ಭೋವಿ ಸಮುದಾಯದ ಕುಲಕಸುಬು ಸರಿಯಾಗಿ ನಮೂದಾಗಿಲ್ಲ

| Published : May 02 2025, 12:12 AM IST

ಭೋವಿ ಸಮುದಾಯದ ಕುಲಕಸುಬು ಸರಿಯಾಗಿ ನಮೂದಾಗಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ ನಗರದ ಭೋವಿ ಗುರುಪೀಠದಲ್ಲಿ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ತಪ್ಪು ಸರಿಪಡಿಸಿ ಸರ್ಕಾರ ಜಾತಿಗಣತಿಗೆ ಮಂದಾಗಲಿ । ಮನವಿ ಪರಿಗಣಿಸದಿದ್ದರೆ ನ್ಯಾಯಲಯದ ಮೊರೆ: ಇಮ್ಮಡಿ ಸಿದ್ದರಾಮೇಶ್ವರ ಶ್ರೀ ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರಾಜ್ಯ ಸರ್ಕಾರ ಒಳಮೀಸಲಾತಿಯನ್ನು ಜಾರಿ ಮಾಡುವ ನಿಟ್ಟಿನಲ್ಲಿ ದತ್ತಾಂಶ ಸರಿಯಿಲ್ಲದ ಹಿನ್ನೆಲೆಯಲ್ಲಿ ಈಗ ಜಾತಿ ಗಣತಿಯನ್ನು ನಡೆಸಲು ಮುಂದಾಗಿದೆ. ಆದರೆ ಇದರಲ್ಲಿ ಭೋವಿ ಸಮುದಾಯಕ್ಕೆ ಸಂಬಂಧಪಟ್ಟಂತೆ ಕುಲ ಕಸುಬುಗಳನ್ನು ಸರಿಯಾದ ರೀತಿಯಲ್ಲಿ ನಮೂದು ಮಾಡಿಲ್ಲ. ಇದನ್ನು ಸರಿಪಡಿಸಿ ಜಾತಿಗಣತಿಗೆ ಸರ್ಕಾರ ಮುಂದಾಗಬೇಕು. ಇಲ್ಲವಾದರೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ನಗರದ ಭೋವಿ ಗುರುಪೀಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,

ಉಚ್ಚ ನ್ಯಾಯಾಲಯ ಒಳ ಮೀಸಲಾತಿಯನ್ನು ಜಾರಿ ಮಾಡಲು ಆಯಾ ರಾಜ್ಯ ಸರ್ಕಾರಗಳಿಗೆ ಅಧಿಕಾರವನ್ನು ನೀಡಿದೆ. ಆದರೆ ಇದನ್ನು ಜಾರಿ ಮಾಡಲು ಸರಿಯಾದ ದತ್ತಾಂಶವನ್ನು ಹೊಂದಿರಬೇಕು ಎಂದು ಸೂಚನೆ ನೀಡಿದೆ. ಇದರ ಆನ್ವಯ ಸರ್ಕಾರ ಈಗ ಜಾತಿ ಗಣತಿಯನ್ನು ಮಾಡಲು ಮುಂದಾಗಿದೆ. ಆದರೆ ನಮ್ಮ ಭೋವಿ ಸಮುದಾಯಕ್ಕೆ ಸಂಬಂಧಪಟ್ಟಂತೆ ಕೇವಲ ಮೂರು ಕುಲ ಕಸುಬುಗಳನ್ನು ಮಾತ್ರವೇ ನಮೂದು ಮಾಡಲಾಗಿದೆ. ಆದರೆ ನಮ್ಮಲ್ಲಿ ಕಲ್ಲು ಒಡೆಯುವವರು, ಕೆರೆಗಳನ್ನು ಕಟ್ಟುವವರು, ಕಟ್ಟಡ ನಿರ್ಮಾಣ ಮಾಡುವವರು, ಬಾವಿ ನಿರ್ಮಾಣ ಮಾಡುವವರು ಈ ರೀತಿಯಾಗಿ ವಿವಿಧ ಕಸುಬುಗಳನ್ನು ಮಾಡುವವರು ಇದ್ದಾರೆ. ಆದರೆ ಜಾತಿಗಣತಿಯಲ್ಲಿ ಇದಾವುದನ್ನು ನಮೂದು ಮಾಡಿಲ್ಲ ಎಂದು ಆರೋಪಿಸಿದರು.ಸರ್ಕಾರ ಜಾತಿ ಗಣತಿಯನ್ನು ಕೇವಲ ಒಂದು ಜಾತಿಗೆ ಮಾತ್ರ ಮಾಡುವುದಾದರೇ ಇದನ್ನು ಮುಂದುವರೆಸಬಹುದು. ಆದರೆ ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳ ಸಮೀಕ್ಷೆಯನ್ನು ಮಾಡುವುದಾದರೆ ನಮ್ಮ ಭೋವಿ ಸಮುದಾಯಕ್ಕೆ ಸಂಬಂಧಪಟ್ಟಂತೆ ಸರ್ಕಾರದಲ್ಲಿ ಆಗಿರುವ ತಪ್ಪನ್ನು ಸರಿಪಡಿಸಿ ಜಾತಿ ಗಣತಿಯನ್ನು ನಡೆಸಬೇಕಿದೆ. ಇಲ್ಲವಾದಲ್ಲಿ ಭೋವಿ ಸಮಾಜಕ್ಕೆ ಅನ್ಯಾಯವಾಗುತ್ತದೆ. ಮುಂದಿನ ದಿನದಲ್ಲಿ ಸರ್ಕಾರ ಯಾವುದಾದರೂ ಯೋಜನೆಗಳನ್ನು ರೂಪಿಸಬೇಕಾದರೆ ಈ ದತ್ತಾಂಶ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸರಿಯಾದ ರೀತಿಯಲ್ಲಿ ಜಾತಿಗಣತಿಯನ್ನು ಮಾಡಬೇಕಿದೆ ಎಂದು ಸರ್ಕಾರವನ್ನು ಆಗ್ರಹಿಸಿದರು.

ಸರ್ಕಾರ ನಮ್ಮ ಮನವಿಯನ್ನು ಪರಿಗಣಿಸದೇ ಜಾತಿ ಗಣತಿ ಪ್ರಾರಂಭ ಮಾಡಿದರೆ ಇದರ ವಿರುದ್ಧ ನಾವು ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ. ಇದಕ್ಕೆ ಸರ್ಕಾರ ಅವಕಾಶವನ್ನು ನೀಡದೆ ಆಗಿರುವ ತಪ್ಪನ್ನು ಸರಿಪಡಿಸಬೇಕು. ಸೂಕ್ತವಾದ ರೀತಿಯಲ್ಲಿ ಜಾತಿ ಗಣತಿಯನ್ನು ಮಾಡಿಸುವಂತೆ ಸರ್ಕಾರವನ್ನು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಭೋವಿ ಸಮಾಜದ ಮುಖಂಡರು ಹಾಜರಿದ್ದರು.