‘ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಆಯವ್ಯಯ ಶ್ವೇತಪತ್ರವಲ್ಲ. ದೀರ್ಘಾವಧಿ ಬಜೆಟ್ ಮಂಡನೆ ಸಾಧನೆಯೂ ಅಲ್ಲ. ರಾಜ್ಯವನ್ನು ಸಾಲದ ಕೂಪಕ್ಕೆ ದೂಡಿದ್ದೇ ನಿಮ್ಮ ಸಾಧನೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಆಯವ್ಯಯ ಶ್ವೇತಪತ್ರವಲ್ಲ. ದೀರ್ಘಾವಧಿ ಬಜೆಟ್ ಮಂಡನೆ ಸಾಧನೆಯೂ ಅಲ್ಲ. ರಾಜ್ಯವನ್ನು ಸಾಲದ ಕೂಪಕ್ಕೆ ದೂಡಿದ್ದೇ ನಿಮ್ಮ ಸಾಧನೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

ಅಲ್ಲದೆ, ‘ನಿಮ್ಮ ಆರ್ಥಿಕ ಸ್ಥಿತಿ ಸುಸ್ಥಿತಿಯಲ್ಲಿದ್ದರೆ, ಬನ್ನಿ ಪ್ರತಿ ಜಿಲ್ಲೆಗೂ ಹೋಗೋಣ. ಬಹಿರಂಗ ವೇದಿಕೆಯಲ್ಲಿ ನಿಂತು ನಿಮ್ಮ ಯೋಜನೆಗಳು ಎಷ್ಟು ಜನರಿಗೆ ತಲುಪಿವೆ, ರೈತರು ಮತ್ತು ಶ್ರಮಿಕ ವರ್ಗದ ಕಲ್ಯಾಣ ಎಷ್ಟರ ಮಟ್ಟಿಗೆ ಆಗಿದೆ ಎಂಬುದನ್ನು ಜನರ ಮುಂದೆ ಚರ್ಚಿಸೋಣ’ ಎಂದೂ ಅವರು ಸವಾಲು ಎಸೆದಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ವಿಜಯೇಂದ್ರ, ರಾಜ್ಯದ ಆರ್ಥಿಕ ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂಬ ನನ್ನ ಹೇಳಿಕೆಯಿಂದ ನೀವು ಸಂಪೂರ್ಣ ವಿಚಲಿತರಾಗಿದ್ದೀರಿ. ನಿಮ್ಮ ಸುದೀರ್ಘ ಸ್ಪಷ್ಟನೆ ಹಿಂದೆ ನಿಮ್ಮ ಪ್ರಯಾಸ, ಪಡಿಪಾಟಲು ಕಂಡು ಮರುಕುವುಂಟಾಯಿತು. 17 ಬಾರಿ ಬಜೆಟ್ ಮಂಡಿಸಿರುವುದನ್ನೇ ದೊಡ್ಡ ಸಾಧನೆ ಎಂದುಕೊಂಡಿರುವ ನಿಮಗೆ ಆಯವ್ಯಯಕ್ಕೂ ಮತ್ತು ಶ್ವೇತಪತ್ರಕ್ಕೂ ಇರುವ ವ್ಯತ್ಯಾಸವೇ ತಿಳಿದಿಲ್ಲದಿರುವುದು ರಾಜ್ಯದ ದುರಂತ. ಶ್ವೇತ ಪತ್ರವೆಂದರೆ ಕಪ್ಪು ಚುಕ್ಕೆಯಿಲ್ಲದ ನಿಖರ ಅಂಶಗಳನ್ನು ಜನರ ಮುಂದಿಡುವುದು. ಈ ವ್ಯತ್ಯಾಸ ನಿಮಗೆ ಗೊತ್ತಿಲ್ಲದಿದ್ದರೆ ನಿಮ್ಮ ಇಲಾಖೆಯ ಆರ್ಥಿಕ ತಜ್ಞರಿಂದ ತಿಳಿದುಕೊಳ್ಳಿ ಎಂದು ಟಾಂಗ್ ನೀಡಿದ್ದಾರೆ.

ಇಷ್ಟಕ್ಕೂ ಬಜೆಟ್ ಮಂಡನೆಯೇ ದೊಡ್ಡ ಸಾಧನೆ ಆಗುತ್ತದೆಯೇ? ಅದು ಹೆಚ್ಚೆಂದರೆ ದಾಖಲೆಯಷ್ಟೆ, ಸಾಧನೆಯಲ್ಲ. ಅಷ್ಟಕ್ಕೂ ಬಜೆಟ್‌ನಲ್ಲಿ ಜನ ಶಾಶ್ವತವಾಗಿ ನೆನೆಪಿಸಿಕೊಳ್ಳುವಂಥ ಯಾವುದಾದರೂ ಜನಪರ ಯೋಜನೆ ಇದೆಯೇ? ಅದನ್ನು ನೀವು ಪಟ್ಟಿ ಮಾಡಿಯೇ ಇಲ್ಲ. ಘೋಷಿಸಿದ್ದರೆ ತಾನೆ ಪಟ್ಟಿ ಮಾಡುವುದು ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ರಾಜ್ಯದ ಆರ್ಥಿಕತೆ ಸುಸ್ಥಿತಿಯಲ್ಲಿದೆ ಎಂದು ವಾದಿಸುವ ಮುಖ್ಯಮಂತ್ರಿಗಳೇ, ಬೆರಳೆಣಿಕೆಯಷ್ಟಿರುವ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಲು ಪಿಂಚಣಿ ಇಲ್ಲದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದ್ದು ಯಾಕೆ? ನಿಮ್ಮ ಅಂಕಿ-ಅಂಶಗಳು ಕೇವಲ ಕಾಗದದ ಮೇಲಿವೆ, ವಾಸ್ತವದಲ್ಲಿ ಖಜಾನೆ ಖಾಲಿಯಾಗಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ ಎಂದು ಅವರು ಪ್ರಶ್ನಿಸಿದ್ದಾರೆ.

