ಸಾರಾಂಶ
ಬೆಳಗಾವಿ : ಕಾಂಗ್ರೆಸ್ ಶಾಸಕರ ಬೆಂಬಲಿಗರು ಮತ್ತು ಕಾರ್ಯಕರ್ತರಿಂದ ಸಿಎಂ ರೇಸ್ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಮುಂದುವರಿದಿದೆ. ಸಿಎಂ ರೇಸ್‌ನಲ್ಲಿ ಸಚಿವ ಸತೀಶ ಜಾರಕಿಹೊಳಿ ಬೆಂಬಲಿಗರು ಸತೀಶರನ್ನೇ ಸಿಎಂ ಆಗಿಸಬೇಕು ಎಂದು ಒತ್ತಾಯ ಮಾಡಿದ್ದಾಯ್ತು. ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮತ್ತು ಅಥಣಿ ಶಾಸಕ ಲಕ್ಷ್ಮಣ ಸವದಿ ಅವರ ಬೆಂಬಲಿಗರು ಮುಂದಡಿ ಇಟ್ಟಿದ್ದಾರೆ. ಇವರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಸಿಎಂ ಆಗುವ ಅಭಿಯಾನ ಶುರು ಮಾಡಿದ್ದಾರೆ.
ಮುಂದಿನ ಮಹಿಳಾ ಮುಖ್ಯಮಂತ್ರಿ ಲಕ್ಷ್ಮೀ ಹೆಬ್ಬಾಳಕರ ಎಂದು ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರೆ, ಈಗ ಸಿಎಂ ರೇಸ್‌ನಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೆಸರು ಮುಂಚೂಣಿಗೆ ಬಂದಿದೆ.
ಕರ್ನಾಟಕದ ಸಿಎಂ ಆಗಲು ಸೂಕ್ತ ವ್ಯಕ್ತಿ ಲಕ್ಷ್ಮಣ ಸವದಿ ಎಂದು ಅವರ ಬೆಂಬಲಿಗರು ಪೋಸ್ಟ್ ಮಾಡಿದ್ದಾರೆ. ಬೆಳಗಾವಿಯ ನಾಯಕರ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಬೆಂಬಲಿಗರು ಜಿದ್ದಾಜಿದ್ದಿಗೆ ಬಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಕೋಡಿ ಮಠದ ಶ್ರೀಗಳ ಹೇಳಿಕೆ ಪ್ರಸ್ತಾಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ರಾಜ್ಯದಲ್ಲಿ ಮಹಿಳಾ ಸಿಎಂ ಆಗುವ ಯೋಗವಿದೆ ಎಂದು ಇತ್ತೀಚೆಗೆ ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದರು. ರಾಜ್ಯಕ್ಕೆ ಮಹಿಳಾ ಮುಖ್ಯಮಂತ್ರಿ ನಮ್ಮ ಬೆಳಗಾವಿ ಚನ್ನಮ್ಮ, ಕೋಡಿಮಠದ ಶ್ರೀ ಭವಿಷ್ಯ ನಿಜ ಆಗುತ್ತೋ?, ಸಿದ್ದರಾಮಯ್ಯರವರು ಅಧಿಕಾರದಿಂದ ಕೆಳಗಿಳಿದರೆ ಮುಂದಿನ ಮುಖ್ಯಮಂತ್ರಿ ಆಗಿ ಬೆಳಗಾವಿಯ ಲಕ್ಷ್ಮೀ ಅಕ್ಕಾ, ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿ ಆಗಿ ನಮ್ಮ ಬೆಳಗಾವಿಯ ಲಕ್ಷ್ಮೀ ಅಕ್ಕಾ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.ಅದರಂತೆ ಮಾಜಿ ಡಿಸಿಎಂ, ಅಥಣಿ ಶಾಸಕ ಲಕ್ಷ್ಮಣ ಸವದಿ ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಇಟ್ಟುಕೊಂಡಿದ್ದು ಸವದಿಯವರೇ ಮುಖ್ಯಮಂತ್ರಿಯಾಗಲಿ ಎಂದು ಹಾರೈಸಿದ್ದಾರೆ.