ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬೆಂಗಳೂರಿನಲ್ಲಿ ಭಾನುವಾರ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭಕ್ಕೆ ಸಿಎಂ ಹೋದರೆ ಕಾಂಗ್ರೆಸ್ ಪಕ್ಷದ ಅವನತಿಗೆ ನಾಂದಿಯಾಗಲಿದೆ ಎಂದು ವೀರಶೈವ ಲಿಂಗಾಯತ ಮಠಾಧೀಶರು, ಸ್ವಾಮೀಜಿಗಳು ಎಚ್ಚರಿಸಿದ್ದಾರೆ.ಬಾಗಲಕೋಟೆಯಲ್ಲಿ ಕೆಲವು ವೀರಶೈವ ಲಿಂಗಾಯತ ಮಠಾಧೀಶರು ಶನಿವಾರ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂಗೆ ಎಚ್ಚರಿಕೆಯ ಸಂದೇಶ ರೀತಿಯಲ್ಲಿ ಮಠಾಧೀಶರು ಮಾತನಾಡಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಲಿರುವ ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭ ಕುರಿತು ಬಾಗಲಕೋಟೆಯಲ್ಲಿ ಶಿರಹಟ್ಟಿ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗೋಷ್ಠಿ ನಡೆಸಿದ ದಿಂಗಾಲೇಶ್ವರ ಸ್ವಾಮೀಜಿ ಅವರು ಭಾನುವಾರ ಅರಮನೆ ಮೈದಾನದಲ್ಲಿ ನಡೆಯುವ ಪ್ರತ್ಯೇಕ ಲಿಂಗಾಯತವಾದಿಗಳ ಕಾರ್ಯಕ್ರಮವಾಗಿದೆ. ಬಹುಶಃ ಇದು ಕಾಂಗ್ರೆಸ್ ಪಕ್ಷದ ಅವನತಿಗೆ ನಾಂದಿ ಹಾಡುತ್ತೆ ಎನ್ನುವ ಪೂರ್ವ ಸೂಚನೆ ಕಾಣುತ್ತಿದೆ. ಸಿಎಂ ಅವರ ಬಗ್ಗೆ ಗೌರವ ಇದೆ. ಕಾರ್ಯ ದಕ್ಷತೆ ಪ್ರೇಮ ಇದೆ. ನಾವು ಈಗಲೂ ಅವರಿಗೆ ಹೇಳೋದಿಷ್ಟೇ. ಆ ಟೀಂನಿಂದ ಹಿಂದೆಯೂ ಅಂತರ ಕಾಯ್ದುಕೊಳ್ಳಿ ಎಂದು ಹೇಳಿದ್ವಿ. ಈಗಲೂ ಸಹ ಅಂತರ ಕಾಯ್ದುಕೊಳ್ಳಿ ಎಂದು ಹೇಳ್ತೀವಿ. ಸಮಾಜ ವಿಘಟನೆ ಮಾಡುತ್ತಿರುವ ಗುಂಪಿನಲ್ಲಿ ರಾಜ್ಯದ ಸಿಎಂ ಪಾಲ್ಗೊಳ್ಳೋದು ಸೂಕ್ತವಲ್ಲ ಎಂದು ಹೇಳಿದರು.