ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ಹಾವೇರಿಯಲ್ಲಿ ಒಂದು ಸಾವಿರ ದಿನಗಳ ಸಂಭ್ರಮಾಚರಣೆ ಯಾವ ಪುರುಷಾರ್ಥಕ್ಕೆ ಸಿದ್ದರಾಮಯ್ಯನವರೇ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ.

- ಜನರ ಕರೆ ತರಲು ಸರ್ಕಾರದ ಬೊಕ್ಕಸ ಖಾಲಿ ಮಾಡಿದ್ದೀರಿ: ರೇಣುಕಾಚಾರ್ಯ ಟೀಕೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ಹಾವೇರಿಯಲ್ಲಿ ಒಂದು ಸಾವಿರ ದಿನಗಳ ಸಂಭ್ರಮಾಚರಣೆ ಯಾವ ಪುರುಷಾರ್ಥಕ್ಕೆ ಸಿದ್ದರಾಮಯ್ಯನವರೇ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪ್ರಶ್ನಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಕಡೆಯಿಂದ ಜನರನ್ನು ಕರೆ ತರಲು ಬಸ್‌ಗಳ ವ್ಯವಸ್ಥೆ ಮಾಡಿ, ಸರ್ಕಾರದ ಬೊಕ್ಕಸದ ಹಣ‍ ಖರ್ಚು ಮಾಡಿದ್ದೀರಿ. ನೀವು ವ್ಯವಸ್ಥೆ ಮಾಡಿದ್ದ ಬಸ್‌ಗಳಲ್ಲಿ 3 ಜನರ, 5 ಜನ, 8 ಜನ ಹೀಗೆ ಜನರಿಂದಲೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ನೀವು ಕೊಟ್ಟ ಭರವಸೆಗಳೇ ಈಡೇರಿಸಿಲ್ಲ. ಆರನೇ ಗ್ಯಾರಂಟಿ ಎನ್ನುತ್ತಿರುವ ನೀವು ಯಾವ ಕ್ಷೇತ್ರದಲ್ಲಿ ಯಾವ ಶಾಶ್ವತ ಯೋಜನೆ ಮಾಡಿದ್ದೀರಿ? ರಸ್ತೆಗಳ ಗುಂಡಿಗಳನ್ನೇ ಮುಚ್ಚಿಸಲು ನಿಮ್ಮಿಂದ ಆಗುತ್ತಿಲ್ಲ. ಶೇ.60ರಷ್ಟು ಕಮಿಷನ್‌ ದಂಧೆ ನಡೆಸಿದ್ದು, ಇದರಿಂದಲೇ ₹5 ಸಾವಿರ ಕೋಟಿ ಲೂಟಿಯಾಗಿದೆ. ನಿಮ್ಮ ಆಳ್ವಿಕೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು ಸಾಧನೆಯೇ? ವಾಲ್ಮೀಕಿ ನಿಗಮದಲ್ಲಿ ₹187 ಕೋಟಿ ಹಗರಣ, ಓರ್ವ ಅಧಿಕಾರಿಯೇ ಇದಕ್ಕೆ ಬಲಿ, ಪರಿಶಿಷ್ಟರಿಗೆ ಸೇರಿದ 37 ಸಾವಿರ ಕೋಟಿಗೂ ಅಧಿಕ ಹಣ ಗ್ಯಾರಂಟಿಗೆ ಬಳಸಿದ್ದು ಸಾಧನೆಯಾ ಎಂದು ಕಿಡಿಕಾರಿದರು.

ಮುಡಾ ಸೈಟ್ ಹಗರಣ ಹೊರ ಬೀಳುತ್ತಿದ್ದಂತೆಯೇ 14 ನಿವೇಶನ ಮರಳಿಸಿದ್ದು ನಿಮ್ಮ ಸಾಧನೆಯೇ? ಆಸ್ತಿ ನೋಂದಣಿ ಶುಲ್ಕ ವಿಪರೀತ ಏರಿಕೆ ಮಾಡಿ, ಏನು ಸಾಧಿಸಲು ಹೊರಟಿದ್ದೀರಿ? ಹಾಲಿನಿಂದ ಹಾಲ್ಕೋಹಾಲ್‌ವರೆಗೂ ದರ ಹೆಚ್ಚಿಸಿದ್ದೀರಿ. ಗೃಹಲಕ್ಷ್ಮಿಯ ₹5 ಸಾವಿರ ಕೋಟಿ ಕೊಟ್ಟಿಲ್ಲ. ಯುವನಿಧಿ ಹಣವನ್ನೇ ಸರಿಯಾಗಿ ನೀಡುತ್ತಿಲ್ಲ. ಇದೇನಾ ಸಾವಿರ ದಿನಗಳ ಸಾಧನೆ ಎಂದು ಸರ್ಕಾರದ ವೈಫಲ್ಯಗಳ ವಿವರಿಸಿ, ಖಂಡಿಸಿದರು.

ಪಕ್ಷದ ಮುಖಂಡರಾದ ಬಿ.ಜಿ. ಅಜಯಕುಮಾರ, ಚಂದ್ರಶೇಖರ ಪೂಜಾರ, ಬಿ.ಎಂ.ಸತೀಶ ಕೊಳೇನಹಳ್ಳಿ. ಧನಂಜಯ ಕಡ್ಲೇಬಾಳ್, ಎಚ್.ಪಿ.ವಿಶ್ವಾಸ, ತಾರೇಶ ನಾಯ್ಕ ಇತರರು ಇದ್ದರು.

- - -

-15ಕೆಡಿವಿಜಿ6: ದಾವಣಗೆರೆಯಲ್ಲಿ ಭಾನುವಾರ ಬಿಜೆಪಿ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.