ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ನ.26ರಂದು ಕ್ರಾಂತಿಯಾಗಲಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದರು.ಹೊನ್ನಾಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಕುರ್ಚಿಗಾಗಿ ರಾಜ್ಯ ಸರ್ಕಾರದಲ್ಲಿ ಕ್ರಾಂತಿಯಾಗಲಿದ್ದು, ಇನ್ನು 2 ತಿಂಗಳಲ್ಲಿ ಕ್ರಾಂತಿಯಾಗುವುದು ನಿಶ್ಚಿತ ಎಂದರು.
ನ.26ರಂದು ಮುಖ್ಯಮಂತ್ರಿ ಕುರ್ಚಿಗಾಗಿ ಕ್ರಾಂತಿಯಾಗುವ ಬಗ್ಗೆ ಕಾಂಗ್ರೆಸ್ಸಿನವರೇ ನನಗೆ ಮಾಹಿತಿ ನೀಡಿದ್ದಾರೆ. ಎಲ್ಲರೂ ಬರೆದಿಟ್ಟುಕೊಳ್ಳಿ. ಇನ್ನು 2 ತಿಂಗಳಲ್ಲಿ ಸಿಎಂ ಕುರ್ಚಿಗಾಗಿ ಕ್ರಾಂತಿಯಾಗುವುದು ನಿಶ್ಚಿತ, ರಾಜ್ಯದಲ್ಲಿ ರಾಜಕೀಯ ಕ್ರಾಂತಿಯೂ ಆಗಲಿದೆ ಎಂದು ತಿಳಿಸಿದರು.ನಿರ್ದಿಷ್ಟ ತಿಂಗಳು, ದಿನಾಂಕವನ್ನೂ ನಾನು ಹೇಳಿದ್ದಲ್ಲ. ಕಾಂಗ್ರೆಸ್ ಪಕ್ಷದವರೇ ನವೆಂಬರ್ 26 ಮಹತ್ವದ ದಿನವೆಂದು ತಿಂಗಳು, ದಿನಾಂಕದ ಸಮೇತವಾಗಿ ಹೇಳಿದ್ದಾರೆ. ಮುಖ್ಯಮಂತ್ರಿ ಕುರ್ಚಿಗಾಗಿ ನ.26ರಂದು ಏನೆಲ್ಲಾ ಆಗಬೇಕು, ಹೊಡೆದಾಟ, ಕಿತ್ತಾಟ, ರಾಜಕೀಯ ಕ್ರಾಂತಿ ಎಲ್ಲವೂ ಆಗುತ್ತವೆ ಎಂದು ಹೇಳಿದರು.
ಮಾಜಿ ಸಚಿವ ಕೆ.ಎನ್.ರಾಜಣ್ಣ ನವೆಂಬರ್‌ನಲ್ಲಿ ಕ್ರಾಂತಿಯಾಗುತ್ತೆ ಎಂದು ಹಿಂದೆಯೇ ಹೇಳಿದ್ದರು. ಕಾಂಗ್ರೆಸ್ಸಿನ ನಾಯಕರೇ ಆಪ್ತವಾಗಿ ಹೇಳುತ್ತಿರುವ ಮಾತುಗಳು. ನ.26ಕ್ಕೆ ನೂರಕ್ಕೆ ನೂರು ಮುಖ್ಯಮಂತ್ರಿ ಕುರ್ಚಿಗಾಗಿ ಗಲಾಟೆ, ಗೊಂದಲಗಳಾಗಲಿವೆ. ಕಾದು ನೋಡಿ. ವೇಯ್ಟ್ ಅಂಡ್ ಸೀ. ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದು ನವೆಂಬರ್ ಕ್ರಾಂತಿ ಅಂತಲೆ. ಸಿಎಂ ಕುರ್ಚಿ ಹೊಡೆದಾಟ, ಬಡಿದಾಟಗಳೂ ನಿಶ್ಚಿತ ಎಂದು ಪುನರುಚ್ಛರಿಸಿದರು.ರಾಜ್ಯ ಸರ್ಕಾರ ಜಾತಿಗಣತಿ ಮೂಲಕ ಜಾತಿ ಜಾತಿಗಳ ಮಧ್ಯೆ ಸಂಘರ್ಷ ಮಾಡುತ್ತಿದೆ. ಕೇಂದ್ರ ಸರ್ಕಾರಕ್ಕೆ ಮಾತ್ರ ಜಾತಿಗಣತಿ ಕೈಗೊಳ್ಳುವ ಅಧಿಕಾರ ಇದೆ. ಸಿದ್ದರಾಮಯ್ಯ ಇದು ಜಾತಿಗಣತಿಯಲ್ಲ ಅಂತಾರೆ. ಮತ್ತೆ ಯಾಕೆ ರಾಜ್ಯದಲ್ಲಿ ಜಾತಿಗಣತಿ ಆರಂಭಿಸಿದ್ದೀರಿ? ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದವರು, ಬಡವರ ಪರ ಸಮೀಕ್ಷೆ ಮಾಡಲಿ. ಸಂತೋಷ. ಜಾತಿ ಸಂತೋಷ. ಆದರೆ, ಗಣತಿ ಕಾಲಂ ಜಾತಿ ಯಾಕೆ ತರುತ್ತೀರಿ ಎಂದು ಪ್ರಶ್ನಿಸಿದರು.
