ಕೃಷ್ಣಾ ಬಿ ಸ್ಕೀಂ ಯೋಜನೆಯ ಭಾಗವಾದ ಕೆರೆ ತುಂಬಿಸುವ ಕಾರ್ಯಕ್ಕೆ ಮಾರ್ಚ್ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಿಳಿಸಿದರು.

ಯಲಬುರ್ಗಾ: ಕೃಷ್ಣಾ ಬಿ ಸ್ಕೀಂ ಯೋಜನೆಯ ಭಾಗವಾದ ಕೆರೆ ತುಂಬಿಸುವ ಕಾರ್ಯಕ್ಕೆ ಮಾರ್ಚ್ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಿಳಿಸಿದರು.

ತಾಲೂಕಿನ ಹಿರೇಅರಳಿಹಳ್ಳಿ, ಮಾಟರಂಗಿ, ಲಿಂಗನಬಂಡಿ, ಗುತ್ತೂರು ಹಾಗೂ ವಣಗೇರಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಫಲಾನುಭವಿಗಳ ಸಭೆ ಹಾಗೂ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾರ್ಚ್ ತಿಂಗಳಲ್ಲಿ ಅಂದಾಜು ₹೨೭೨ ಕೋಟಿ ವೆಚ್ಚದಲ್ಲಿ ಕ್ಷೇತ್ರದ ೨೨ ಕೆರೆ ತುಂಬಿಸುವ ಕಾರ್ಯ, ಜತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ಕೆರೆ ತುಂಬಿಸುವ ಯೋಜನೆ ಜಾರಿಗೊಂಡಿದ್ದರಿಂದ ಕ್ಷೇತ್ರದ ೨೬ ಕೆರೆಗಳಿಗೆ ನೀರು ತುಂಬಿಸಲಾಗಿದೆ. ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಿದೆ ಎಂದು ಹೇಳಿದರು. ಕುಷ್ಟಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯದ ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರದಿಂದ ಒಂದು ಲಕ್ಷ ಕೋಟಿ ಅನುದಾನ ಮಂಜೂರು ಮಾಡಿಸಿಕೊಂಡು ಬರಲಾಗುವುದು ಎಂದು ಸುಳ್ಳು ಹೇಳಿದ್ದರು. ಬಿಜೆಪಿ ನಾಯಕರು ನೀರಾವರಿ ಮಾಡುತ್ತೇವೆ ಎನ್ನುವ ಮೂಲಕ ಜನರಿಗೆ ಸುಳ್ಳು ಹೇಳುವುದೇ ಕಾಯಕ ಮಾಡಿಕೊಂಡಿದ್ದಾರೆ. ಅಣೆಕಟ್ಟು ಎತ್ತರ, ಭೂಸ್ವಾಧೀನ ಪ್ರಕ್ರಿಯೆ, ದೊಡ್ಡ ಮಟ್ಟದ ಅನುದಾನ ಹೀಗೆ ಹಲವು ರೀತಿಯ ಕೆಲಸಗಳಾಗಬೇಕು. ಇದೆಲ್ಲ ಆಗದೆ ನೀರಾವರಿ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.

ನಮ್ಮ ಪಾಲಿನ ನೀರನ್ನು ಪಡೆಯಲು ಕೆರೆ ತುಂಬಿಸಲಾಗುತ್ತಿದೆ. ಪ್ರಸಕ್ತ ಬಜೆಟ್‌ನಲ್ಲಿ ₹೨೫ ಸಾವಿರ ಕೋಟಿ ಅನುದಾನ ಮೀಸಲಿಡುತ್ತೇವೆ. ತಾಲೂಕಿನ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಲಾಗಿದೆ ಎಂದರು.

ತಹಸೀಲ್ದಾರ್ ಪ್ರಕಾಶ ನಾಶಿ, ತಾಪಂ ಇಒ ನೀಲಗಂಗಾ ಬಬಲಾದ, ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಸುಧೀರ ಕೊರ್ಲಹಳ್ಳಿ, ಮುಖಂಡರಾದ ಕೆರಿಬಸಪ್ಪ ನಿಡಗುಂದಿ, ಯಂಕಣ್ಣ ಯರಾಶಿ, ಹನುಮಂತಗೌಡ ಪಾಟೀಲ, ರಾಮಣ್ಣ ಸಾಲಭಾವಿ, ರೇವಣೆಪ್ಪ ಸಂಗಟಿ, ಡಾ. ಶಿವನಗೌಡ ದಾನರಡ್ಡಿ, ಶರಣಪ್ಪ ಗಾಂಜಿ, ಆನಂದ ಉಳ್ಳಾಗಡ್ಡಿ, ಶರಣಪ್ಪ ಉಪ್ಪಾರ, ಎಂ.ಎಫ್‌. ನದಾಫ್‌, ಪ್ರಭುರಾಜ ಹವಾಲ್ದಾರ, ಅಮರೇಶ ಕುರಬರ, ವಂಕಟೇಶ ಬೀರಲದಿನ್ನಿ, ಬಾಲಚಂದ್ರ ಸಾಲಭಾವಿ, ಹುಚ್ಚಪ್ಪ ತಳವಾರ, ಶಂಕರಗೌಡ ಪಾಟೀಲ್, ಅಧಿಕಾರಿಗಳಾದ ಮಲ್ಲಿಕಾರ್ಜುನ, ರಾಜಶೇಖರ ಮಳಿಮಠ, ಜಗನ್ನಾಥ ಜ್ಯೋತಗೊಂಡರ, ವಿಜಯಕುಮಾರ ಗೂಂಡೂರು, ಬೆಟದೇಶ ಮಾಳೆಕೊಪ್ಪ, ಅಶೋಕ ಗೌಡರ, ಪರ್ವೇಜ್, ಲಿಂಗನಗೌಡ ಪಾಟೀಲ, ಹಸೇನ, ಶಿವಶಂಕರ ಕರಡಕಲ್, ಬಸವರಾಜ ಗೊಗೇರಿ, ಚನ್ನಪ್ಪ, ಪ್ರಕಾಶ ಚೂರಿ, ಇತರರು ಇದ್ದರು.