ಪಟ್ಟಣದಲ್ಲಿ ಬೃಹತ್ ಕನಕ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಕಳೆದ ಕೆಲ ದಿನಗಳ ಹಿಂದೆ ನಿಯೋಗ ಹೋಗಿದ್ದಾಗ ಹತ್ತು ಕೋಟಿ ರು. ವೆಚ್ಚದ ಭವನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿ ನೀಡಿದ್ದಾರೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಜಗಳೂರು

ಪಟ್ಟಣದಲ್ಲಿ ಬೃಹತ್ ಕನಕ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಕಳೆದ ಕೆಲ ದಿನಗಳ ಹಿಂದೆ ನಿಯೋಗ ಹೋಗಿದ್ದಾಗ ಹತ್ತು ಕೋಟಿ ರು. ವೆಚ್ಚದ ಭವನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿ ನೀಡಿದ್ದಾರೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ರಾಜರಾಜೇಶ್ವರಿ ಕಾಲೇಜು ಬಳಿ ಗುರುವಾರ ಕುರುಬ ಸಮಾಜದ ನಿವೇಶನದಲ್ಲಿ ಕುರುಬ ಸಮಾಜದಿಂದ ಹಮ್ಮಿಕೊಂಡಿದ್ದ ೫೩೮ನೇ ಕನಕ ಜಯಂತ್ಯುತ್ಸವ ಕಾರ್ಯಕ್ರಮ ಹಾಗೂ ಖಾಲಿ ನಿವೇಶನದಲ್ಲಿ ಹಾಲು ಉಕ್ಕಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮುದಾಯದ ಒಗ್ಗಟ್ಟು ನಿಜಕ್ಕೂ ಶ್ಲಾಘನೀಯ. ಸಮುದಾಯದವರು ನಿವೇಶನದ ಅಗತ್ಯ ದಾಖಲೆಗಳನ್ನು ಶೀಘ್ರದಲ್ಲಿ ತಯಾರಿಸಿಕೊಳ್ಳಿ. ಹಾಸ್ಟೆಲ್ ನಿರ್ಮಾಣಕ್ಕೂ ನಾನು ವೈಯಕ್ತಿಕವಾಗಿ ಧನಸಹಾಯದೊಂದಿಗೆ ಕೈಜೋಡಿಸುವೆ ಎಂದು ಭರವಸೆ ನೀಡಿದರು.

ಆಯಾ ಸಮುದಾಯಗಳು ಅವರವರ ಸ್ವಂತ ನಿವೇಶನಗಳಲ್ಲಿ ಸಮುದಾಯದ ದಾರ್ಶನಿಕರ ಜಯಂತಿ ಕಾರ್ಯಕ್ರಮ ಅಚರಿಸುತ್ತಿರುವುದು ಹರ್ಷ ತಂದಿದೆ. ಜಗತ್ತಿನಲ್ಲಿ ಜಾತಿಗಳು ಹಡಗಿನ ಕೊಠಡಿಗಳಿದ್ದಂತೆ ಬಿರುಕು ಬಿಟ್ಟು ಹಡಗು ನೀರಿನಲ್ಲಿ ಮುಳುಗುವಂತೆ ಸಮುದಾಯಗಳು ವೈಮನಸ್ಸಿನಿಂದ ಸಮುದಾಯದ ಒಗ್ಗಟ್ಟು ಒಡೆದುಹೋಗದಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಜಿಪಂ ಮಾಜಿ ಸದಸ್ಯ ಸೊಕ್ಕೆ ನಾಗರಾಜ್ ಮಾತನಾಡಿ, ಸಮುದಾಯದ ಮುಖಂಡರಾದ ಸಿದ್ದಯ್ಯ ಒಡೆಯರ್ ಸಹಕಾರದಿಂದ ಸಮುದಾಯಕ್ಕೆ ೨ಎಕರೆ ಜಮೀನು ಸಿಕ್ಕಿದೆ. ಸ್ವಾಭಿಮಾನದಿಂದ ಖರೀದಿ ಮಾಡಿದ ಎರಡು ಎಕರೆ ಜಮೀನಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಬಿ.ದೇವೇಂದ್ರಪ್ಪ ಮುಂದಾಗಿದ್ದಾರೆ. ಇದರಿಂದ ತಾಲೂಕಿನ ಬಡವಿದ್ಯಾರ್ಥಿಗಳಿಗೆ ವಸತಿನಿಲಯ, ಇತರೆ ಕಲ್ಯಾಣ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ ಎಂದರು.

ಕೆಪಿಸಿಸಿ ಎಸ್‌ಟಿ ಘಟಕದ ಮಾಜಿ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ಪ್ರತಿಯೊಂದು ಸಮುದಾಯದಗಳು ಒಗ್ಗೂಡಿ ಮಹಾನೀಯರ ಜಯಂತಿ ಆಚರಿಸಬೇಕು. ಶಿಕ್ಷಣ ಪಡೆದು ಯುವಕರು ಜಾಗೃತರಾಗಬೇಕು ಮಹಾನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಯುವ ಮುಖಂಡ ಬಿಸ್ತುವಳ್ಳಿ ಬಾಬು ಮಾತನಾಡಿ, ಶಾಸಕ ಬಿ.ದೇವೇಂದ್ರಪ್ಪ ಅವರು ಭವನ ವಂಚಿತ ಪ್ರತಿ ಸಮುದಾಯದೊಂದಿಗೆ ಸಚಿವಸಂಪುಟದತ್ತ ನಿಯೋಗ ತೆರಳಿ ಭವನ ನಿರ್ಮಾಣಕ್ಕೆ ಅನುದಾನ ತರುತ್ತಿರುವ ಜನಪರ ಕಾಳಜಿಗೆ ಪಕ್ಷಾತೀತವಾಗಿ ಕೃತಜ್ಞತೆ ಸಲ್ಲಿಸಬೇಕಿದೆ ಎಂದರು.

ಕುರುಬ ಸಮಾಜದ ತಾಲೂಕು ಅಧ್ಯಕ್ಷ ಓಮಣ್ಣ, ಕುರುಬ ಸಮಾಜದ ಮುಖಂಡರಾದ ಎಲ್.ಬಿ.ಭೈರೇಶ್, ಡಾ.ಉದಯಶಂಕರ ಒಡೇಯರ್, ಸಿದ್ದಯ್ಯ ಒಡೇಯರ್, ಸಾಗರ ಅಂಜಿನಪ್ಪ, ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಕೆಪಿಸಿಸಿ ಎಸ್.ಟಿ ಘಟಕದ ರಾಜ್ಯಪ್ರಧಾನ ಕಾರ್ಯದರ್ಶಿ ಎಂ.ಡಿ ಕೀರ್ತಿಕುಮಾರ್, ನಿಜಲಿಂಗಪ್ಪ, ಸುಧಾ, ಗೌರಿಪುರ ನಾಗರಾಜ್, ಬಸಜ್ಜ, ಸಾಹುಕಾರ್, ಶಿಕ್ಷಕ ಸಿದ್ದಲಿಂಗಪ್ಪ ,ಮಹೇಶ್ವರಪ್ಪ, ಪಲ್ಲಾಗಟ್ಟೆ ಶೇಖರಪ್ಪ, ಮಧು ಶಂಕರ್ ಅನೇಕರು ಇದ್ದರು.