ಸೋನಿಯಾ ಗಾಂಧಿ, ರಾಹುಲ್ ಗಾಂದಿ ಮೆಚ್ಚಿಸಲು ಹಿಂದೂಗಳ ಜಾತಿ ಮುಂದೆ ಕ್ರಿಶ್ಚಿಯನ್ ಯಾಕೆ ಎಳೆ ತಂದಿರಿ ಸಿದ್ದರಾಮಯ್ಯನವರೆ? ನೀವು ಕ್ರಿಶ್ಚಿಯನ್ ಪರವಾಗಿ, ಸೋನಿಯಾ-ರಾಹುಲ್ ಗಾಂಧಿಗೆ ಮೆಚ್ಚಿಸಲು ಕೆಲಸ ಮಾಡುತ್ತಿದ್ದೀರಾ? ಒಂದು ಕಡೆ ಅಲ್ಪಸಂಖ್ಯಾತರ ಓಲೈಸಲು ಹಿಂದೂಗಳ ಮೇಲೆ ದೌರ್ಜನ್ಯ ಮಾಡುತ್ತಿದ್ದೀರಿ. ಹಿಂದೂ ಮುಖಂಡರ ಗಡೀಪಾರು ಮಾಡುತ್ತೀರಿ, ಹಿಂದೂ ವಿರೋಧಿ, ರೈತ ವಿರೋಧಿ ಸರ್ಕಾರ ಇದು. ಇನ್ನು ಹೆಚ್ಚು ದಿನ ಈ ಸರ್ಕಾರ ಇರುವುದಿಲ್ಲ. ಕಾದು ನೋಡಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಜಾತಿಗಣತಿ ಹೆಸರಲ್ಲಿ ಹಿಂದೂ ಧರ್ಮ ಒಡೆಯುವ ಯತ್ನ
ಜಾತಿಗಣತಿ ಹೆಸರಿನಲ್ಲಿ ಹಿಂದೂ ಧರ್ಮವನ್ನು ಒಡೆಯಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ. ಮೊನ್ನೆ ಕಾಂಗ್ರೆಸ್ ಸಂಪುಟ ಸಭೆಯಲ್ಲಿ ಪರಸ್ಪರರು ಕುರ್ಚಿ ಎತ್ತಿಕೊಂಡು ಹೊಡೆದಾಡುವುದೊಂದೇ ಬಾಕಿ ಇತ್ತು. ನನಗೆಲ್ಲಾ ಅದರ ಎಲ್ಲಾ ಮಾಹಿತಿ ಇದೆ. ಸಂಪುಟ ಸಭೆ ನಡೆಯುತ್ತಿದ್ದ ಕೊಠಡಿಯೊಳಗೆ ಏನಾಗಬೇಕಿತ್ತೋ ಅದೆಲ್ಲಾ ಆಗಿದೆ. ಕಾಂಗ್ರೆಸ್ಸಿಗರಿಂದಲೇ ಆಕ್ರೋಶ ಸ್ಪೋಟ ಆಗಿದೆ. ಸಿದ್ದರಾಮಯ್ಯ ಕುರ್ಚಿಗೆ ಕಂಟಕ ಬಂದಾಗ ಜಾತಿಗಣತಿ ಸೇರಿ ಇಂತಹದ್ದನ್ನೆಲ್ಲಾ ಟ್ರಂಪ್ ಕಾರ್ಡ್ ತರುತ್ತಾರೆ ಎಂದು ರೇಣುಕಾಚಾರ್ಯ ದೂರಿದರು.