ಸಿಎಂರಿಂದ ವೀರಶೈವ ಲಿಂಗಾಯತರ ದಮನ

| Published : Jun 03 2025, 12:19 AM IST

ಸಾರಾಂಶ

ವೀರಶೈವ ಲಿಂಗಾಯತ ಸಮಾಜವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ದಮನ ಮಾಡುತ್ತಿದ್ದಾರೆ. ವೀರಶೈವ ಲಿಂಗಾಯಿತರು ನಿಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ಸಲುವಾಗಿ ಹೋರಾಟ ಮಾಡಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ವೀರಶೈವ ಲಿಂಗಾಯತ ಸಮಾಜವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ದಮನ ಮಾಡುತ್ತಿದ್ದಾರೆ. ವೀರಶೈವ ಲಿಂಗಾಯಿತರು ನಿಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ಸಲುವಾಗಿ ಹೋರಾಟ ಮಾಡಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.ಪಟ್ಟಣದ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ, ಮಹಿಳಾ ಯುವ ಘಟಕ ಹಾಗೂ ವೀರಶೈವ ಲಿಂಗಾಯಿತ ಸಂಘ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಸವಜಯಂತಿ ಹಾಗೂ ವೀರಯೋಧರಿಗೆ ಬಲ ನೀಡಲು ನಡೆಸಲಾದ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ೨೦೧೧ ರ ಜನಗಣತಿಯ ಪ್ರಕಾರ ಸುಮಾರು ೯೩ ಲಕ್ಷ ಜನಸಂಖ್ಯೆ ಹೊಂದಿದ್ದ ರಾಜ್ಯದ ದೊಡ್ಡ ಸಮಾಜವಾಗಿದ್ದ ವೀರಶೈವ ಲಿಂಗಾಯಿತರನ್ನು ಸಿದ್ದರಾಮಯ್ಯರ ಜಾತಿಗಣತಿಯಲ್ಲಿ ೭೫ ಲಕ್ಷಕ್ಕೆ ಇಳಿಸಲಾಗಿದೆ. ದೊಡ್ಡ ಸಮಾಜಗಳಲ್ಲಿ ಸಣ್ಣ ಉಪ ಪಂಗಡಗಳನ್ನು ಎತ್ತಿ ಕಟ್ಟಿ ಸಮುದಾಯವನ್ನು ಒಡೆದು ಹಾಕುವ ಹುನ್ನಾರ ಮಾಡುತ್ತಿದ್ದಾರೆ. ಜಾತಿ ಆಧಾರದಲ್ಲಿ ಬಜೆಟ್ ಮಂಡಿಸಲು ಸಿದ್ಧತೆ ಮಾಡಿಕೊಂಡಿರುವುದರಿಂದ ದೊಡ್ಡ ಜಾತಿಗಳಿಗೆ ಬಹಳ ಪೆಟ್ಟು ಬೀಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಬಸವಣ್ಣನವರು ಹೆಚ್ಚು ವರ್ಷ ಬದುಕಿದ್ದರೆ ಇಡೀ ರಾಷ್ಟ್ರವನ್ನು ಧರ್ಮ, ಜಾತಿ ಮುಕ್ತವನ್ನಾಗಿ ಮಾಡುತ್ತಿದ್ದರು. ಜಾತಿ ವ್ಯವಸ್ಥೆಯನ್ನೇ ನಿರ್ನಾಮ ಮಾಡುತ್ತಿದ್ದರು. ತಮ್ಮ ಇಡೀ ಜೀವನವನ್ನೇ ಸಮಾಜ ಸುಧಾರಣೆಗೆ ಮೀಸಲಿಟ್ಟಿದ್ದರು. ಜಾತಿ ಪದ್ದತಿ, ತಾರತಮ್ಯ, ಮೇಲು ಕೀಳಿನ ವಿರುದ್ದ ಹೋರಾಟ ಮಾಡಿದ್ದರು. ಅನುಭವ ಮಂಟಪದ ಮೂಲಕ ಬಸವಣ್ಣನವರು ರಾಷ್ಟ್ರಕ್ಕೆ ಅಲ್ಲ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಪ್ರಧಾನಿ ಮೋದಿಯವರು ಬಸವಣ್ಣನವರ ಅನುಯಾಯಿಯಾಗಿದ್ದಾರೆ. ಅನುಭವ ಮಂಟಪದಂತೆ ನೂತನ ಪಾರ್ಲಿಮೆಂಟ್ ಭವನ ನಿರ್ಮಿಸಿ ಬಸವಣ್ಣನ ಆದರ್ಶಗಳನ್ನು ಪಾಲಿಸುತ್ತಿದ್ದಾರೆ. ಸಿದ್ದರಾಮೇಶ್ವರ ಸಮುದಾಯ ಭವನದ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ದೇವಾಲಯ ನಿರ್ಮಾಣಕ್ಕೆ ೧೦ ಲಕ್ಷ ಅನುದಾನ ನೀಡುವ ಭರವಸೆಯನ್ನು ಶಾಸಕ ಎಂ.ಟಿ.ಕೃಷ್ಣಪ್ಪ ನೀಡಿದರು.

