ವಕ್ಫ್‌ ವಿರುದ್ಧ ಜನರು ದಂಗೆ ಏಳುತ್ತಿದ್ದರೂಪಿಟೀಲು ನುಡಿಸುತ್ತಿರುವ ಸಿಎಂ : ಅಶೋಕ್‌

| Published : Nov 23 2024, 01:18 AM IST / Updated: Nov 23 2024, 11:30 AM IST

ಸಾರಾಂಶ

ವಕ್ಫ್‌ ಬೋರ್ಡ್‌ನಿಂದಾಗಿ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಬಿಜೆಪಿ ಆರೋಪಿ ಪ್ರತಿಭಟನೆ ನಡೆಸಿದೆ.

  ಬೆಂಗಳೂರು : ವಕ್ಫ್ ಮಂಡಳಿ ರೈತರ ಜಮೀನು ಕಬಳಿಸುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಕೇಂದ್ರ ಕೃಷಿ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಶಾಸಕರಾದ ಡಾ। ಸಿ.ಎನ್‌.ಅಶ್ವತ್ಥನಾರಾಯಣ, ಸಿ.ಟಿ.ರವಿ ಮತ್ತಿತರ ಮುಖಂಡರು ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಅಶೋಕ್, ವಕ್ಫ್ ವಿಚಾರವಾಗಿ ಜನರು ದಂಗೆ ಏಳುವ ಪರಿಸ್ಥಿತಿ ಇದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಿಟೀಲು ಬಾರಿಸಿಕೊಂಡು ಕುಳಿತಿದ್ದಾರೆ ಎಂದು ಲೇವಡಿ ಮಾಡಿದರು.

ಸರ್‌ ಎಂ.ವಿಶ್ವೇಶ್ವರಯ್ಯ ಅವರು ಓದಿದ ಶಾಲೆಯ ಆವರಣವನ್ನು ವಕ್ಫ್‌ ಮಂಡಳಿ ಕಬಳಿಸಿದೆ. ಕೇಂದ್ರದಲ್ಲಿದ್ದ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ವಕ್ಫ್‌ ಮಂಡಳಿಗೆ ನ್ಯಾಯಾಂಗದ ಅಧಿಕಾರ ನೀಡಿದೆ. ಇದನ್ನು ಬಳಸಿಕೊಂಡು ವಕ್ಫ್‌ ಮಂಡಳಿ ರೈತರ ಜಮೀನು ನುಂಗುತ್ತಿದೆ. ಕಾಂಗ್ರೆಸ್‌ ಅಧಿಕಾರ ಪಡೆಯುವ ರಾಜ್ಯಗಳಲ್ಲಿ ಮಿನಿ ಪಾಕಿಸ್ತಾನ ನಿರ್ಮಿಸುತ್ತಿದೆ. ವಿಧಾನಸೌಧ, ಲಾಲ್‌ಬಾಗ್‌ ಕೂಡ ನಮ್ಮದು ಎಂದು ಇವರು ಹೇಳುತ್ತಾರೆ ಎಂದು ದೂರಿದರು.

ಬೌರಿಂಗ್‌ ಆಸ್ಪತ್ರೆಯದ್ದು ಎರಡು ಎಕರೆ ಜಮೀನು ಇದ್ದು, ಅದನ್ನು ಕೂಡ ವಕ್ಫ್‌ ಮಂಡಳಿ ಕಬಳಿಕೆ ಮಾಡಿತ್ತು. ನಾನು ಸಚಿವನಾಗಿದ್ದಾಗ ಅದರ ದಾಖಲೆಗಳನ್ನು ತರಿಸಿ ನೋಡಿದರೆ ಯಾವುದೋ ಹಳೆ ದಾಖಲೆಗಳನ್ನು ತಂದರು. ಬಳಿಕ ಹೋರಾಟ ಮಾಡಿ ಆಸ್ತಿ ಉಳಿಸಿದೆ. ವಕ್ಫ್‌ ಮಂಡಳಿ ತಿಮಿಂಗಿಲದಂತೆ ಬಡವರ ಜಮೀನು ನುಂಗುತ್ತಿದೆ. ರೈತರು ಕಂಗಾಲಾಗಿ ತಮ್ಮ ಆಸ್ತಿಗಳ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ಮುಸ್ಲಿಮರಿಗೆ ಎರಡು ಕೊಂಬು ಬಂದಿದೆ. ಸಿದ್ದರಾಮಯ್ಯ ಎಂದರೆ ಅಹಿಂದ ನಾಯಕ ಅಲ್ಲ. ಅವರೀಗ ಮುಸ್ಲಿಮರ ಚಾಂಪಿಯನ್‌ ಆಗಲು ಮುಂದಾಗಿದ್ದಾರೆ. ಲವ್‌ ಜಿಹಾದ್‌, ಲ್ಯಾಂಡ್‌ ಜಿಹಾದ್‌ ಬಳಿಕ ರೇಷನ್‌ ಕಾರ್ಡ್‌ ಜಿಹಾದ್‌ ಆರಂಭಿಸಿದ್ದಾರೆ. 45 ವರ್ಷದಿಂದ ರೇಷನ್‌ ಕಾರ್ಡ್‌ ಹೊಂದಿದ್ದ ವೃದ್ಧೆಯೊಬ್ಬರು ಈಗ ಕಾರ್ಡ್‌ ಕಳೆದುಕೊಂಡಿದ್ದಾರೆ. ಆದರೆ ಸರ್ಕಾರ ಮರಳಿ ಅರ್ಜಿ ಹಾಕಿ ಎನ್ನುತ್ತಿದೆ. ಸರ್ಕಾರ ತಪ್ಪು ಮಾಡಿದರೆ, ಜನರು ಲಂಚ ಕೊಟ್ಟು ರೇಷನ್‌ ಕಾರ್ಡ್‌ ಮಾಡಿಸಿಕೊಳ್ಳಬೇಕಿದೆ ಎಂದು ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು.

ವಕ್ಫ್‌ ಅದಾಲತ್‌: ಶೋಭಾ ಕಿಡಿ

ಶೋಭಾ ಕರಂದ್ಲಾಜೆ ಮಾತನಾಡಿ, ವಕ್ಫ್ ಜಮೀನು ಎಂದು ನಮ್ಮ ಜಮೀನುಗಳನ್ನು ಕಬಳಿಸಿದಾಗ ನಾವು ಕೋರ್ಟ್‌ಗೂ ಹೋಗುವಂತಿಲ್ಲ. ಕೇವಲ ಒಂದು ಧರ್ಮದ ಓಲೈಕೆಗಾಗಿ ಇದೆಲ್ಲ ನಡೆಯುತ್ತಿದೆ. ಕಾನೂನುಬಾಹಿರವಾಗಿ ಕಾಯ್ದೆ ಮಾಡಿ ರೈತರ ಭೂಮಿ ಕಬಳಿಸುತ್ತಿದ್ದಾರೆ. ಮುಸ್ಲಿಮರು ದಾನ ಕೊಟ್ಟಿರುವ ಬಗ್ಗೆ ಲೆಕ್ಕ ಹಾಕಲಿ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪ್ರತಿ ಜಿಲ್ಲೆಗೂ ಹೋಗಿ ವಕ್ಛ್ ಅದಾಲತ್ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.