ದೇವನಹಳ್ಳಿ ರೈತರ ಸಮಸ್ಯೆ ಚರ್ಚೆಗೆ ಜು.4ರಂದು ಸಿಎಂ ಸಭೆ

| Published : Jun 28 2025, 12:21 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಪ್ರಕಾಶ್‌ ರೈ ಸೇರಿ 10ಕ್ಕೂ ಹೆಚ್ಚಿನ ರೈತ ಮುಖಂಡರನ್ನು ಮಾತುಕತೆಗೆ ಕರೆದು ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಉದ್ದೇಶಿತ ಹೈಟೆಕ್‌ ಡಿಫೆನ್ಸ್‌ ಮತ್ತು ಏರೋಸ್ಪೇಸ್‌ ಪಾರ್ಕ್‌ ಯೋಜನೆ ಸಂಬಂಧ ಭೂಸ್ವಾಧೀನ ಕುರಿತು ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ ರೈತರೊಂದಿಗೆ ಜು. 4ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ.

ಯೋಜನೆಗೆ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ 1,777 ಎಕರೆ ಭೂಮಿ ಸ್ವಾಧೀನಕ್ಕೆ ನಿರ್ಧರಿಸಲಾಗಿತ್ತು. ಆದರೆ ಭೂಸ್ವಾಧೀನ ಪ್ರಕ್ರಿಯೆಗೆ ರೈತರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, 13 ಗ್ರಾಮಗಳ ಪೈಕಿ ಚನ್ನರಾಯಪಟ್ಟಣ, ಮಟ್ಟಿಬಾರ್ಲು ಮತ್ತು ಶ್ರೋತ್ರೀಯ ತೆಲ್ಲೋಹಳ್ಳಿ ಗ್ರಾಮಗಳ 495 ಎಕರೆ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವುದಾಗಿ ಸರ್ಕಾರ ಘೋಷಿಸಿತ್ತು. ಆದರೂ, ರೈತರು ಪ್ರತಿಭಟನೆ ಹಿಂಪಡೆಯದೇ ಸಂಪೂರ್ಣ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಆಗ್ರಹಿಸಿ ಪ್ರತಿಭಟನೆ ಮುಂದುವರಿಸಿದ್ದರು.

ಅದರ ಭಾಗವಾಗಿ ಗುರುವಾರ ಚಲನಚಿತ್ರ ನಟ ಪ್ರಕಾಶ್‌ ರೈ ನೇತೃತ್ವದಲ್ಲಿ ರೈತರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಪ್ರಕಾಶ್‌ ರೈ ಸೇರಿ 10ಕ್ಕೂ ಹೆಚ್ಚಿನ ರೈತ ಮುಖಂಡರನ್ನು ಮಾತುಕತೆಗೆ ಕರೆದು ಸಭೆ ನಡೆಸಿದರು.

ಈ ವೇಳೆ, ಕಳೆದ ಮೂರು ವರ್ಷಗಳಿಂದ ಭೂಸ್ವಾಧೀನ ಪ್ರಕ್ರಿಯೆಗೆ ವಿರೋಧಿಸಿ ರೈತರು ಪ್ರತಿಭಟಿಸುತ್ತಿದ್ದಾರೆ. ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಆಗ್ರಹಿಸಿದರು. ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರೈತರ ಬೇಡಿಕೆಗಳ ಕುರಿತು ಸುಧೀರ್ಘವಾಗಿ ಚರ್ಚೆ ನಡೆಸಬೇಕಿದೆ. ಈಗಾಗಲೇ ಮೂರು ಗ್ರಾಮಗಳ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಸೂಚಿಸಲಾಗಿದೆ. ಆದರೂ, ರೈತರ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಲು ಜು. 4ರಂದು ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಮುಖ್ಯಮಂತ್ರಿ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕಾಶ್ ರೈ, ಭೂಸ್ವಾಧೀನ ಪ್ರಕ್ರಿಯೆ ಮಾಡಿಕೊಂಡರೆ 13 ಗ್ರಾಮಗಳ ಜನ ಎಲ್ಲಿಗೆ ಹೋಗಬೇಕು. ಅಲ್ಲಿ ನಿರ್ಮಾಣವಾಗುವ ಕೈಗಾರಿಕೆಗಳಿಗೆ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಬೇಕೇ. ಸರ್ಕಾರವೇ ಆಗಲಿ, ಯಾವುದೇ ದೊಣ್ಣೆ ನಾಯಕನೇ ಆಗಲಿ ಅವರು ರೈತರ ಹಿತ ಕಾಯಬೇಕು. ರೈತರಿಗೆ ಸರ್ಕಾರ ಅಥವಾ ಉದ್ಯಮಿಗಳ ದುಡ್ಡು ಬೇಡ. ಅಭಿವೃದ್ಧಿ ಹೆಸರಿನಲ್ಲಿ ರೈತರನ್ನು ಹಾಳು ಮಾಡಬಾರದು. ಜು. 4ರಂದು ಕರೆದಿರುವ ಸಭೆಯಲ್ಲಿ ಯಾವ ನಿರ್ಧಾರವಾಗುತ್ತದೆ ನೋಡೋಣ ಎಂದರು.