ಐತಿಹಾಸಿಕ ಬಾದಾಮಿಯ ಚಾಲುಕ್ಯ ಉತ್ಸವಕ್ಕೆ ಸೋಮವಾರ ಸಂಜೆ ಅದ್ಧೂರಿ ಚಾಲನೆ ಸಿಕ್ಕಿದ್ದು, ಚಾಲುಕ್ಯ ಪರಂಪರೆ ಮತ್ತೆ ಜಗತ್ತಿಗೆ ಸಾರುವ ಪ್ರಯತ್ನದ ಭಾಗವಾಗಿರುವ ಉತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಸ್ರಾರು ಅಭಿಮಾನಿಗಳ ಮಧ್ಯೆ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಐತಿಹಾಸಿಕ ಬಾದಾಮಿಯ ಚಾಲುಕ್ಯ ಉತ್ಸವಕ್ಕೆ ಸೋಮವಾರ ಸಂಜೆ ಅದ್ಧೂರಿ ಚಾಲನೆ ಸಿಕ್ಕಿದ್ದು, ಚಾಲುಕ್ಯ ಪರಂಪರೆ ಮತ್ತೆ ಜಗತ್ತಿಗೆ ಸಾರುವ ಪ್ರಯತ್ನದ ಭಾಗವಾಗಿರುವ ಉತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಸ್ರಾರು ಅಭಿಮಾನಿಗಳ ಮಧ್ಯೆ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು.ನಾಡಿನ ಸಂಸ್ಕೃತಿ ಹಾಗೂ ಪರಂಪರೆಯನ್ನು ಯುವ ಸಮುದಾಯಕ್ಕೆ ಪರಿಚಯಿಸುವ ಇಂತಹ ಉತ್ಸವಗಳು ನಿರಂತರವಾಗಿ ನಡೆಯಲಿ ಎಂಬ ಭಾವನೆ ನಮ್ಮ ಸರ್ಕಾರದ್ದಾಗಿದೆ ಎಂದು ಹೇಳಿದ ಸಿಎಂ, ಸದ್ಯ ಉತ್ಸವಕ್ಕೆ ₹3 ಕೋಟಿ ನೀಡಿದ್ದೆ. ಇನ್ನೂ ₹1 ಕೋಟಿಯ ಅಗತ್ಯವಿದೆ ಎಂದು ಹೇಳಿದ್ದು, ಆ ಹಣ ಸಹ ನೀಡುವುದಾಗಿ ಘೋಷಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಚಾಲುಕ್ಯ ಉತ್ಸವ ಒಂದು ದಶಕದಿಂದ ನಡೆದಿರಲಿಲ್ಲ, ಉತ್ಸವ ಆರಂಭಕ್ಕೆ ಮುಖ್ಯಮಂತ್ರಿಗಳು ಆಸಕ್ತಿ ತೋರಿದ್ದರ ಪರಿಣಾಮ ಇಂದು ಇಷ್ಟು ಅದ್ಧೂರಿಯಾಗಿ ಉತ್ಸವ ನಡೆಯುತ್ತಿದೆ ಎಂದು ಹೇಳಿದರು.ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಮಾತನಾಡಿ, ಅಭಿವೃದ್ಧಿಯ ಹರಿಕಾರ ಸಿದ್ದರಾಮಯ್ಯ ಅವರ ಕಾರ್ಯವೈಖರಿ ಕೊಂಡಾಡಿದರು. ಬಾದಾಮಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಹಾಗೂ ಸಂಸದ ಪಿ.ಸಿ.ಗದ್ದಿಗೌಡರ ಬಾದಾಮಿ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುವಂತೆ ಮನವಿ ಮಾಡಿದರು.ಜಿಲ್ಲಾಧಿಕಾರಿ ಸಂಗಪ್ಪ ಅವರು ಸ್ವಾಗತಿಸಿದರು. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ, ಶಾಸಕರಾದ ಜೆ.ಟಿ.ಪಾಟೀಲ, ವಿಜಯಾನಂದ ಕಾಶಪ್ಪನವರ, ಹಣಮಂತ ನಿರಾಣಿ, ರಾಜ್ಯಸಭಾ ಸದಸ್ಯ ನಾರಾಯಣ ಸಾ ಭಾಂಡಗೆ, ಉಮಾಶ್ರೀ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.