ಸಿಎಂ ಅವರೇ, ಕೊಪ್ಪಳಕ್ಕೆ ಪರಿಸರ ಭಾಗ್ಯ ನೀಡಿ

| Published : Oct 03 2025, 01:07 AM IST

ಸಾರಾಂಶ

ಕರ್ನಾಟಕ ಸರ್ಕಾರ ಇಲಾಖೆ ಏಜೆನ್ಸಿಗಳ ಪರಿಸರ, ಆರೋಗ್ಯ ಶೋಧನೆಯ ಮೇಲೆ ಇಲ್ಲಿನ ಜನರಿಗೆ ನಂಬಿಕೆ ಇಲ್ಲ

ಕೊಪ್ಪಳ: ರಾಜ್ಯಕ್ಕೆ ಐದು ಗ್ಯಾರಂಟಿ ನೀಡಿರುವ ಮುಖ್ಯಮಂತ್ರಿ ಕೊಪ್ಪಳ ಬಳಿ ನೂತನ ಕೈಗಾರಿಕೆ ತಲೆ ಎತ್ತದಂತೆ ಮತ್ತು ಇರುವ ಕಾರ್ಖಾನೆ ವಿಸ್ತರಣೆ ಮಾಡದಂತೆ ಆದೇಶ ಮಾಡುವ ಮೂಲಕ ಪರಿಸರ ಗ್ಯಾರಂಟಿ ನೀಡುವಂತೆ ಆಗ್ರಹಿಸಿ ಅ. 6ರಂದು ಕೊಪ್ಪಳಕ್ಕೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ನೀಡಲು ಕೊಪ್ಪಳ ಬಚಾವೋ ಆಂದೋಲನ ಸಮಿತಿ ಹಾಗೂ ತಾಲೂಕು ಪರಿಸರ ಹೋರಾಟ ಸಮಿತಿ ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸಭೆ ಸೇರಿ ಈ ನಿರ್ಧಾರ ಮಾಡಲಾಗಿದ್ದು, ಕೊಪ್ಪಳ ಆಗಮಿಸುವ ಮೂಲಕ ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪನೆ ರದ್ದು ಆದೇಶ ಮಾಡುವಂತೆಯೂ ಒತ್ತಾಯಿಸಲಾಗಿದೆ.

ರಾಜ್ಯಕ್ಕೆ ಪಂಚ ಗ್ಯಾರಂಟಿ, ಭಾಗ್ಯಗಳನ್ನು ಕೊಟ್ಟಿರುವಂತೆ ಕೊಪ್ಪಳಕ್ಕೆ ಶುದ್ಧ ಪರಿಸರದ ಭಾಗ್ಯ, ಬಲ್ಡೋಟ ವಿಸ್ತರಣೆಗೆ ತಡೆ ಭಾಗ್ಯದ ಆದೇಶ ಕೊಡಬೇಕೆಂದು, ಇಲ್ಲಿರುವ ಮುಕುಂದ ಸುಮಿ, ಕಿರ್ಲೋಸ್ಕರ್, ಕಲ್ಯಾಣಿ, ಎಕ್ಷಿಂಡಿಯಾ ಒಳಗೊಂಡು ಯಾವುದೇ ಕಾರ್ಖಾನೆಯ ವಿಸ್ತರಣೆ, ಹೊಸ ಸ್ಥಾಪನೆ ವಿರೋಧಿಸಿ, ಬಸಾಪುರ ಸ.ನಂ. 143ರ 44.35 ಎಕರೆ ಕೆರೆಯನ್ನು 2007ರಲ್ಲಿ 33 ಲಕ್ಷಕ್ಕೆ ಮಾರಾಟ ಮಾಡಿದ್ದು ಈ ಕೆರೆ ಮಾರಾಟ ಮಾಡಿದ ಆದೇಶ ವಾಪಸ್ ಪಡೆಯಬೇಕೆಂದು, ಜನ ಜಾನುವಾರು ನೀರು ಕುಡಿಯಲು ಕೆರೆಯನ್ನು ಮುಕ್ತವಾಗಿಡಬೇಕೆಂದು ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಯಿತು.

