ಸಿಎಂ ಮಂಡಿಸಿದ್ದು ಐತಿಹಾಸಿಕ ದಾಖಲೆಯ ಬಜೆಟ್‌: ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ

| Published : Feb 18 2024, 01:42 AM IST / Updated: Feb 18 2024, 04:19 PM IST

ಬಸವರಾಜ ರಾಯರಡ್ಡಿ
ಸಿಎಂ ಮಂಡಿಸಿದ್ದು ಐತಿಹಾಸಿಕ ದಾಖಲೆಯ ಬಜೆಟ್‌: ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಗರಿಗೆ ಓದಲು, ತಿಳಿದುಕೊಳ್ಳಲು ತಲೆನೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಬಿಜೆಪಿಯವರ ಆರೋಪಕ್ಕೆ ಚೆನ್ನಾಗಿ ಉತ್ತರ ಕೊಟ್ಟಿದ್ದಾರೆ

ಯಲಬುರ್ಗಾ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೪-೨೫ನೇ ಸಾಲಿನ ಆಯವ್ಯಯ ೧೫ನೇ ಬಜೆಟ್‌ನಲ್ಲಿ ರಾಜ್ಯದ ಜನತೆ ನಿರೀಕ್ಷೆ ಮೀರಿ ಮಂಡನೆ ಮಾಡಿರುವುದು ಐತಿಹಾಸಿಕ ದಾಖಲೆಯ ಬಜೆಟ್ ಎಂದು ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ಪಟ್ಟಣದ ಕಂದಾಯ ಸಭಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ೧೪ ಜನಪರ ಬಜೆಟ್‌ಗಳನ್ನು ಮಂಡಿಸಿರುವ ಆರ್ಥಿಕತೆಯಲ್ಲಿ ಸಾಕಷ್ಟು ಅನುಭವ ಹೊಂದಿರುವ ಅವರು ರಾಜ್ಯದ ಜನರ ಹಿತ ಕಾಪಾಡುವ ಮೂಲಕ ಅಭಿವೃದ್ಧಿಯ ಮುನ್ನೋಟದ ದೂರದೃಷ್ಟಿ ಇಟ್ಟುಕೊಂಡು ಬಜೆಟ್ ಮಂಡಿಸಿದ್ದಾರೆ ಎಂದರು.

ರಾಜ್ಯದ ಜನತೆಗೆ ಕುಡಿವ ನೀರು, ಕೃಷಿ, ನೀರಾವರಿ, ಶಿಕ್ಷಣ, ಕೈಗಾರಿಕೆ, ರಸ್ತೆ, ಭಾಷಾಂತರ ಅಡೆತಡೆ ನಿವಾರಣೆಗೆ ಕಸ್ತೂರಿ ಕನ್ನಡ ಸಾಫ್ಟ್‌ವೇರ್‌, ಮಹಿಳೆಯರ ಸ್ವಸಹಾಯ ಸಂಘಗಳ ಅಭಿವೃದ್ಧಿ, ಕೆರೆಗಳ ನಿರ್ಮಾಣ, ಹೊಸ ಕೆರೆಗಳ ನಿರ್ಮಾಣ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ನೀಡಿದ್ದಾರೆ ಎಂದರು.

ಇಂತಹ ಬಹುಗಾತ್ರದ ಬಜೆಟ್‌ನ್ನು ಯಾವ ಮುಖ್ಯಮಂತ್ರಿಗಳು ನೀಡಿಲ್ಲ. ಅಂತಹ ಜನರ ಮೆಚ್ಚುಗೆಯ ಬಜೆಟ್‌ನ್ನು ಸಿಎಂ ಸಿದ್ದರಾಮಯ್ಯ ನೀಡಿರುವುದನ್ನು ಬಿಜೆಪಿಯವರು ಗಂಧ-ಗಾಳಿ ಗೊತ್ತಿಲ್ಲದೇ ಇದರಲ್ಲಿ ಏನಿಲ್ಲ, ಏನಿಲ್ಲ ಎಂದು ಪ್ರತಿಭಟನೆ ಮಾಡಿದ್ದಾರೆ. ಬಿಜೆಪಿಗರಿಗೆ ಓದಲು, ತಿಳಿದುಕೊಳ್ಳಲು ತಲೆನೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಬಿಜೆಪಿಯವರ ಆರೋಪಕ್ಕೆ ಚೆನ್ನಾಗಿ ಉತ್ತರ ಕೊಟ್ಟಿದ್ದಾರೆ ಎಂದು ಲೇವಡಿ ಮಾಡಿದರು.

ಜಿಲ್ಲೆಯ ಆಸ್ಪತ್ರೆ ಸುಧಾರಣೆಗೆ ₹೧೫೪ ಕೋಟಿ, ಗಂಗಾವತಿಯ ಆಂಜನಾದ್ರಿ ಬೆಟ್ಟ ಸುತ್ತಮುತ್ತ ಪ್ರದೇಶದ ಅಭಿವೃದ್ದಿಗೆ ₹೧೦೦ಕೋಟಿ, ಯಲಬುರ್ಗಾ –ಕುಕನೂರು ೩೮ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ₹೯೭೦ ಕೋಟಿ, ತಳಕಲ್ ಕೌಶಲ್ಯಾಭಿವೃದ್ಧಿ ಕೇಂದ್ರಕ್ಕೆ ಜಿಟಿಸಿ ಮೂಲಕ ₹೧೨೦ ಕೋಟಿ, ಬ್ರಿಜ್ ಕಂ ಬ್ಯಾರೆಜ್ ಹಾಗೂ ಎಪಿಎಂಸಿ ಯಾರ್ಡನಲ್ಲಿ ಕೋಲ್ಡ್ಸ್ಟೋರೆಜ್ ನಿರ್ಮಾಣಕ್ಕೆ ₹೧೦ಕೋಟಿ ನೀಡುವ ಜೊತೆಗೆ ಜಿಲ್ಲೆಗೆ ಭರಪೂರ ಯೋಜನೆಗಳನ್ನು ಸಿಎಂ ನೀಡಿರುವುದಕ್ಕೆ ನನ್ನ ಮೇಲೆ ಇಟ್ಟಿರುವ ಅಪಾರ ಕಾಳಜಿಯೇ ಕಾರಣ ಎಂದು ಅವರಿಗೆ ಕೃತರ್ಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ವೀರನಗೌಡ ಬಳೂಟಗಿ, ಕೆರಿಬಸಪ್ಪ ನಿಡಗುಂದಿ, ಡಾ.ಶಿವನಗೌಡ ದಾನರಡ್ಡಿ, ಶರಣಪ್ಪ ಗಾಂಜಿ, ಸಂಗಮೇಶ ಗುತ್ತಿ, ತಹಸೀಲ್ದಾರ ಬಸವರಾಜ ತೆನ್ನೆಳ್ಳಿ, ತಾಪಂ ಇಒ ಸಂತೋಷ ಬಿರಾದಾರ ಪಾಟೀಲ, ಬೆಟದಪ್ಪ ಮಾಳೆಕೊಪ್ಪ, ಲಿಂಗನಗೌಡ ಪಾಟೀಲ, ಪ್ರಾಣೇಶ, ಮುಖ್ಯಾಧಿಕಾರಿ ನಾಗೇಶ ಇದ್ದರು.