ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಅಲ್ಲಾಪಟ್ಟಣ ಗ್ರಾಮಕ್ಕೆ ಮೇ 2 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದು, ಮನೆದೇವರು ಶ್ರೀ ಅನ್ನದಾನೇಶ್ವರ (ಶ್ರೀಬೀರೇಶ್ವರ) ದೇವಾಲಯದ ಪುನರ್ ಪ್ರತಿಷ್ಠಾಪನಾ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.ಶಾಸಕ ರಮೇಶ ಬಂಡಿದಿದ್ದೇಗೌಡ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಆಗಮನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭದ್ರತೆ ಸಂಬಂಧ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮುಂಜಾಗೃತಾ ಕ್ರಮ ಕೈಗೊಂಡಿದೆ.
ಮೇ 2ರ ಬೆಳಗ್ಗೆ 11.10ಕ್ಕೆ ತೂಬಿನಕೆರೆ ಹೆಲಿಪ್ಯಾಡ್‌ನಲ್ಲಿ ಬಂದಿಳಿಯಲಿರುವ ಸಿಎಂ 11.25ಕ್ಕೆ ರಸ್ತೆ ಮಾರ್ಗವಾಗಿ ಅಲ್ಲಾಪಟ್ಟಣ ಗ್ರಾಮಕ್ಕೆ ಆಗಮಿಸಿ ಶ್ರೀಅನ್ನದಾನೇಶ್ವರ ದೇವಾಲಯದ ಪುನರ್ ನಿರ್ಮಾಣ, ವಿಗ್ರಹಗಳ ಸ್ಥಾಪನೆ, ಗೋಪುರ ಕುಂಬಾಭಿಷೇಕ ಹಾಗೂ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ.ತೂಬಿನಕೆರೆಯಿಂದ ಹೆದ್ದಾರಿ ಮಾರ್ಗವಾಗಿ ಚಿನ್ನನಾಯಕಹಳ್ಳಿಗೆ ಸಂಪರ್ಕ ಕಲ್ಪಿಸುವ 2.5 ಕಿಮೀ ಉದ್ದದ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯಿಂದ 3 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದೆ. ದೇವಾಲಯದ ಸುತ್ತಾಮುತ್ತಾ ರಸ್ತೆ ಎರಡು ಬದಿಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಿಸಿ ಸ್ಟ್ರಾಬ್ ಅಳವಡಿಸಲಾಗಿದೆ.
ದೇವಾಲಯದ ಪಕ್ಕದಲ್ಲಿ 8 ಲಕ್ಷ ರು. ವೆಚ್ಚದಲ್ಲಿ ಶಾಶ್ವತ ಶುದ್ಧ ಕುಡಿಯುವ ನೀರಿನ ಘಟಕ ಸಹ ಸ್ಥಾಪನೆ ಮಾಡಲಾಗಿದೆ. ಶಿಥಿಲಗೊಂಡಿರುವ ಟಿಸಿಯನ್ನು ಬದಲಿಸಿ ಹೊಸದಾಗಿ ಅಳವಡಿಸಲಾಗಿದೆ. ಹಳೇ ವಿದ್ಯುತ್ ಕಂಬಗಳನ್ನು ಬದಲಿಸಿ. ಅಲ್ಲಾಪಟ್ಟಣ ಗ್ರಾಮವನ್ನು ಪೂರ್ತಿ ವಿದ್ಯುತ್ ದೀಪಗಳಿಂದ ಅಲಂಕರಿಸುವ ಮೂಲಕ ಗ್ರಾಮವನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗಿದೆ.ಸಾರ್ವಜನಿಕರಿಗೆ ಊಟದ ವ್ಯವಸ್ಥೆ:
ದೇವಸ್ಥಾನ ಜೀರ್ಣೋದ್ಧಾರ ಹಾಗೂ ಮುಖ್ಯ ಮಂತ್ರಿಗಳು ಗ್ರಾಮಕ್ಕೆ ಆಗಮಿಸುವ ಹಿನ್ನೆಲೆ ಸುಮಾರು 20 ಸಾವಿರ ಮಂದಿ ಆಗಮಿಸುವ ಹಿನ್ನೆಲೆಯಲ್ಲಿ ಅನ್ನದಾನೇಶ್ವರ ಟ್ರಸ್ಟ್ ವತಿಯಿಂದ 15 ಸಾವಿರಕ್ಕೂ ಹೆಚ್ಚು ಮಂದಿಗೆ ಊಟದ ವ್ಯವಸ್ಥೆ ಮಾಡಲು ಸಿದ್ಧತೆ ನಡೆದಿದೆ.ಬೃಹತ್ ವೇದಿಕೆ:
ದೇವಾಲಯದ ಮುಂಭಾಗ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಜಿಲ್ಲಾಧಿಕಾರಿ ಡಾ.ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ ಹಾಗೂ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಬಿಗಿ ಭದ್ರತೆ ಮಾಡಿಕೊಳ್ಳಲಾಗಿದೆ. ರಸ್ತೆಯ ಹಲವೆಡೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.ಅಲ್ಲಾಪಟ್ಟಣ ಗ್ರಾಮದ ಶ್ರೀಅನ್ನದಾನೇಶ್ವರ ದೇವಾಲಯವು ಕ್ರಿ.ಪೂ.1765 ನಿರ್ಮಾಣಗೊಂಡಿದೆ. ಸುಮಾರು 256 ವರ್ಷಗಳ ಇತಿಹಾಸ ಹೊಂದಿದೆ. ಮುಖ್ಯಮಂತ್ರಿಗಳ ಪತ್ನಿಯ ಮನೆ ದೇವರು ಸಹ ಆಗಿದೆ. ಹಲವಾರು ವರ್ಷಗಳಿಂದಲೂ ಸಿದ್ದರಾಮಯ್ಯ ಅವರ ಕುಟುಂಬ ಸದಸ್ಯರು ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುತ್ತಿದ್ದಾರೆ. ಇದೀಗ ಭಕ್ತರು ಹಾಗೂ ಅವರ ಸಹಕಾರದೊಂದಿಗೆ ಸುಮಾರು 1.5 ಕೋಟಿ ರು. ವೆಚ್ಚದಲ್ಲಿ ದೇವಾಲಯವನ್ನು ಅಭಿವೃದ್ಧಿಗೊಳಿಸಲಾಗಿದೆ.