ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸಿಎಂ ಸಿದ್ದರಾಮಯ್ಯ ಈ ಬಾರಿ 4.48 ಲಕ್ಷ ಕೋಟಿ ರು. ಮೊತ್ತದ ರಾಜ್ಯ ಬಜೆಟ್ ಮಂಡಿಸುವ ಮೂಲಕ 17ನೇ ಬಾರಿ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೆ ಬಜೆಟ್‌ನಲ್ಲಿ ಎಲ್ಲಾ ವರ್ಗದವರಿಗೆ ಕೊರತೆಯಾಗದಂತೆ ಪಂಚ ಗ್ಯಾರಂಟಿಗಳಿಗೆ ಅನುದಾನ ನೀಡಿ, ಭರವಸೆಯಂತೆ ಮಾತಿಗೆ ತಪ್ಪಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಹೇಳಿದರು.ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದ ಹಲವು ರಾಜ್ಯಗಳು ಗ್ಯಾರಂಟಿ ಘೋಷಣೆ ಮಾಡಿದ್ದವು. ಆದರೆ ಒಂದೇ ವರ್ಷದಲ್ಲೇ ಅದನ್ನು ನಿಲ್ಲಿಸಿದ್ದಾರೆ. ಆದರೆ, ಸಿದ್ಧರಾಮಯ್ಯ ಸರ್ಕಾರ ಅದನ್ನು ಯಶಸ್ವಿಯಾಗಿ ಪೂರೈಸಿದೆ. ಪ್ರತಿವರ್ಷಕ್ಕೆ 50 ಸಾವಿರ ಕೋಟಿ ರು. ವೆಚ್ಚ ಮಾಡುತ್ತಿದೆ. ಅಲ್ಲದೆ ಬೇರೆ ಬೇರೆ ಇಲಾಖೆಗೆ ಸಾಕಷ್ಟು ಅನುದಾನವನ್ನು ಕೂಡ ನೀಡಿದೆ. ವಿಶೇಷವೆಂದರೆ ಈ ಬಜೆಟ್‌ನಲ್ಲಿ 54 ಸಾವಿರ ಹುದ್ದೆ ಭರ್ತಿಮಾಡುವ ಪ್ರಸ್ತಾಪವಿದೆ. ಅಲ್ಲದೆ ಶಿಕ್ಷಣ ಕ್ಷೇತ್ರಕ್ಕೆ ಬಂಪರ್ ಕೊಡುಗೆ ನೀಡಿದ್ದು, 800 ಕೆಪಿಎಸ್ ಶಾಲೆಗಳಿಗೆ ಅನುಮೋದನೆ ನೀಡಲಾಗಿದೆ. ಅದಕ್ಕಾಗಿ 3900 ಕೋಟಿ ರು. ಹಣ ನಿಗದಿಪಡಿಸಲಾಗಿದ್ದು, ಮುಂದಿನ ಏಪ್ರಿಲ್ ತಿಂಗಳಿನಲ್ಲಿ ರಾಜ್ಯಾದ್ಯಂತ ನಿರ್ಮಾಣವಾಗುವ ಕೆಪಿಎಸ್ ಶಾಲೆಗಳಿಗೆ ಮುಖ್ಯಮಂತ್ರಿಗಳೇ ಶಿವಮೊಗ್ಗದಿಂದ ಚಾಲನೆ ನೀಡಲಿದ್ದಾರೆ ಎಂದರು.