ಇಡೀ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದ ಕುಖ್ಯಾತಿ ಈ ಸರ್ಕಾರಕ್ಕೆ ಸಲ್ಲುತ್ತದೆ. ಕೇಂದ್ರದ ಮೇಲೆ ಗೂಬೆ ಕೂರಿಸುವ ವ್ಯರ್ಥ ಪ್ರಯತ್ನವನ್ನು ಜನ ನಂಬುವುದಿಲ್ಲ. ಜಿಎಸ್‌ಟಿ ಪಾಲು ಮತ್ತು ಅನುದಾನ ಪಡೆಯಲು ಸಮರ್ಪಕ ವರದಿ ಸಲ್ಲಿಸುವಲ್ಲಿ ವಿಫಲವಾಗಿರುವ ನಿಮ್ಮ ಸರ್ಕಾರ, ತನ್ನ ದೋಷಪೂರಿತ ನಿರ್ಧಾರಗಳನ್ನು ಮುಚ್ಚಿಹಾಕಲು ಕೇಂದ್ರದತ್ತ ಬೆರಳು ಮಾಡುತ್ತಿದೆ. ನೀವು ಮಾಡಿರುವ ಒಟ್ಟು ಸಾಲದ ಮೊತ್ತ 8.14 ಲಕ್ಷ ಕೋಟಿ ರು. ಗಡಿ ದಾಟಿದೆ. 2025-26ನೇ ಆರ್ಥಿಕ ವರ್ಷದಲ್ಲಿ 48 ಸಾವಿರ ಕೋಟಿ ರು. ಬಡ್ಡಿ ಪಾವತಿಸಿದ್ದೀರಿ. ಸಾಲದ ಮೊತ್ತ ಏರುತ್ತಲೇ ಇದೆ. ಆದರೆ ಅಭಿವೃದ್ಧಿ ಮಾತ್ರ ಶೂನ್ಯ. ಇದು ಆರ್ಥಿಕ ದಿವಾಳಿತನವಲ್ಲವೇ ಎಂದು ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.

ಸರ್ಕಾರದಿಂದ ಪರಮ ದ್ರೋಹ:

ಪಂಚ ಗ್ಯಾರಂಟಿಗಳಿಗಾಗಿ ಎಸ್‌ಸಿಪಿ/ಟಿಎಸ್‌ಪಿ ನಿಧಿಯನ್ನು ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳ ಹಣ ಬಳಸಿಕೊಳ್ಳುವ ಮೂಲಕ ಆ ಸಮುದಾಯಗಳಿಗೆ ನಿಮ್ಮ ಸರ್ಕಾರ ಪರಮ ದ್ರೋಹ ಎಸಗಿದೆ. ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರ ತೆಗೆದುಕೊಂಡಿದ್ದ ದಿಟ್ಟ ನಿರ್ಧಾರಗಳನ್ನು ರಕ್ಷಿಸಲಾಗದೆ, ಒಳಮೀಸಲಾತಿ ಹೆಸರಿನಲ್ಲಿ ಸಮುದಾಯಗಳ ನಡುವೆ ವಿಷಬೀಜ ಬಿತ್ತಿ ಕುತಂತ್ರ ರಾಜಕಾರಣ ಮಾಡುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.

ಖಾಲಿಯಾಗಿರುವ ಖಜಾನೆ ತುಂಬಿಸಿಕೊಳ್ಳಲು ಪ್ರತಿ 500 ಮೀ.ಗೆ ಒಂದು ವೈನ್ಸ್ ಸ್ಟೋರ್, ಬಾರ್‌ಗಳನ್ನು ತೆರೆದು ಕರ್ನಾಟಕವನ್ನು ಹೆಂಡದ ರಾಜ್ಯವನ್ನಾಗಿ ಮಾಡಿದ್ದೀರಿ. ಇದನ್ನು ನಿಮ್ಮ ಆರ್ಥಿಕ ತಜ್ಞತೆಯ ಪಾಂಡಿತ್ಯ ಎಂದು ಹೊಗಳಬೇಕೇ? ಕೃಷ್ಣಾ ಮೇಲ್ದಂಡೆ ಯೋಜನೆಗೆ ಭೂಮಿ ಕಳೆದುಕೊಂಡು ಮುಳುಗಡೆ ಸಂತ್ರಸ್ತರಾದ ರೈತರಿಗೆ ಪರಿಹಾರ ನೀಡುವುದಾಗಿ ದೊಡ್ಡದಾಗಿ ಘೋಷಿಸಿದಿರಿ. ಆದರೆ ಈವರೆಗೂ ಆ ಭರವಸೆ ಈಡೇರಿಲ್ಲ. ಅನ್ನದಾತನ ಹೊಟ್ಟೆ ಮೇಲೆ ಹೊಡೆಯುತ್ತಿರುವ ನಿಮಗೆ ಆರ್ಥಿಕತೆ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.