ಕರ್ನಾಟಕ ಸರ್ಕಾರ ಇಲಾಖೆ ಏಜೆನ್ಸಿಗಳ ಪರಿಸರ, ಆರೋಗ್ಯ ಶೋಧನೆಯ ಮೇಲೆ ಇಲ್ಲಿನ ಜನರಿಗೆ ನಂಬಿಕೆ ಇಲ್ಲ. ಉನ್ನತ ಮಟ್ಟದ ಐಐಎಸ್‌ಸಿ ಮತ್ತು ಎಐಐಎಂಎಸ್ ಇಲ್ಲವೆ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಮೂಲಕ ಸರ್ವೆ ನಡೆಸಬೇಕು ಎಂದು ಆಗ್ರಹಿಸಲಾಯಿತು.

ಬಸಾಪುರ ಕೆರೆ ನೀರು ಕುಡಿಸಲು ಹೋದ ಕುರಿಗಾಹಿ, ದನಗಾಹಿ ಮತ್ತು ಪರಿಸರ ಹೋರಾಟಗಾರರ ಮೇಲೆ ಹಲ್ಲೆ ಮಾಡಿ, ಹಸುಗಳ ಕಾಲ ಮುರಿದು ಕೂಡಿಹಾಕಿದ್ದಲ್ಲದೆ ಇವರ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದರ ಮೇಲೆ ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆ ನಡೆಸಬೇಕು. ಬಾಧಿತ ಪ್ರದೇಶಗಳ ಹಾನಿ ಸತ್ಯತೆ ತಿಳಿಯಲು ಮುಖ್ಯಮಂತ್ರಿ ಆ ಗ್ರಾಮಗಳಿಗೆ ಖುದ್ದು ಭೇಟಿ ಕೊಡಬೇಕು. ಸೆ. 30ರಂದು ಬೇವಿನಹಳ್ಳಿ ಚಿದಾನಂದಪ್ಪ ಮಡ್ಡಿ ಎನ್ನುವವರ ಕುರಿಗಳು ಹೆದ್ದಾರಿ ದಾಟುವಾಗ ಎಂಎಸ್‌ಪಿಎಲ್ ಟಿಪ್ಪರ್ ವಾಹನ ಆಕ್ಸಿಡೆಂಟ್ ಆಗಿ 160 ಕುರಿಗಳು ಸತ್ತಿವೆ. ತಲಾ ₹25 ಸಾವಿರದಂತೆ ₹40 ಲಕ್ಷ ಪರಿಹಾರವನ್ನು ಕಂಪನಿಯಿಂದ ಕೊಡಿಸುವಂತೆ ಆಗ್ರಹಿಸಲಾಗಿದೆ.

ಈ ಸಭೆಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಾಹಿತಿ ಎ.ಎಂ. ಮದರಿ, ಡಿ.ಎಂ. ಪೂಜಾರ, ಈಶ್ವರ ಹತ್ತಿ, ಪೀರಾಹುಸೇನ ಹೊಸಳ್ಳಿ, ಎ.ವಿ. ಕಣವಿ, ರಾಜು ಬಾಕಳೆ, ಸಂಚಾಲಕರಾದ ಕೆ.ಬಿ. ಗೋನಾಳ, ಮಹಾಂತೇಶ ಕೊತಬಾಳ, ಬಸವರಾಜ ಶೀಲವಂತರ, ಶರಣು ಗಡ್ಡಿ, ಮಂಜುನಾಥ ಗೊಂಡಬಾಳ, ಎಸ್.ಎ. ಗಫಾರ್, ಮುದುಕಪ್ಪ ಹೊಸಮನಿ, ಶಿವಪ್ಪ ದೇವರಮನಿ ಬಗನಾಳ, ಹನುಮಂತಪ್ಪ ಗೊಂದಿ, ಯಲ್ಲಪ್ಪ ಬಂಡಿ, ಎಸ್.ಬಿ. ರಾಜೂರ, ಜಿ.ಬಿ. ಪಾಟೀಲ್, ಜಗದೀಶ ಕುಂಬಾರ, ಎಂ. ಜಂಬಣ್ಣ, ಬಂದೇನವಾಜ್ ಮಣಿಯಾರ, ಸುಂಕಪ್ಪ ಮೀಸಿ, ಗಾಳೆಪ್ಪ ಮುಂಗೋಲಿ, ಮಕ್ಬೂಲ್ ರಾಯಚೂರು, ಶಿವಪ್ಪ ಹಡಪದ, ಎಂ.ಎಸ್. ಕೊಟಗಿ, ಜಿ.ಬಿ. ಪಾಟೀಲ್, ವೀರೇಶ ಕಟ್ಟಿಮನಿ ಇದ್ದರು.