ಹಿಂದೆ ಬಹುದೊಡ್ಡ ನಾಯಕರು, ದೊಡ್ಡ ಸ್ವಾಮೀಜಿಗಳು ಪ್ರತ್ಯೇಕ ಮಾಡಲಿಕ್ಕೆ ಹೋಗಿ, ಅವರ ಹಿನ್ನಡೆ ಅನುಭವಿಸಿದ್ದಾರೆ. ಇವತ್ತು ಮತ್ತೆ ವ್ಯರ್ಥ ಪ್ರಯತ್ನ ಮಾಡ್ತಿದ್ದಾರೆ. ಬಹುಶಃ ಪ್ರತಿ ಜಿಲ್ಲೆಯಲ್ಲಿ ಜನತೆಗೆ ವಿನಂತಿ ಮಾಡಿಕೊಂಡಿದ್ದಾರೆ. ನಾವು ಸಿಎಂಗೆ ಸನ್ಮಾನ ಮಾಡುತ್ತೇವೆ ಬರಬೇಕು ಎಂದು ಹೇಳಿದ್ದಾರೆ. ಬಹಳಷ್ಟು ಮಠಾಧೀಶರಿಗೆ ಫೋನ್ ಕರೆ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಬೇಕು ಎಂದು ತಿಳಿಸಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮ ಎಂದು ಪ್ರತಿಪಾದಿಸುತ್ತಿರುವುದು ಅಖಂಡ ವೀರಶೈವ ಲಿಂಗಾಯತ ಸಮಾಜಕ್ಕೆ ಮಾಡುತ್ತಿರುವ ದ್ರೋಹ ಎಂದ ಅವರು, ಸಮಾಜದ ವಿಘಟನೆ ಕಾರ್ಯ ನಡೀತಿದೆ ಎಂದು ಸಿಎಂ ಗಮನಕ್ಕೆ ತರಲು ಬಯಸುತ್ತೇವೆ. ಇಡೀ ರಾಜ್ಯದ ಮಠಾಧೀಶರ ಒಲವು ಏನಿದೆ ಅನ್ನೋದನ್ನು ಹುಬ್ಬಳ್ಳಿಯ ಸಮಾವೇಶದಲ್ಲಿ ತಿಳಿಸಲಾಗಿದೆ. ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ತೆಲಂಗಾಣ, ಕೇರಳ ಇತ್ಯಾದಿ ರಾಜ್ಯದ ಜನ, ವೀರಶೈವ ಲಿಂಗಾಯತ ಒಂದೇ ಎಂಬುದರ ಪರ ಇದ್ದಾರೆಯೇ ಹೊರತು, ಬೆರಳೆಣಿಕೆಯ ಸಮಾಜಕ್ಕೆ, ಬೇಡವಾದ ಮಠಾಧಿಪತಿಗಳ ಬೇಡಿಕೆಯನ್ನು ತಾವು ಮನ್ನಿಸುವುದರಿಂದ ತಮ್ಮ ವ್ಯಕ್ತಿತ್ವ, ಪಕ್ಷಕ್ಕೆ ಹಾನಿ ಉಂಟಾಗುತ್ತದೆ ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಸಿಎಂ ಸ್ಥಾನಕ್ಕೆ ಬರುತ್ತಾ ಕುತ್ತು?: ನಾಳೆಯ ಬಸವ ಸಂಸ್ಕೃತಿ ಸಮಾರೋಪ ಸಮಾರಂಭಕ್ಕೆ ಸಿದ್ದರಾಮಯ್ಯ ಹೋದರೆ ಸಿಎಂ ಸ್ಥಾನಕ್ಕೆ ಕುತ್ತು ಬರುತ್ತೆ ಎಂದು ಗುಳೇದಗುಡ್ಡದ ಅಮರೇಶ್ವರ ಮಠದ ನೀಲಕಂಠ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಸಿಎಂ ಅವರಿಗೆ ನಮ್ಮ ಕಳಕಳಿ ವಿನಂತಿ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಹಾಗೂ ವೀರಶೈವ ಮಠಾಧಿಪತಿಗಳ ಒಕ್ಕೂಟದಿಂದ ವಿನಂತಿ ಇದೆ. ಈಗ ಭಾನುವಾರದ ಪ್ರತ್ಯೇಕ ಧರ್ಮದ ಸಮಾರಂಭದಲ್ಲಿ 