ವೀರಯೋಧರಿಗೆ ಬಲ ನೀಡುವ ಸಲುವಾಗಿ ಕಾಡಸಿದ್ದೇಶ್ವರ ಮಠದ ಕರಿವೃಷಭದೇಶಿ ಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ಹಾಗೂ ಗೊಲ್ಲಹಳ್ಳಿ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ವಿಭವ ವಿದ್ಯಾಶಂಕರ ದೇಶಿ ಕೇಂದ್ರ ಮಹಾ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮ ನಡೆಸಲಾಯಿತು. ಹಲವಾರು ಜನರು ಭಾಗವಹಿಸಿ ಇಷ್ಟಲಿಂಗ ಪೂಜೆ ನೆರವೇರಿಸಿದರು. ಯುವ ಘಟಕದಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಐವತ್ತಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು. ಅಕ್ಕನ ಬಳಗದವರು ವಚನ ಗಾಯನವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ಹಿರೇಡೊಂಕಿಹಳ್ಳಿ ಕೃಷಿ ವಿಜ್ಞಾನ ವಿದ್ಯಾರ್ಥಿ ತೇಜಸ್ಸ್‌ರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಾಡಸಿದ್ದೇಶ್ವರ ಮಠದ ಕರಿವೃಷಭದೇಶಿ ಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ, ಕಿರಿಯ ಸ್ವಾಮೀಜಿ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಹಾಗೂ ಗೊಲ್ಲಹಳ್ಳಿ ಸಿದ್ದಲಿಂಗೇಶ್ವರ ಮಹಾಸಂಸ್ಥಾನ ಮಠದ ವಿಭವ ವಿದ್ಯಾ ಶಂಕರ ದೇಶಿ ಕೇಂದ್ರ ಮಹಾ ಸ್ವಾಮಿಗಳು ದಿವ್ಯ ಸಾನಿದ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಶೈವ ಲಿಂಗಾಯಿತ ಸಮಾಜದ ತಾಲೂಕು ಅಧ್ಯಕ್ಷ ಎಸ್.ಎಂ.ಕುಮಾರಸ್ವಾಮಿ ವಹಿಸಿದ್ದರು. ಪಟ್ಟಣ ಪಂಚಾಯತಿ ಅಧ್ಯಕ್ಷೆ ಸ್ವಪ್ನ ನಟೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು, ವಿಶ್ವನಾಥ ಅಪ್ಪಾಜಪ್ಪ, ಕೋಶಾಧ್ಯಕ್ಷ ಆರ್.ಬಿ.ಜಯಣ್ಣ, ಕಾರ್ಯದರ್ಶಿ ಟಿ.ಎಂ.ವಿಜಯಕುಮಾರ್, ನೊಳಂಬ ಲಿಂಗಾಯತ ಸಂಘದ ನಿರ್ದೇಶಕ ಎಂ.ದೇವರಾಜು, ಯುವ ಘಟಕದ ಜಿಲ್ಲಾಧ್ಯಕ್ಷ ಕೆ.ಎಲ್.ದರ್ಶನ್, ರಾಜ್ಯ ಕಾರ್ಯದರ್ಶಿ ಹೆಚ್.ಎಸ್.ಶ್ರೀಧರ್, ಕೋಳಘಟ್ಟ ಯೋಗೀಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಮತಾ ದಿವಾಕರ್, ತಾಲೂಕು ಅಧ್ಯಕ್ಷೆ ಪುಷ್ಪಾವತಿ, ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಶಿವಾನಂದಯ್ಯ, ಕೋಶಾಧ್ಯಕ್ಷ ಡಿ.ಎಂ.ಸುರೇಶ್, ಉಪನ್ಯಾಸಕ ದಿಬ್ಬದಹಳ್ಳಿ ಶ್ಯಾಮಸುಂದರ್, ಹೆಡಗಿಹಳ್ಳಿ ವಿಶ್ವನಾಥ್, ವೆಂಕಟಾಪುರ ಯೋಗೀಶ್, ರೂಪಶ್ರೀ ಸೇರಿದಂತೆ ಸಮಾಜದ ಹಲವಾರು ಮುಖಂಡರು ಇದ್ದರು.