ಸಾರಾಂಶ
ಗುಬ್ಬಿ : ಸಿಎಂ ಸಿದ್ದರಾಮಯ್ಯನವರು ರೈಲ್ವೆ ದರ ಹೆಚ್ಚಾಗಿದೆ. ಇದನ್ನು ವಾಪಸ್ ತೆಗೆದುಕೊಳ್ಳಿ ಎಂದು ಟ್ವೀಟ್ ಮಾಡಿರುವುದು ಸರಿಯಲ್ಲ. ಕೇಂದ್ರ ಸರ್ಕಾರ ಬೆಲೆ ಏರಿಕೆಗಿಂತ, ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡಿರುವುದು ಸಾಮಾನ್ಯ ಜನರಿಗೆ ಗೊತ್ತಿರುವಂತ ಸಂಗತಿಯಾಗಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಹೇಳಿದರು.ತಾಲೂಕಿನ ಬೆಣಚಿಗೆರೆ ರೈಲ್ವೆ ಗೇಟ್ ಅತ್ತಿರ ಎಲ್‌ಸಿ ಸಂಖ್ಯೆ 56ಕ್ಕೆ 36.71 ಕೋಟಿಗಳ ವೆಚ್ಚದಲ್ಲಿ ಮೇಲ್ಸೇತುವೆ ರಸ್ತೆ ಹಾಗೂ ನಿಟ್ಟೂರು ರೈಲ್ವೆ ಯಾರ್ಡ್ ಹತ್ತಿರ ಎಲ್‌ಸಿ ಸಂಖ್ಯೆ 59ಕ್ಕೆ 36.29 ಕೋಟಿ ರುಪಾಯಿಗಳ ವೆಚ್ಚದಲ್ಲಿ ಮೇಲ್ಸೇತುವೆ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದ ಬಗ್ಗೆ ಮಾತಾನಾಡುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಅವರು ಅಧಿಕಾರಕ್ಕೆ ಬರುವಾಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಇಂಧನ ಬೆಲೆಯನ್ನು 10 ರು. ಕಡಿಮೆ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು. ಅದರ ಬದಲಿಗೆ 3ರಿಂದ 5 ರು.ಗಳಿಗೆ ಹೆಚ್ಚಿಗೆ ಮಾಡಿದ್ದಾರೆ. ರಾಜ್ಯದಲ್ಲಿ ನಂದಿನಿ ಹಾಲು, ಮೆಟ್ರೋ ದರ, ಸರ್ಕಾರಿ ಇಲಾಖೆಯ ಸ್ಟಾಂಪ್ ಡ್ಯೂಟಿಗಳು, ಬಸ್ ದರ ಇನ್ನೂ ಮುಂತಾದವುಗಳ ಮೇಲೆ ದರ ಹೆಚ್ಚಿಗೆ ಮಾಡಿರುವುದರಿಂದ ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ರೈಲ್ವೆ ದರವನ್ನು ಶೇ. 10 ರಷ್ಟು ಹೆಚ್ಚಿಗೆ ಮಾಡಿತ್ತು. ಈಗಿನ ನಮ್ಮ ಕೇಂದ್ರ ಸರ್ಕಾರ 500 ಕಿಲೋ ಮೀಟರ್ ನಂತರ ಒಂದು ಪೈಸೆ ಮಾತ್ರ ಹೆಚ್ಚಿಗೆ ಮಾಡಲಾಗಿದೆ. ಎಸಿ ಭೋಗಿಗಳಲ್ಲಿ ಪ್ರಯಾಣಿಸುವುದಕ್ಕೆ ಎರಡು ಪೈಸೆ ಹೆಚ್ಚಳ ಮಾಡಲಾಗಿದೆ ಎಂದರು.