500 ಸ್ವಾಮೀಜಿಗಳಿಂದ ಸಿಎಂಗೆ ಸನ್ಮಾನ ಮಾಡುವ ಹೇಳಿಕೆ ಕೊಟ್ಟಿದ್ದಾರೆ. ಸಿದ್ದರಾಮಯ್ಯನವರು ಹೋಗುವ ಸಾಧ್ಯತೆ ಇದೆ. ಈ ಮೊದಲು ಸಿಎಂ ಸನ್ಮಾನದಿಂದಲೇ ಅಪಮಾನಕ್ಕೀಡಾಗಿದ್ದಾರೆ. ಮತ್ತೊಂದು ಬಾರಿ ಸನ್ಮಾನ ಸ್ವೀಕರಿಸಿದರೆ ಮುಂದಿನ ದಿನಗಳಲ್ಲಿ ದೊಡ್ಡ ಅಪಮಾನ ಅನುಭವಿಸುತ್ತೀರಿ ಎಂದು ಅನಿಸುತ್ತಿದೆ. ಪ್ರಸ್ತುತ ರಾಜಕಾರಣ ನೋಡಿದರೆ ಡಿ.ಕೆ. ಶಿವಕುಮಾರ್ ಸೇರಿ ಪಕ್ಷಗಳಲ್ಲೇ ಅನೇಕ ವಿಘಟನೆಗಳು ನಡೆಯುತ್ತಿವೆ. ಇದರಿಂದ ಸಿಎಂ ಕೈ ಸುಟ್ಟುಕೊಳ್ಳುತ್ತಾರೆ ಅನ್ನೋ ಭಾವನೆ ನಮ್ಮದು ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸರ್ವರನ್ನೂ ಸಮಾನತೆಯಿಂದ ತಗೊಂಡು ಹೋಗುತ್ತಿದ್ದಾರೆ. ಆದರೆ ಇಂತಹ ಕೆಲಸ ಮಾಡಿ ತಪ್ಪು ದಾರಿ ತುಳಿಯಬೇಡಿ. ನಿಮ್ಮ ಕಾರ್ಯವೈಖರಿ ನಮಗೆ ಬಹಳ ಇಷ್ಟವಾಗಿದೆ. ಎಲ್ಲರನ್ನು ಒಂದುಗೂಡಿಸುವ ಕೆಲಸ ಮಾಡಿ, ಆ ಸಮಾರಂಭದಲ್ಲಿ ಹೋಗಿನೂ ಕೂಡ ಒಗ್ಗಟ್ಟಿನ ಪ್ರದರ್ಶನ ಮಾಡಿ ಬನ್ನಿ ಎಂದು ಸಲಹೆ ನೀಡಿದರು.ಹೀಗೇನೆ ಎಂದು ಹೇಳಲಿಕ್ಕೆ ಸಾಧ್ಯವಿಲ್ಲ, ಸಿಎಂ ಬದಲಾವಣೆಗೆ ಇದೂ ಸಹ ಒಂದು ಕಾರಣವಾದರೂ ಆಗಬಹುದು. ಹೇಳೋದಕ್ಕೆ ಆಗಲ್ಲ. ರಾಜಕಾರಣಿಗಳಂತೂ ನಾವಲ್ಲ, ಧರ್ಮ ರಕ್ಷಣೆ ಮಾಡಿದರೆ ಅವರನ್ನು ಧರ್ಮ ರಕ್ಷಣೆ ಮಾಡುತ್ತದೆ. ಕಾಲ ಬದಲಾಗಬಹುದು ಎನ್ನುವ ಭಾವನೆ ನಮ್ಮದು, ಅದನ್ನು ತಿಳಿದ ನಂತರ ನೋಡಬಹುದು. ಅವರೆಲ್ಲ ಸಿಎಂ ಕರೆಯಿಸಿ ಸಿಎಂ ಬೆಂಬಲ ಇದೆ ಎಂದು ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದ ಸಿಎಂ ನಮ್ಮ ಜೊತೆಗಿದ್ದಾರೆ, ಪ್ರತ್ಯೇಕ ಧರ್ಮ ಕೊಡಿ ಎಂದು ಹೇಳಿಕೆ ಕೊಡಬೇಕೆಂದು ಬಯಸುತ್ತಿದ್ದಾರೆ. ಆದ್ದರಿಂದ ಸಿಎಂ ಸಿದ್ದರಾಮಯ್ಯ ಆ ಕಾರ್ಯಕ್ರಮಕ್ಕೆ ಹೋಗದಿರೋದು ಒಳ್ಳೆಯದು ಎಂದು ಸ್ವಾಮೀಜಿ ತಿಳಿಸಿದರು.