ಕನ್ನಡಪ್ರಭ ವಾರ್ತೆ ಬಾಗಲಕೋಟೆ:ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು. ಸೋಮವಾರ ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಗಲಕೋಟೆ ಕ್ಷೇತ್ರದಲ್ಲಿ ಚರಂತಿಮಠ ವಿರುದ್ಧ ಒಂದೇ ಒಂದು ಶಬ್ಧ ಕೇಳಿ ಬರುತ್ತಿಲ್ಲ. ಎಲ್ಲರೂ ಒಗ್ಗಟ್ಟಾಗಿ ಹೋಗುತ್ತಿದ್ದಾರೆ. ಹೀಗಾಗಿ ವೀರಣ್ಣ ಚರಂತಿಮಠ ಗೆಲುವು ನಿಶ್ಚಿತ ಎಂದರು.
ದಾವಣಗೆರೆಯಲ್ಲೂ ಬಿಜೆಪಿ ಅಭ್ಯರ್ಥಿ ಪರ ಮತದಾರರ ಒಲವಿದ್ದು, ಶ್ರೀನಿವಾಸ ಟಿ.ದಾಸಕರಿಯಪ್ಪ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ, ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿದ ಯಡಿಯೂರಪ್ಪ, ವಿಶ್ವಾಸದ್ರೋಹಕ್ಕೆ ಮತ್ತೊಂದು ಹೆಸರು ಸಿದ್ದರಾಮಯ್ಯನವರು. ಅವರ ಜನಾಂಗದ ವ್ಯಕ್ತಿ ಇರುವುದರಿಂದ ಇಲ್ಲಿಗೆ ನಾಲ್ಕೈದು ಬಾರಿ ಬಂದು ಪ್ರಚಾರ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರಿಗೆ ಸೋಲಿನ ಭೀತಿ ಕಾಡುತ್ತಿದೆ. ಹೀಗಾಗಿ, ಸಿಎಂ ಮತ್ತೆ, ಮತ್ತೆ ಬಾಗಲಕೋಟೆಗೆ ಬರುತ್ತಿದ್ದಾರೆ ಎಂದು ಹೇಳಿದರು.ಬಳಿಕ, ನಗರದಲ್ಲಿ ಆಯೋಜಿಸಿದ್ದ ಸಕಲ ಸಮುದಾಯದ ಮುಖಂಡರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ಮತಯಾಚಿಸಿ ಅವರು ಮಾತನಾಡಿದರು. ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆ ಬಳಿಕ ಸಿಎಂ ಸಿದ್ದರಾಮಯ್ಯನವರ ರಾಜಕೀಯ ಅಬ್ಬರ ಅಂತ್ಯವಾಗಲಿದೆ. ಹಣ, ಹೆಂಡ, ತೋಳ್ಬಲ, ಅಧಿಕಾರ ಬಲ, ಜಾತಿಯ ವಿಷ ಬೀಜ ಬಿತ್ತಿ ಚುನಾವಣೆಯಲ್ಲಿ ಗೆಲ್ಲಬೇಕೆನ್ನುವ ಭ್ರಮೆಯಲ್ಲಿ ಮುಖ್ಯಮಂತ್ರಿಗಳಿದ್ದಾರೆ. ಆದರೆ, ಮತದಾರರು ಜಾಗೃತರಾಗಿದ್ದಾರೆ ಎಂದರು.
ದೇವರು ಶಕ್ತಿ ಕೊಟ್ಟರೆ, ನಾಲ್ಕೈದು ವರ್ಷ ರಾಜ್ಯದ ಉದ್ದಗಲಕ್ಕೂ ಓಡಾಡುತ್ತೇನೆ. 2028ರ ವಿಧಾನಸಭಾ ಚುನಾವಣೆಯಲ್ಲಿ ನಾವು ಬಹುಮತ ಪಡೆದು ಸರ್ಕಾರ ರಚಿಸುತ್ತೇವೆ. ಇದು ರಾಮ ನಡೆದ, ಕೃಷ್ಣ ಬೋಧಿಸಿದ ಹಾಗೂ ಈಶ್ವರನ ತಪೋಭೂಮಿ. ವಿದೇಶಿಗರು ಸಹ ಕೊಂಡಾಡುವಂತಹ ಸಂಸ್ಕೃತಿ ಪರಂಪರೆ ನಮ್ಮದಾಗಿದೆ. ಇದನ್ನು ಉಳಿಸಿ, ಬೆಳೆಸುವುದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು. ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ 15 ಸಾವಿರ ಮತಗಳ ಅಂತರದಲ್ಲಿ ಗೆಲ್ಲೋದರ ಬಗ್ಗೆ ಯಾವುದೇ ಸಂಶಯ ಇಲ್ಲ. ಬಳಿಕ, ಲಕ್ಷ ಜನ ಕಾರ್ಯಕರ್ತರೊಂದಿಗೆ ವೀರಣ್ಣ ಚರಂತಿಮಠ ಅವರ ಗೆಲುವಿನ ವಿಜಯೋತ್ಸವ ಆಚರಿಸೋಣ ಎಂದು ಹೇಳಿದರು.