸಿಂಧನೂರಿಗೆ ಆಗಮಿಸಲಿದೆ. ೬೦ ಜನರ ಕಲಾತಂಡಗಳು ಇರುತ್ತದೆ. ಬಳಿಕ ವಿದ್ಯಾರ್ಥಿಗಳ ಮೆರವಣಿಗೆ ತಹಸೀಲ್ದಾರ್ ಕಚೇರಿಯಿಂದ ಸರ್ಕಾರಿ ಕಾಲೇಜಿನವರೆಗೆ ತೆರಳಬೇಕಾಗಿದೆ. ತದನಂತರ ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟದ ಪದಾಧಿಕಾರಿಗಳು ಮುಖ್ಯಮಂತ್ರಿ ಅವರೊಂದಿಗೆ ಸಂವಾದ ನಡೆಸಲು ಅವಕಾಶವಿದ್ದು, ಬಳಿಕ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ. ನಂತರ ಒಳಬಳ್ಳಾರಿಗೆ ಮುಖ್ಯಮಂತ್ರಿ ತೆರಳಿ ತಿಮ್ಮಾಪುರ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ವಿವರಿಸಿದರು.
ಮೆರವಣಿಗೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಉಪಾಹಾರ ಮತ್ತು ಊಟದ ವ್ಯವಸ್ಯೆಯನ್ನು ಸಮರ್ಪಕವಾಗಿ ಮಾಡಬೇಕೆಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಾ.ಶಿವರಾಜ ಮತ್ತು ಕರ್ನಾಟಕ ಕಾಲೇಜು ಅಧ್ಯಕ್ಷ ಶಂಕರ ಗುರಿಕಾರ ಅಭಿಪ್ರಾಯಪಟ್ಟರು.ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಸರ್ಕಾರಿ ಕಾಲೇಜ್ ಬಳಿ ಏರ್ಪಾಡು ಮಾಡುವುದಾಗಿ ಖಾಸಗಿ ಕಾಲೇಜು ಆಡಳಿತ ಮಂಡಳಿಯ ಆರ್.ಸಿ.ಪಾಟೀಲ್ ತಿಳಿಸಿದರು.
ಪ್ರಾಚಾರ್ಯ ಪ್ರಹ್ಲಾದರೆಡ್ಡಿ ಸುವರ್ಣ ಮಹೋತ್ಸದ ಅಂಗವಾಗಿ ಡಿ.೧೯,೨೦,೨೧ ಮೂರು ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇತರ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಲು ಇಚ್ಛಿಸಿದರೆ ಅವಕಾಶ ಕೊಡುವುದಾಗಿ ತಿಳಿಸಿದರು.ಸಭೆಯಲ್ಲಿ ತಾಪಂ ಇಒ ಚಂದ್ರಶೇಖರ, ಖಾಸಗಿ ಕಾಲೇಜು ಆಡಳಿತ ಮಂಡಳಿಗಳ ಜಿಲ್ಲಾ ಘಟಕದ ಉಪಾಧ್ಯಕ್ಷ ಎಂ.ದೊಡ್ಡಬಸವರಾಜ, ತಾಲೂಕು ಘಟಕದ ಅಧ್ಯಕ್ಷ ವೈ.ನರೇಂದ್ರನಾಥ, ಅನಿಲ್ ಕುಮಾರ, ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಮುಖ್ಯಸ್ಥರಾದ ಬಸನಗೌಡ ತುರ್ವಿಹಾಳ, ಚಂದ್ರಶೇಖರ, ಸತ್ಯನಾರಾಯಣ, ಮಂಜುನಾಥ ಸೋಮಲಾಪುರ, ಅರುಣಕುಮಾರ ಭಾಗವಹಿಸಿದ್ದರು.