ಸಾರಾಂಶ
ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವುದರ ಹಿಂದೆ ಷಡ್ಯಂತ್ರ
ಎರಡು ಸಮಾಜಗಳ ನಡುವಿನ ಸೌಹಾರ್ದ ಕದಡುವ ಹುನ್ನಾರವಾಲ್ಮೀಕಿ ಸಮಾಜದ ಶಾಸಕರು, ಸಂಸದರು ಧ್ವನಿ ಎತ್ತಲಿ
ಕನ್ನಡಪ್ರಭ ವಾರ್ತೆ ಬಳ್ಳಾರಿಕುರುಬ ಸಮುದಾಯದವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಹುನ್ನಾರ ನಡೆಸಿದ್ದು, ಇದರಿಂದ ಎರಡು ಸಮುದಾಯಗಳ ಸೌಹಾರ್ದತೆಗೆ ಧಕ್ಕೆ ತರುವ ಕೆಲಸವನ್ನು ಅವರು ಮಾಡಿದ್ದಾರೆ ಎಂದು ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟದ ರಾಜ್ಯಾಧ್ಯಕ್ಷ ತಿಮ್ಮಪ್ಪ ಜೋಳದರಾಶಿ ಆಪಾದಿಸಿದ್ದಾರೆ.
ಇಲ್ಲಿನ ಗಾಂಧಿನಗರದ ವಾಲ್ಮೀಕಿ ನಾಯಕರ ಒಕ್ಕೂಟದ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಪಂಗಡಕ್ಕೆ ಕುರುಬ ಸಮುದಾಯವನ್ನು ಸೇರಿಸುವ ಷಡ್ಯಂತ್ರ್ಯವನ್ನು ಸಿದ್ಧರಾಮಯ್ಯನವರು ಮಾಡಿದ್ದಾರೆ.ಈ ಹಿಂದೆ ನಾವು ಅಹಿಂದ ನಾಯಕ ಎಂದುಕೊಂಡಿದ್ದೆವು. ಆದರೆ, ಅಹಿಂದ ಸಮುದಾಯಗಳ ಹಿತ ಕಾಯುವ ಬದಲು ಕುರುಬ ಸಮಾಜದ ನಾಯಕರಾಗಿದ್ದಾರೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ತಳಸ್ತರದಲ್ಲಿರುವ ವಾಲ್ಮೀಕಿ ಸಮಾಜದ ಅಸ್ಥಿತ್ವ ನಾಶ ಮಾಡಲು ಸಿಎಂ ಸಿದ್ಧರಾಮಯ್ಯನವರು ಮುಂದಾಗಿದ್ದಾರೆ.
ಈ ಬಗ್ಗೆ ವಾಲ್ಮೀಕಿ ಸಮಾಜದ ರಾಜಕೀಯ ಮೀಸಲಾತಿಯನ್ನು ಪಡೆದು ಚುನಾವಣೆಯಲ್ಲಿ ಗೆದ್ದು ಶಾಸಕರಾಗಿರುವ ಬಳ್ಳಾರಿ ಜಿಲ್ಲೆಯ ಶಾಸಕರು ಸೇರಿದಂತೆ ರಾಜ್ಯದ ಯಾವುದೇ ಶಾಸಕರು ಸಹ ಕುರುಬ ಸಮುದಾಯವನ್ನು ಎಸ್ಟಿ ಸೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಧ್ವನಿ ಎತ್ತದಿರುವುದು ವಿಪರ್ಯಾಸ. ಮಾಜಿ ಸಚಿವರು ಹಾಗೂ ವಾಲ್ಮೀಕಿ ಸಮಾಜದ ಮಾಸ್ ಲೀಡರ್ ಎನಿಸಿಕೊಂಡಿರುವ ಬಿ.ಶ್ರೀರಾಮುಲು, ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಸಂಸದ ತುಕಾರಾಂ ಸೇರಿದಂತೆ ಯಾರೊಬ್ಬರು ಸಹ ಎಸ್ಟಿ ಸೇರ್ಪಡೆ ವಿಚಾರದಲ್ಲಿ ಮಾತನಾಡಿಲ್ಲ. ಎಲ್ಲರೂ ತಮ್ಮ ರಾಜಕೀಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದಾದರೆ ವಾಲ್ಮೀಕಿ ಸಮುದಾಯದ ಸಮಸ್ಯೆಗಳಿಗೆ ಧ್ವನಿ ಎತ್ತುವವರು ಯಾರು? ಎಂದು ಪ್ರಶ್ನಿಸಿದರಲ್ಲದೆ, ಬರುವ ದಿನಗಳಲ್ಲಿ ಶಾಸಕರು, ಸಂಸದರ ಮನೆಗಳ ಮುಂದೆಯೇ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ಸಮಾಜ ವಿರೋಧಿ ಧೋರಣೆಯ ವಿರುದ್ಧ ಚಳವಳಿ ಕಟ್ಟುತ್ತೇವೆ.ರಾಜ್ಯಾದ್ಯಂತ ಸೆ.22ರಿಂದ ಜಾತಿ ಸಮೀಕ್ಷೆ ನಡೆಯುತ್ತಿದ್ದು, ಧರ್ಮ ಕಾಲಂ ನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ವಾಲ್ಮೀಕಿ ಎಂದು ನಮೂದಿಸಬೇಕು. ಈ ಬಗ್ಗೆ ರಾಜ್ಯಾದ್ಯಂತ ಸಂಚರಿಸಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು. ಒಕ್ಕೂಟದ ಜಿಲ್ಲಾಧ್ಯಕ್ಷ ಎನ್. ಮೋಕಾ ಮುದಿಮಲ್ಲಯ್ಯ, ಹಿರಿಯ ವಕೀಲ ಜಯರಾಮ್, ಒಕ್ಕೂಟದ ರಾಜ್ಯ ಪ್ರಮುಖರಾದ ಜನಾರ್ದನ ನಾಯಕ, ಎನ್.ಸತ್ಯಪ್ಪ, ಮೆಡಿಕಲ್ ಮಲ್ಲಿಕಾರ್ಜುನ, ದುರುಗಪ್ಪ, ಕಾಯಿಪಲ್ಯೆ ಬಸವರಾಜ್, ಬಿ.ಮಲ್ಲಿಕಾರ್ಜುನ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.