ಪ್ರಧಾನಿ ಮೋದಿ ಮಾರ್ಗದರ್ಶನದಲ್ಲಿ ರೈಲ್ವೆ ಅಭಿವೃದ್ಧಿಯು ಆಧುನೀಕರಣಗೊಂಡಿದ್ದು, 136 ಮಾರ್ಗಗಳಲ್ಲಿ ವಂದೇ ಭಾರತ್ ರೈಲ್ವೆ ಸಂಚರಿಸುತ್ತಿದೆ. 30 ವರ್ಷ ಮೇಲ್ಪಟ್ಟಂತ ಹಳೆ ಭೋಗಿಗಳನ್ನು ಬದಲಿಸಿ ಸುಮಾರು 10 ಸಾವಿರ ಹೊಸ ಭೋಗಿಗಳನ್ನು ಬಿಡಲಾಗಿದೆ. ಈ ಹೊಸ ರಸ್ತೆ ಮೇಲ್ಸೇತುವೆಗಳ ನಿರ್ಮಾಣದಿಂದ ಪ್ರಯಾಣದ ಅವಧಿಯು ಕಡಿಮೆಯಾಗುವುದು. ಲೆವೆಲ್ ಕ್ರಾಸಿಂಗ್ ಗೇಟ್ ಗಳ ಬಳಿ ಹಾಗೂ ವಿಳಂಬ ತಪ್ಪುವುದು ಹಾಗೂ ಒಟ್ಟಾರೆ ರಸ್ತೆ ಮತ್ತು ರೈಲ್ವೆ ಸುರಕ್ಷತೆ ಹೆಚ್ಚುವ ಮೂಲಕ ಜನರಿಗೆ ಅನುಕೂಲವಾಗಲಿದೆ ಎಂದರು.
ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಲ್ ಕಾಮಗಾರಿ ಕುರಿತು ಮುಖ್ಯಮಂತ್ರಿಗಳ ಸಭೆಗೆ ನಾನು ಭಾಗವಹಿಸುತ್ತೇನೆ. ಗುಬ್ಬಿಯಲ್ಲಿ ಇರುವಂತ ಪರಿಸ್ಥಿತಿಯನ್ನು ವಿವರಿಸಿದ್ದೇನೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ದಿಲೀಪ್ ಕುಮಾರ್, ಚಂದ್ರಶೇಖರ ಬಾಬು, ಎನ್.ಸಿ. ಪ್ರಕಾಶ್, ಜಿ.ಎನ್. ಬೇಟ್ಟಸ್ವಾಮಿ, ಕಳ್ಳಿಪಾಳ್ಯ ಲೋಕೇಶ್, ಬ್ಯಾಟರಂಗೇಗೌಡ, ರಾಜಶೇಖರ್, ರೈಲ್ವೆ ಇಲಾಖೆಯ ಸಿಆರ್ ಎಮ್ ಎ.ಕೆ.ಸಿಂಗ್, ಅಸಿಸ್ಟೆಂಟ್ ಡಿ ಆರ್ ಎಮ್ . ಪರೀಕ್ಷಿತ್, ರೈಲ್ವೆ ಅಧಿಕಾರಿಗಳಾದ ಪ್ರಸಾದ್, ನಾಸೀದ್ ಜಾಮ್ ಜಾಮ್, ತಹಸೀಲ್ದಾರ್ ಬಿ. ಆರತಿ, ಗ್ರಾಪಂ ಅಧ್ಯಕ್ಷೆ ಲತಾ ದಯಾನಂದ್ , ದಿಶಾ ಸಮಿತಿ ಸದಸ್ಯರಾದ ಹುಚ್ಚಯ್ಯ, ಎಚ್.ಟಿ. ಭೈರಪ್ಪ, ಡಾ.ನವ್ಯ, ಬಿ.ಎಸ್. ನಾಗರಾಜ್, ಪಂಚಾಕ್ಷರಿ ಹಾಗೂ ಅಧಿಕಾರಿಗಳು ಮತ್ತಿತರರು ಇದ್ದರು.