ಸಾರಾಂಶ
ಹನೂರು: ಟೆಂಡರ್ ಪ್ರಕ್ರಿಯೆ ಮುಗಿಯದ ಕಾರಣ ಪ್ರಜಾಸೌಧಕ್ಕೆ ಪೂಜೆ ಮಾಡದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ವಾಪಸ್ ತೆರಳಿದ ಘಟನೆ ನಡೆದಿದೆ.
ಹನೂರು ಪಟ್ಟಣದ ಕಂದಾಯ ಇಲಾಖೆ ವ್ಯಾಪ್ತಿಯ ಹುಲುಸುಗುಡ್ಡೆ ಸಮೀಪದ ಹುಲ್ಲೇಪುರ ಸರ್ವೆ ನಂಬರ್ 312 / ಇ ರಲ್ಲಿ ಎರಡು ಎಕರೆ ವಿಸ್ತೀರ್ಣದಲ್ಲಿ 8.60 ವೆಚ್ಚದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಶಂಕುಸ್ಥಾಪನೆ ದಿನಾಂಕ ನಿಗದಿಯಾಗಿತ್ತು. ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಮಲೆಮಹದೇಶ್ವರ ಬೆಟ್ಟದಲ್ಲಿ ಕ್ಯಾಬಿನೆಟ್ ಸಭೆ ಮುಗಿಸಿ ಶುಕ್ರವಾರ ಬೆಳಗ್ಗೆ ಮಾದೇಶ್ವರನಿಗೆ ಪೂಜೆ ಸಲ್ಲಿಸಿ ನಂತರ ಪಟ್ಟಣದಲ್ಲಿ ಪ್ರಜಾಸೌಧಕ್ಕೆ ಶಂಕುಸ್ಥಾಪನೆ ನೆರವೇರಿಸಲು ಸಮಯ ಮತ್ತು ದಿನಾಂಕ ನಿಗದಿಯಾಗಿತ್ತು.
ಟೆಂಡರ್ ಆಗದೆ ಶಂಕು ಸ್ಥಾಪನೆ ಇಲ್ಲ ಸಿಎಂ:
ಹನೂರು ಪಟ್ಟಣದಲ್ಲಿ ಪ್ರಮುಖವಾಗಿ ಪ್ರಜಾಸೌಧಕ್ಕೆ ಶಂಕುಸ್ಥಾಪನೆ ಮಾಡಲು ಟೆಂಡರ್ ಕೂಡ ಕರೆದಿಲ್ಲ. ಹನೂರು ಪಟ್ಟಣದಿಂದ ಈ ಸ್ಥಳ ದೂರ ಕೂಡ ಇರುವುದರಿಂದ ಮುಂದಿನ ದಿನಗಳಲ್ಲಿ ಮಾಡೋಣ ಎಂದು ಸಿಎಂ ಸಿದ್ದರಾಮಯ್ಯ ಕಾರಿನಿಂದ ಇಳಿಯದೆ ಮಾಹಿತಿ ಪಡೆದು ವಾಪಸ್ ತೆರಳಿದರು. ಕಳೆದ ಹಲವು ವರ್ಷಗಳಿಂದ ಬಹು ಬೇಡಿಕೆಯ ಪ್ರಜಾಸೌಧವನ್ನು ನಿರ್ಮಾಣ ಮಾಡಲು ಪಟ್ಟಣದಿಂದ 3 ಕಿ.ಮೀ. ದೂರದಲ್ಲಿರುವ ಹುಲ್ಲೇಪುರ ಸರ್ವೆ ನಂ. 312ರಲ್ಲಿ ಎರಡು ಎಕರೆ ಜಮೀನು ಗುರುತಿಸಿ ಹನೂರು ಭಾಗದ ಜನತೆಗೆ ಸುಸಜ್ಜಿತ ಪ್ರಜಾಸೌಧ ನಿರ್ಮಾಣಕ್ಕೆ ಸ್ಧಳ ನಿಗದಿ ಮಾಡಲಾಗಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಶಾಸಕರಾದ ಎಂ.ಆರ್.ಮಂಜುನಾಥ್, ಕೊಳ್ಳೇಗಾಲ ಶಾಸಕ ಕೃಷ್ಣಮೂರ್ತಿ, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ಚಾಮರಾಜನಗರ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ , ಕವಿತಾ ಹಾಗೂ ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿ ಇದ್ದರು.