ರಾಜಕೀಯದಲ್ಲಿ ತೃತೀಯ ಶಕ್ತಿ ಅಗತ್ಯವಿದೆ: ಇಬ್ರಾಹಿಂ

| Published : Aug 30 2024, 01:11 AM IST

ರಾಜಕೀಯದಲ್ಲಿ ತೃತೀಯ ಶಕ್ತಿ ಅಗತ್ಯವಿದೆ: ಇಬ್ರಾಹಿಂ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಪರ್ಯಾಯ ರಾಜಕೀಯ ತೃತೀಯ ಶಕ್ತಿಯ ಅಗತ್ಯವಿದ್ದು, ಈ ಬಗ್ಗೆ ವಿವಿಧ ಹಲವು ಮುಖಂಡರು ಹಾಗೂ ವಿಚಾರವಂತ ಸ್ವಾಮೀಜಿಗಳೊಂದಿಗೆ ಈಗಾಗಲೇ ಚರ್ಚೆ ನಡೆಸಿದ್ದೇನೆ ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಪರ್ಯಾಯ ರಾಜಕೀಯ ತೃತೀಯ ಶಕ್ತಿಯ ಅಗತ್ಯವಿದ್ದು, ಈ ಬಗ್ಗೆ ವಿವಿಧ ಹಲವು ಮುಖಂಡರು ಹಾಗೂ ವಿಚಾರವಂತ ಸ್ವಾಮೀಜಿಗಳೊಂದಿಗೆ ಈಗಾಗಲೇ ಚರ್ಚೆ ನಡೆಸಿದ್ದೇನೆ ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹೇಳಿದರು.

ಜನತಾಪಕ್ಷದಿಂದ ಗುರುವಾರ ನಗರದ ಗಾಂಭವನದಲ್ಲಿ ಆಯೋಜಿಸಿದ್ದ ‘ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ 98ನೇ ಜನ್ಮದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜಕೀಯದಲ್ಲಿ ಮೂರನೇ ಶಕ್ತಿ ಇದ್ದರೆ ಮಾತ್ರ ದಲಿತರಿಗೆ, ಅಲ್ಪಸಂಖ್ಯಾತರಿಗೆ ಗೌರವ ಸಿಗಲಿದೆ ಎಂದು ಮಾಜಿ ಪ್ರಧಾನಿ ವಿ.ಪಿ.ಸಿಂಗ್‌ ಅವರು ಹೇಳುತ್ತಿದ್ದರು. ಇದೀಗ ರಾಜ್ಯದಲ್ಲಿ ಮುಸ್ಲಿಂ ಬೀದಿಗಳಿಗೆ ಕಾಂಗ್ರೆಸ್‌ ಪಕ್ಷದವರು ಮತಯಾಚನೆ ಮಾಡುವುದಕ್ಕೆ ಹೋಗುತ್ತಿಲ್ಲ. ಮತದಾರರ ತಮ್ಮ ಶಕ್ತಿ ತೋರಿಸುವುದಕ್ಕೆ ತೃತೀಯ ರಂಗದ ಅವಶ್ಯಕತೆ ಇದೆ ಎಂದರು.

ರಾಜ್ಯದಲ್ಲಿ ತೃತೀಯ ರಂಗ ಸ್ಥಾಪನೆಗೆ ಈಗಾಗಲೇ ರೈತ ಸಂಘದ ಮುಖಂಡರು, ರಾಜ್ಯದ ವಿಚಾರವಂತ ಸ್ವಾಮೀಜಿಗಳು, ಧರ್ಮಸ್ಥಳದ ವಿರೇಂದ್ರ ಹೆಗಡೆ ಸೇರಿದಂತೆ ಹಲವರೊಂದಿಗೆ ಚರ್ಚೆ ನಡೆಸಿದ್ದೇನೆ. ದಕ್ಷಿಣ ಭಾರತ ಎಲ್ಲಾ ರಾಜ್ಯದಲ್ಲಿಯೂ ಪ್ರಾದೇಶಿಕ ಪಕ್ಷಗಳೇ ಗೆದ್ದಿವೆ. ಭ್ರಷ್ಟಾಚಾರ ನಿಗ್ರಹ ಮಾಡುವುದಕ್ಕೂ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ತರುವುದೇ ಪರಿಹಾರವಾಗಿದೆ ಎಂದು ಹೇಳಿದರು.

ಈಗಿನ ರಾಜಕಾರಣಿಗಳಲ್ಲಿ ಮಲಗಿದಾಗಲೂ, ಎದ್ದಾಗಲೂ ಸೇಡಿನ ಚಿಂತೆ ಮಾಡುತ್ತಾರೆ. ಆದರೆ, ರಾಮಕೃಷ್ಣ ಹೆಗಡೆ ಅವರು ಸೇಡಿನ ರಾಜಕಾರಣ ಮಾಡುವ ಮನೋಭಾವವಿರಲಿಲ್ಲ. ಜಾತಿ ರಾಜಕೀಯ ಮಾಡಲಿಲ್ಲ. ಹೆಗಡೆ ಅವರು, ತಳ ಹಂತದ ಕಾರ್ಯಕರ್ತರನ್ನು ಗುರುತಿಸಿ, ರಾಜಕೀಯವಾಗಿ ಬೆಳೆಸುತ್ತಿದ್ದರು. ಆದರೆ, ಪ್ರಸ್ತುತ ಹಣವೇ ಮೊದಲಾಗಿದೆ. ಹಣವಿದ್ದವರಿಗೆ ಟಿಕೆಟ್ ಸಿಗುತ್ತದೆ. ಜನರು ಕೂಡ ಸಾಕಷ್ಟು ಬದಲಾಗಿದ್ದು, ಅವರೇ ಬಾಯಿ ಬಿಟ್ಟು ಹಣ ಹೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮುಂದಿನ ಪೀಳಿಗೆಗೆ ಮೌಲ್ಯಯುತ ರಾಜಕಾರಣದ ವಾತಾವರಣ ನಿರ್ಮಿಸುವ ಕೆಲಸವಾಗಬೇಕಿದೆ. ಜಾತಿ ಮತ್ತು ಭ್ರಷ್ಟಾಚಾರ ರಹಿತ ರಾಜಕೀಯದ ಬಗ್ಗೆ ಯುವ ಸಮೂಹಕ್ಕೆ ಅರಿವು ಮೂಡಿಸಬೇಕಿದೆ ಎಂದರು.

ಸಿ.ಎಂ.ಇಬ್ರಾಹಿಂ, ಬಿ.ಸೋಮಶೇಖರ್, ಲೀಲಾದೇವಿ ಆರ್ ಪ್ರಸಾದ್ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಎಂ.ಪಿ.ನಾಡಗೌಡ ಅವರಿಗೆ ಮೌಲ್ಯಾಧಾರಿತ ಕಾಯಕ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೈ ಪ್ರಕಾಶ್ ಬಂಧು, ಮಾಜಿ ಶಾಸಕ ಪಿ.ಎಸ್‌.ಪ್ರಕಾಶ್‌, ಮುಖಂಡರಾದ ಆರ್‌.ವಿ.ಹರೀಶ್‌, ಜನತಾ ಪಕ್ಷದ ರಾಜ್ಯ ಅಧ್ಯಕ್ಷ ಚಂದ್ರಕಾಂತ್‌ ಶಿವಪ್ಪ ಸಾಹುಕಾರ್‌ ಆಲೂರು ಮತ್ತಿತರರಿದ್ದರು.