ಸಾರಾಂಶ
ಬ್ರಹ್ಮಾವರದ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಿಗೆ ರಾಜ್ಯಮಟ್ಟದ ಪ್ರಶಸ್ತಿಯನ್ನು ಘೋಷಿಸಿ, ನಂತರ ತಡೆ ಹಿಡಿದ ಸರ್ಕಾರದ ಕ್ರಮವನ್ನು ಖಂಡಿಸಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಹಾಗೂ ಮಹಿಳಾ ಮೋರ್ಚಾ ವತಿಯಿಂದ ಈ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪ್ರತಿಕೃತಿಯನ್ನು ದಹಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಉಡುಪಿ
ಮಣಿಪಾಲದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕೃತಿಗೆ ಅವಮಾನ ಮಾಡಿದ ಆರೋಪದ ಮೇಲೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಸೇರಿದಂತೆ ಹಲವಾರು ಮಂದಿ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ಬ್ರಹ್ಮಾವರದ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಿಗೆ ರಾಜ್ಯಮಟ್ಟದ ಪ್ರಶಸ್ತಿಯನ್ನು ಘೋಷಿಸಿ, ನಂತರ ತಡೆ ಹಿಡಿದ ಸರ್ಕಾರದ ಕ್ರಮವನ್ನು ಖಂಡಿಸಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಹಾಗೂ ಮಹಿಳಾ ಮೋರ್ಚಾ ವತಿಯಿಂದ ಈ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪ್ರತಿಕೃತಿಯನ್ನು ದಹಿಸಲಾಗಿತ್ತು.ಈ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಸೌರಭ್ ಬಲ್ಲಾಳ್ ಅವರು ಮಣಿಪಾಲ ಠಾಣೆಗೆ ದೂರು ನೀಡಿದ್ದು, ನಗರಸಭಾ ಸದಸ್ಯ ಗಿರೀಶ್ ಅಂಚನ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಅವರು ಸಿಎಂ ಸಿದ್ದರಾಮಯ್ಯ ಅವರ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಅಭಿರಾಜ್ ಸುವರ್ಣ ಪ್ರತಿಕೃತಿಗೆ ಪೆಟ್ರೋಲ್ ಸುರಿದಿದ್ದಾರೆ ಎಂದು ಆರೋಪಿಸಿದ್ದಾರೆ.ಅಲ್ಲದೆ ಶಾಸಕ ಯಶ್ಪಾಲ್ ಸುವರ್ಣ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಹಿಳಾ ಮೋರ್ಚಾದ ನಿಕಟಪೂರ್ವ ಅಧ್ಯಕ್ಷೆ ವೀಣಾ ಶೆಟ್ಟಿ ಮುಂತಾದ ಸುಮಾರು 11 ಮಂದಿಯನ್ನು ದೂರಿನಲ್ಲಿ ಹೆಸರಿಲಾಗಿದ್ದು, ಅವರು ಶಾಂತಿ ಭಂಗವನ್ನುಂಟು ಮಾಡುವ ಉದ್ದೇಶದಿಂದ ಮುಖ್ಯಮಂತ್ರಿ ಅವರನ್ನು ಅವಮಾನಿಸಿದ್ದಾರೆ. ಒಂದು ವರ್ಗವನ್ನು ಪ್ರಚೋದಿಸುವ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.-----------------
ಕೇಸ್‌ನಿಂದ ದೃತಿಗೆಡುವ ಪ್ರಶ್ನೆಯೇ ಇಲ್ಲ: ಯಶ್ಪಾಲ್‌ಉಡುಪಿ ಜಿಲ್ಲೆಯ ಶಿಕ್ಷಣ ವ್ಯವಸ್ಥೆ ವಿಶ್ವ ಮಾನ್ಯತೆ ಪಡೆದಿದ್ದು, ಜಿಲ್ಲೆಯ ಯುವ ಸಮುದಾಯವನ್ನು ದೇಶದ ಆಸ್ತಿಯನ್ನಾಗಿಸುವ ಶಿಕ್ಷಕರಿಗೆ ಮಾಡಿದ ಅಪಮಾನವನ್ನು ಸಹಿಸಲು ಸಾಧ್ಯವಿಲ್ಲ. ಮತೀಯ ಶಕ್ತಿಗಳ ಕುಮ್ಮಕ್ಕಿನಿಂದ ಶಿಕ್ಷಕ ಪ್ರಶಸ್ತಿಯನ್ನು ಹಿಂಪಡೆದು ಜಿಲ್ಲೆಯ ಶಿಕ್ಷಕರ ನೈತಿಕ ಸ್ಥೈರ್ಯ ಕುಗ್ಗಿಸಲು ಮುಂದಾದಾಗ ಜವಾಬ್ದಾರಿಯುತ ಶಾಸಕನಾಗಿ ಶಿಕ್ಷಕರ ಜೊತೆ ಸದಾ ನಿಲ್ಲುತ್ತೇನೆ. ನನ್ನ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ನೂರು ಕೇಸು ದಾಖಲಿಸಿದರೂ ಧೃತಿಗೆಡುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದ್ದಾರೆ.