ದ್ವಿಭಾಷಾ ಪದ್ಧತಿಯಲ್ಲಿ ಶಿಕ್ಷಣಕ್ಕೆ ಒತ್ತು ನೀಡಿದ್ದು, ಇಂಗ್ಲೀಷ್ ಭಾಷಾ ತರಬೇತಿಗಾಗಿ 24 ಕೋಟಿ ಕಾಯ್ದಿರಿಸಲಾಗಿದೆ. 15 ಸಾವಿರ ಶಿಕ್ಷಕರ ಭರ್ತಿಗೆ ತೀರ್ಮಾನ ಕೈಗೊಳ್ಳಲಾಗಿದ್ದು, ಶಾಲಾ ಕಟ್ಟಡಗಳ ದುರಸ್ತಿಗೆ 800 ಕೋಟಿ ರು. ಮೀಸಲಿಟ್ಟಿದೆ ಎಂದರು. ಕಾಂಗ್ರೆಸ್ ಸರ್ಕಾರ ಸಾಲವನ್ನು 8 ಲಕ್ಷ ಕೋಟಿ ರು.ಗಳಿಗೆ ಏರಿಸಿದೆ ಎಂದು ಟೀಕೆ ಮಾಡುವ ಬಿಜೆಪಿ ನಾಯಕರು ಬೊಮ್ಮಾಯಿ ಅಧಿಕಾರ ಬಿಟ್ಟು ಹೋಗುವಾಗ 5.35 ಲಕ್ಷ ಕೋಟಿ ರು. ಸಾಲ ಮಾಡಿದ್ದರು ಎಂಬುದನ್ನು ಮರೆಮಾಚಿದ್ದಾರೆ. ಸಾಲದ ಬಗ್ಗೆ ಮಾತನಾಡುವ ನೈತಿಕತೆಯೇ ಬಿಜೆಪಿಗರಿಗೆ ಇಲ್ಲ. ಬೊಮ್ಮಾಯಿ ಸರ್ಕಾರ ಇಳಿಯುವ ಸಂದರ್ಭದಲ್ಲಿ ರಾಜ್ಯದಲ್ಲಿ ಕೆಲಸ ಮಾಡಿದ ಗುತ್ತಿಗೆದಾರರಿಗೆ 40 ಸಾವಿರ ಕೋಟಿ ರು. ಬಾಕಿ ಇಟ್ಟಿದ್ದರು. ಕೇಂದ್ರದಲ್ಲಿ ಮನ್‌ಮೋಹನ್ ಸಿಂಗ್ ಅಧಿಕಾರದಲ್ಲಿದ್ದಾಗ ಕೇಂದ್ರ ಸರ್ಕಾರಕ್ಕೆ ಕೇವಲ 53 ಲಕ್ಷ ಕೋಟಿ ಸಾಲವಿತ್ತು. ಈಗ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ 197 ಲಕ್ಷ ಕೋಟಿ ರು. ದೇಶಕ್ಕೆ ಸಾಲವಿದೆ. ಈ ಬಗ್ಗೆ ಚಕಾರವೆತ್ತುತ್ತಿಲ್ಲ ಎಂದು ಟೀಕಿಸಿದರು.ವಿಕ್ಟೋರಿಯಾ ಆಸ್ಪತ್ರೆಗೆ ಶಾಂತವೇರಿ ಗೋಪಾಲಗೌಡರ ಹೆಸರನ್ನು ಇಡುವುದರ ಮೂಲಕ ಸಿದ್ಧರಾಮಯ್ಯನವರು ಸಾಮಾಜಿಕ ಚಳವಳಿಯ ಬದ್ಧತೆಯನ್ನು ಎತ್ತಿಹಿಡಿದಿದ್ದಾರೆ. ಬಡವರಿಗೆ, ರೈತರಿಗೆ ೩೦,೦೦೦ಕೋಟಿ ಬಡ್ಡಿರಹಿತ ಸಾಲಕ್ಕೆ ಮೀಸಲಿಡಲಾಗಿದೆ. ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡಿಲ್ಲ. ರೈತರ ಬೆಳೆಗೆ ಒಳ್ಳೆಯ ಬೆಲೆಯನ್ನೂ ನೀಡಿಲ್ಲ. ಅಡುಗೆ ಅನಿಲಕ್ಕೆ ಇಂದಿನಿಂದ ಕೇಂದ್ರ 60 ರು. ಜಾಸ್ತಿ ಮಾಡಿದೆ. ಜಿಎಸ್‌ಟಿ ದರವನ್ನು ಇಳಿಸಿ ಅದರಿಂದಲೂ ರಾಜ್ಯ ಸರ್ಕಾರಕ್ಕೆ 10 ಸಾವಿರ ಕೋಟಿ ರು. ನಷ್ಟವಾಗಿದೆ. ಒಟ್ಟಾರೆ ರಾಜ್ಯದ ಆದಾಯದಲ್ಲಿ ಜಿಎಸ್‌ಟಿಯಿಂದ ಶೇ.53 ರಷ್ಟು ಬರಬೇಕಾಗಿದ್ದು, 2025-26 ನೇ ಸಾಲಿನ ಆ ಪ್ರಮಾಣ ಕೂಡ ಕಡಿಮೆಯಾಗಿದ್ದು, ಸುಮಾರು 15,0000 ಕೋಟಿ ರಾಜ್ಯ ಸರ್ಕಾರಕ್ಕೆ ನಷ್ಟವಾಗಿದೆ ಎಂದರು.
ಪ್ರಮುಖರಾದ ಕಲಗೋಡು ರತ್ನಾಕರ್, ಹಾಲಪ್ಪ, ಜಿ.ಡಿ.ಮಂಜುನಾಥ್, ಶಿವಕುಮಾರ್, ಶಿವಣ್ಣ, ಜಿ.ಪದ್ಮನಾಬ್, ಸೈಯದ್ ವಾಹಿದ್ ಅಡ್ಡು, ಶಿ.ಜು.ಪಾಷಾ ಇದ್ದರು.