ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮೊದಲು ಭಗವದ್ಗೀತೆಯನ್ನು ಅಧ್ಯಯನ ಮಾಡಲಿ. ನಂತರ ಟೀಕೆ ಮಾಡಲಿ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮೊದಲು ಭಗವದ್ಗೀತೆಯನ್ನು ಅಧ್ಯಯನ ಮಾಡಲಿ. ನಂತರ ಟೀಕೆ ಮಾಡಲಿ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಗವದ್ಗೀತೆ ಅಧ್ಯಯನ ಮಾಡುವವರು ಮನವಾದಿಗಳು ಎಂದು ಹೇಳಿದ್ದಾರೆ. ಈ ಹೇಳಿಕೆ ಅವರ ಸೈದ್ಧಾಂತಿಕ ದಿವಾಳಿತನವನ್ನು ತೋರಿಸುತ್ತದೆ. ಯಾರೋ ಹೇಳಿಕೊಟ್ಟಿದ್ದನ್ನು ಹೇಳುವ ಕಮ್ಯುನಿಸ್ಟ್ ಸಿದ್ಧಾಂತವನ್ನು ತಲೆಯಲ್ಲಿ ತುಂಬಿಕೊಂಡಿರುವ ಇವರು ಭಗವದ್ಗೀತೆಯನ್ನು ಒಮ್ಮೆ ಅಧ್ಯಯನ ಮಾಡಲಿ. ಭಗವದ್ಗೀತೆ ಎಂಬುದು ಕೇವಲ ಹಿಂದೂಗಳು ಮಾತ್ರ ಓದುವುದಲ್ಲ, ಎಲ್ಲಾ ಧರ್ಮದವರು ಅದನ್ನು ಓದಬೇಕು. ಭಗವದ್ಗೀತೆಯ ಬಗ್ಗೆ ಮಾತನಾಡುವ ಇವರು ಕುರಾನ್ ಬಗ್ಗೆ, ಬೈಬಲ್ ಬಗ್ಗೆ ತಾಕತ್ತಿದ್ದರೆ ಮಾತನಾಡಲಿ ಕೇವಲ ವೋಟ್‌ಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿಯ ಹುಚ್ಚು ಹುಚ್ಚು ಮಾತುಗಳನ್ನು ಕೈಬಿಡಬೇಕು. ಅವರು ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದರು.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ಭಗವದ್ಗೀತೆಯನ್ನು ಶಾಲಾ ಪಠ್ಯ-ಪುಸ್ತಕದಲ್ಲಿ ಅಳವಡಿಸುವಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದಿರುವುದು ಮತ್ತು ಧರ್ಮೇಂದ್ರ ಪ್ರಧಾನ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿರುವುದು ಸ್ವಾಗತದ ವಿಷಯ. ಇಬ್ಬರಿಗೂ ಅಭಿನಂದನೆಗಳು ಎಂದರು.

ಕುಮಾರಸ್ವಾಮಿ ಅವರು ಈ ಹಿಂದೆ ಭಗವದ್ಗೀತೆಯ ಬಗ್ಗೆ ಬೇರೆ ರೀತಿ ಮಾತನಾಡಿದ್ದರು. ಈಗ ಭಗವದ್ಗೀತೆಯ ಬಗ್ಗೆ ಅವರಿಗೆ ಪ್ರೀತಿ ಬಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದೆ ಹೆಚ್.ಡಿ. ಕುಮಾರಸ್ವಾಮಿಯವರು ಏನು ಹೇಳಿದ್ದಾರೋ ಅದು ಮುಖ್ಯವಲ್ಲ, ಈಗ ಹೇಳುತ್ತಿರುವುದು ಮುಖ್ಯ. ಬಹುಶಃ ಆಗ ಅವರಿಗೆ ಈ ರೀತಿ ಹೇಳುವ ಹುಚ್ಚು ಹಿಡಿದಿತ್ತು ಆದರೆ ಈಗ ಆ ಹುಚ್ಚು ಬಿಟ್ಟಿದೆ ಎಂದು ಪ್ರತಿಕ್ರಿಯಿಸಿದರು.

ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರ ಬರುವ ಅಧಿವೇಶನದಲ್ಲಿ ತಿದ್ದುಪಡಿ ಮಾಡಲು ಹೊರಟಿದೆಯಲ್ಲ ಎನ್ನುವ ಪ್ರಶ್ನೆಗೆ ಕಾರವಾಗಿ ಉತ್ತರಿಸಿದ ಅವರು, ಗೋಹತ್ಯೆ ನಿಷೇಧಕ್ಕೆ ಸಂಬಂಧಪಟ್ಟಂತೆ ಇರುವ ಮಸೂದೆಗೆ ಮತ್ತಷ್ಟು ಗಟ್ಟಿತನ ತರಬೇಕು. ಅದರ ಪರವಾಗಿ ಮಸೂದೆ ಮಾಡಬಾರದು ಒಂದು ಪಕ್ಷ ಅದನ್ನು ತಿದ್ದುಪಡಿ ಮಾಡಲು ಹೊರಟರೆ ಅವರ ಮನೆಯ ಹೆಣ್ಣು ಮಕ್ಕಳೇ ಇದಕ್ಕೆ ಪ್ರತಿರೋಧ ವ್ಯಕ್ತಪಡಿಸುತ್ತಾರೆ ಎಂದರು.

ಕೆಲವು ಮುಸ್ಲಿಂ ನಾಯಕರು ಬಾಬ್ರಿ ಮಸೀದಿಯನ್ನು ಮತ್ತೆ ನಿರ್ಮಿಸುತ್ತೇವೆ ಎಂಬ ಹೇಳಿಕೆ ನೀಡುತ್ತಿದ್ದಾರೆ. ಈ ಬಾಬರನಿಗೂ ದೇಶಕ್ಕೂ ಯಾವ ಸಂಬಂಧವಿದೆ. ಮುಸ್ಲಿಂರಲ್ಲಿ ಉತ್ತಮ ನಾಯಕರು ಇಲ್ಲವೇ ? ಬಾಬರ್ ಹೆಸರನ್ನೇ ಏಕೆ ಇಡಬೇಕು ಒಂದು ಪಕ್ಷ ಬಾಬರ್ ಹೆಸರಿನಲ್ಲಿ ಮಸೀದಿ ನಿರ್ಮಿಸಿದರೆ ಅದನ್ನು ಧ್ವಂಸಗೊಳಿಸುವುದು ಖಚಿತ ಎಂದರು.

ಗೋಷ್ಠಿಯಲ್ಲಿ ಮೋಹನ್ ಜಾದವ್, ರಾಜು, ಕುಬೇರಪ್ಪ, ಬಾಲು, ದಿನೇಶ್, ಶಂಕ್ರಾನಾಯ್ಕ, ಶಿವಕುಮಾರ್, ಗೋವಿಂದ ಇದ್ದರು.

---

ಶಿವಮೊಗ್ಗದಲ್ಲಿ ಭಗವದ್ಗೀತೆ ಅಭಿಯಾನ ಅತ್ಯಂತ ಯಶಸ್ವಿಯಾಗಿ ಪೂರೈಸಿದೆ. ಭಗವದ್ಗೀತೆ ಬಗ್ಗೆ ನಡೆದ ಅಭಿಯಾನದ ಮೂಲಕ ಸಾವಿರಾರು ಜನರಿಗೆ ಭಗವದ್ಗೀತೆಯಲ್ಲಿರುವ ಒಳ್ಳೆಯ ಸಂದೇಶಗಳು ತಲುಪಿವೆ. ಭಗವದ್ಗೀತೆ ಸರ್ವಕಾಲಕ್ಕೂ ಮೌಲ್ಯಾಧಾರಿತ ಆದರ್ಶಗಳನ್ನು ಒಳಗೊಂಡಿರುವ ಗೀತೆಯಾಗಿದೆ. ಮಹಾತ್ಮಗಾಂಧೀಜಿಯವರೇ ಭಗವದ್ಗೀತೆ ಒಂದು ಅಮೂಲ್ಯಗ್ರಂಥ, ಸತ್ಯದ ಶೋಧ ಎಂದು ಹೇಳಿದ್ದಾರೆ. ಇಂತಹ ಭಗವದ್ಗೀತೆಯ ಅಭಿಯಾನದ ಗೌರವಾಧ್ಯಕ್ಷರಾಗಿ ನಾನು ಕೆಲಸ ನಿರ್ವಹಿಸಲು ಅವಕಾಶ ನೀಡಿದ್ದು ನನ್ನ ಸೌಭಾಗ್ಯವೇ ಆಗಿದೆ.

-ಕೆ.ಎಸ್. ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